More

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ; ಕರ್ನಾಟಕಕ್ಕೆ ಸತತ 4ನೇ ಜಯ, ನಾಕೌಟ್ ಪ್ರವೇಶ ಖಚಿತ

    ಗುವಾಹಟಿ: ಆಲ್ರೌಂಡ್ ನಿರ್ವಹಣೆ ತೋರಿದ ಮಾಜಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 4ನೇ ಜಯ ದಾಖಲಿಸಿ ನಾಕೌಟ್ ಪ್ರವೇಶ ಖಾತ್ರಿಪಡಿಸಿಕೊಂಡಿತು. ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಬರೋಡ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಎಲೈಟ್ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ ತಂಡ, ಮಂಗಳವಾರ ನಡೆಯಲಿರುವ ಲೀಗ್ ಹಂತದ ತನ್ನ ಕಡೇ ಪಂದ್ಯದಲ್ಲಿ ಬಂಗಾಳ ತಂಡವನ್ನು ಮಣಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಗುಂಪಿನ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಬೇಕಾಗುತ್ತದೆ.

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬರೋಡ ತಂಡ, ವೇಗಿ ವೈಶಾಕ್ ವಿಜಯ್‌ಕುಮಾರ್ (34ಕ್ಕೆ 2) ಹಾಗೂ ಕೆ.ಗೌತಮ್ (17ಕ್ಕೆ 2) ಮಾರಕ ದಾಳಿಗೆ ನಲುಗಿ 7 ವಿಕೆಟ್‌ಗೆ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ, ದೇವದತ್ ಪಡಿಕಲ್ (56 ರನ್, 47 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 137 ರನ್ ಗಳಿಸಿ ಜಯದ ನಗೆ ಬೀರಿತು. ಆರಂಭಿಕರಾದ ಮಯಾಂಕ್ ಅಗರ್ವಾಲ್ (28 ರನ್, 25 ಎಸೆತ, 4 ಬೌಂಡರಿ) ಹಾಗೂ ಪಡಿಕಲ್ ಮೊದಲ ವಿಕೆಟ್‌ಗೆ 73 ರನ್ ಜತೆಯಾಟವಾಡಿ ರಾಜ್ಯ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಿನಾದ್ ರಾಥ್ವ ಎಸೆತದಲ್ಲಿ ಮಯಾಂಕ್ ಬೌಲ್ಡ್ ಆದರೆ, ನಾಯಕ ಮನೀಷ್ ಪಾಂಡೆ (3) ನಿರಾಸೆ ಅನುಭವಿಸಿದರು. ಬಳಿಕ ಕರುಣ್ ನಾಯರ್ (36*ರನ್, 25 ಎಸೆತ, 4 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು.

    ಬರೋಡ: 7 ವಿಕೆಟ್‌ಗೆ 134 (ಭಾನು ಪಾನಿಯ 36, ಪಾರ್ಥ್ ಕೊಹ್ಲಿ 24, ಧ್ರುವ್ ಪಟೇಲ್ 23, ವೈಶಾಕ್ ವಿಜಯ್‌ಕುಮಾರ್ 34ಕ್ಕೆ 2, ಕೆ.ಗೌತಮ್ 17ಕ್ಕೆ 2, ಜೆ.ಸುಚಿತ್ 26ಕ್ಕೆ 1), ಕರ್ನಾಟಕ: 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 137 (ಮಯಾಂಕ್ ಅಗರ್ವಾಲ್ 28, ದೇವದತ್ ಪಡಿಕಲ್ 56, ಕರುಣ್ ನಾಯರ್ 36*, ನಿನಾದ್ ರಾಥ್ವ 15ಕ್ಕೆ 2).

    ಮುಂದಿನ ಎದುರಾಳಿ: ಬಂಗಾಳ, ಯಾವಾಗ: ಮಂಗಳವಾರ, ಸಮಯ: ಮಧ್ಯಾಹ್ನ 12ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts