More

    ಸ್ವಾಭಿಮಾನಿ ರೈತ ಗುರುತಿನ ಚೀಟಿ 70 ಲಕ್ಷ ಮಂದಿಗೆ ಅನುಕೂಲ: ಸಚಿವ ಬಿ.ಸಿ.ಪಾಟೀಲ್

    ಕಾರ್ಕಳ: ಸ್ವಾಭಿಮಾನಿ ರೈತ ಎಂಬ ಗುರುತಿನ ಚೀಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, 70 ಲಕ್ಷ ರೈತರು ಇದರ ಫಲಾನುಭವಿಗಳಾಗಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
    ಕುಕ್ಕುಂದೂರು ಗ್ರಾಮ ಪಂಚಾಯಿತಿ ಮೈದಾನದಲ್ಲಿ ಸೋಮವಾರ ‘ಕಾರ್ಲ ಕಜೆ’ ಮುದ್ರಾಂಕ ಬಿಡುಗಡೆಗೊಳಿಸಿದ ಅವರು, ಕಾರ್ಡಿನಲ್ಲಿ ರೈತರ ಎಲ್ಲ ಮಾಹಿತಿ ಅಡಕವಾಗಿರುತ್ತದೆ. ಆರ್.ಟಿ.ಸಿ. ಇತರ ದಾಖಲೆ ಪತ್ರಗಳನ್ನು ಕಚೇರಿ ಹಿಡಿದುಕೊಂಡು ಅಲೆದಾಡುವ ಪ್ರಮೇಯ ಇರುವುದಿಲ್ಲ. ಆ ಕಾರ್ಡ್ ರೈತರ ಪಾಲಿಗೆ ದೊರೆತಾಗ ಸ್ವಾಭಿಮಾನಿ ರೈತ ಎಂದು ಎದೆ ತಟ್ಟಿ ಹೇಳಿಕೊಳ್ಳಬಹುದು ಎಂದರು.

    ರೈತರು ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳಿತು. ಸಾವಯವದಿಂದ ಇಳುವರಿ ಕಡಿಮೆ ಎಂಬುದು ಸುಳ್ಳು. ಸಾವಯವ ಕೃಷಿಯಿಂದ ಉತ್ತಮ ಆಹಾರ ಪಡೆಯಬಹುದು. ಸಾವಯವ ಗೊಬ್ಬರಕ್ಕೆ ಜಾನುವಾರು ಹಾಗೂ ಕುರಿ ಸಾಕಣೆ ಅಗತ್ಯವಿದೆ. ಈ ಮೂಲಕ ಮಣ್ಣಿನಲ್ಲಿ ಸಾವಯವ ಹೆಚ್ಚಿಸಬಹುದು ಎಂದು ಹೇಳಿದರು.

    ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಮಣ್ಣು ಪರೀಕ್ಷೆ ಘಟಕ ಆರಂಭಿಸುವ ಯೋಜನೆ ರಾಜ್ಯ ಸರ್ಕಾರದ ಮುಂದಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

    ಎಲ್ಲ ಜಿಲ್ಲೆಗಳಿಗೂ ಕೃಷಿ ಸಂಜೀವಿನಿ: ಕೃಷಿ ಸಂಜೀವಿನಿ ಮೂಲಕ ರೈತರ ಹೊಲಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಮಾರ್ಗದರ್ಶನ ನೀಡಲಾಗುವುದು. ಹೀಗಾಗಲೇ 40 ವಾಹನಗಳನ್ನು ಅದಕ್ಕಾಗಿ ವಿನಿಯೋಗಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 20 ವಾಹನಗಳನ್ನು 20 ರೈತ ಕೇಂದ್ರಕ್ಕೆ ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ ಈ ಯೋಜನೆ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಚನೆ ಇದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ಇಸ್ರೇಲ್ ಅಲ್ಲ, ಕೋಲಾರ ಮಾದರಿ
    ಕೃಷಿ ಕ್ಷೇತ್ರದಲ್ಲಿ ಇಸ್ರೇಲ್‌ಗಿಂತ ಕೋಲಾರ ವಿಶ್ವಕ್ಕೆ ಮಾದರಿಯಾಗಲಿ. ಇಸ್ರೇಲ್ ಮಾದರಿ ಹೆಚ್ಚು ಸದ್ದು ಮಾಡುತ್ತಿದ್ದು, ಕೋಲಾರದ ಕೃಷಿಕರು ಕಡಿಮೆ ಮಳೆಯಲ್ಲಿ ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಹೆಚ್ಚು ಬೆಳೆ ಬೆಳೆಸಿ, ಹೆಚ್ಚು ಉತ್ಪಾದನೆ ಪಡೆಯುತ್ತಿದ್ದಾರೆ. ಈ ಮಾದರಿ ವೀಕ್ಷಿಸಲು ಪ್ರತೀ ಜಿಲ್ಲೆಗೊಂದರಂತೆ ಬಸ್ಸಿನ ವ್ಯವಸ್ಥೆಯನ್ನು ಕೃಷಿ ಇಲಾಖೆಯಿಂದ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts