More

    ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂಪಾಯಿ, ಪ್ರತಿ ತಿಂಗಳೂ ಮಕ್ಕಳಿಗೆ ಎರಡು ‘ಸಂಭ್ರಮ ಶನಿವಾರ’

    ಬೆಂಗಳೂರು: ರಾಜ್ಯದ ಈ ಸಲದ ಮುಂಗಡ ಪತ್ರವನ್ನು ಆರು ವಲಯಗಳಲ್ಲಿ ವಿಂಗಡಿಸಿ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಸರಿ ಸುಮಾರು 72 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮೀಸಲಿಟ್ಟಿದ್ದಾರೆ.

    ಈ ಪೈಕಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡುವ ಘೋಷಣೆಯನ್ನೂ ಅವರು ಮಾಡಿದ್ದಾರೆ. ಇದೇ ರೀತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿದೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ ನೀಡುವುದು, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ.

    ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ ಕೈಗೊಂಡಿದ್ದು, 60 ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.

    ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಹಂಚಿಕೆ ಮಾಡಿರುವ ಸರ್ಕಾರ, ನಬಾರ್ಡ್ ಸಹಯೋಗದಲ್ಲಿ 758 ಕೋಟಿ ರೂ. ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದೆ.

    ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ತಲಾ ಮೂರು ಶಾಲೆಗಳ ದತ್ತು ಸ್ವೀಕಾರ ಮತ್ತು ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ ತೆಗೆದುಕೊಳ್ಳುವ ಯೋಜನೆ ಘೋಷಿಸಿರುವ ಸಿಎಂ ಬಿಎಸ್​ವೈ, ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, “ಸಂಭ್ರಮ ಶನಿವಾರ” ಆಚರಣೆಯನ್ನೂ ಘೋಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts