More

    ತೆರವಾಗದ ಕರಾವಳಿ ಉತ್ಸವ ಮೈದಾನ

    ಪಿ.ಬಿ.ಹರೀಶ್ ರೈ ಮಂಗಳೂರು 
    ಕರಾವಳಿ ಉತ್ಸವ ಮುಗಿದು 15 ದಿನ ಕಳೆದರೂ, ಮೈದಾನ ತೆರವಾಗಿಲ್ಲ. ಅಮ್ಯೂಸ್‌ಮೆಂಟ್ ಪಾರ್ಕ್‌ನ ಪರಿಕರಗಳನ್ನು ಮೈದಾನದಿಂದ ಹೊರಗೆ ಸಾಗಿಸದಂತೆ ಸೆಕ್ಯುರಿಟಿಯವರು ಕಾಯುತ್ತಿದ್ದಾರೆ. ಗುತ್ತಿಗೆದಾರ ಈ ವರ್ಷವೂ ಹಣ ಬಾಕಿ ಇರಿಸಿದ್ದು ಇದಕ್ಕೆ ಕಾರಣ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭ್ಯವಾಗಿದೆ.

    ಜಿಲ್ಲಾಡಳಿತವೇ ನಡೆಸುವ ಕರಾವಳಿ ಉತ್ಸವದಲ್ಲಿ ಕಳೆದ ವರ್ಷ ಅಧಿಕಾರಿಗಳು ಎಸಗಿದ ಲೋಪದಿಂದ ವಂಚನೆ ನಡೆದಿತ್ತು. ಈ ವರ್ಷ ತಪ್ಪು ಪುನರಾವರ್ತನೆಯಾಗಿದೆ. ಅಮ್ಯೂಸ್‌ಮೆಂಟ್ ಪಾರ್ಕಿನ ನಿರ್ವಹಣೆ ವಹಿಸಿದ ಗುತ್ತಿಗೆದಾರನಿಂದ ಮೈದಾನ ಹಸ್ತಾಂತರ ಮಾಡುವ ಮೊದಲು ಪೂರ್ತಿ ಹಣ ಪಾವತಿಸಬೇಕಿತ್ತು. ಗುತ್ತಿಗೆದಾರ 2 ಲಕ್ಷ ರೂ. ಬಾಕಿ ಇರಿಸಿದ್ದರಿಂದ ಹಣ ನೀಡದೆ ಪರಿಕರಗಳನ್ನು ಮೈದಾನದಿಂದ ಸಾಗಿಸಲು ಅಧಿಕಾರಿಗಳು ಬಿಡುತ್ತಿಲ್ಲ. ಉತ್ಸವ ಮುಗಿದರೂ ಸ್ಥಳೀಯ ಯುವಕರಿಗೆ ಆಡಲು ಮೈದಾನ ಇಲ್ಲವಾಗಿದೆ.

    ಬಡಪಾಯಿಗಳಿಗೆ ಶಿಕ್ಷೆ: ಉತ್ಸವದಲ್ಲಿ ಮನರಂಜನಾ ಆಟದ ಯಂತ್ರೋಪಕರಣಗಳನ್ನು ಅಳವಡಿಸಿದ್ದು ಉತ್ತರ ಭಾರತದ ತಂಡ. ಮೈದಾನವನ್ನು ಗುತ್ತಿಗೆ ಪಡೆದವರು ಇನ್ನೊಬ್ಬರು. ಬಾಕಿ ಮೊತ್ತಕ್ಕೂ ಆಟದ ಯಂತ್ರೋಪಕರಣಗಳನ್ನು ಅಳವಡಿಸಿದವರಿಗೂ ಸಂಬಂಧವಿಲ್ಲ. ಗುತ್ತಿಗೆದಾರರು ಹಣ ಬಾಕಿ ಇರಿಸಿದ ಕಾರಣಕ್ಕೆ ಈ ಸಾಮಗ್ರಿಗಳನ್ನು ಮೈದಾನದಿಂದ ಸಾಗಿಸದಂತೆ ಪಾಲಿಕೆ ಸೆಕ್ಯುರಿಟಿ ಸಿಬ್ಬಂದಿಯನ್ನು ನೇಮಿಸಿದೆ. ತಮ್ಮದಲ್ಲದ ತಪ್ಪಿಗೆ ಉತ್ತರ ಭಾರತದ ತಂಡ ಶಿಕ್ಷೆ ಅನುಭವಿಸುವಂತಾಗಿದೆ.

    16 ಲಕ್ಷ ರೂ. ಬಾಕಿ: ಕಳೆದ ವರ್ಷ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ನಡೆಸುವ ಬಗ್ಗೆ ಏಕಮಾತ್ರ ಟೆಂಡರ್ ಸಲ್ಲಿಕೆಯಾಗಿತ್ತು. 30 ಲಕ್ಷ ರೂ.ಗೆ ಏಲಂ ವಹಿಸಿದ್ದ ಗುತ್ತಿಗೆದಾರ 5 ಲಕ್ಷ ರೂ.ಮುಂಗಡ ಠೇವಣಿ ಪಾವತಿಸಿದ್ದರು. ಉಳಿದ ಮೊತ್ತಕ್ಕೆ ನೀಡಿದ ಚೆಕ್ ಬೌನ್ಸ್ ಆಗಿತ್ತು. ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ವಸ್ತು ಪ್ರದರ್ಶನ ಮುಂದುವರಿಸಲು ಅವಕಾಶ ನೀಡಿದ್ದರು. ಕೊನೆಗೆ ಗುತ್ತಿಗೆ ದಾರ 16 ಲಕ್ಷ ರೂ.ಬಾಕಿ ಇರಿಸಿದ್ದ. ಈಗಲೂ ಹಣ ವಸೂಲಿ ಆಗಿಲ್ಲ. ಕೆಲ ಅಧಿಕಾರಿಗಳು ಈ ವಂಚನೆಗೆ ಸಹಕರಿಸಿದ ಗುಮಾನಿಯೂ ಇತ್ತು.

    ನೇರ ಗುತ್ತಿಗೆ: ಈ ವರ್ಷ ವಸ್ತು ಪ್ರದರ್ಶನ ನಡೆಸಲು ಟೆಂಡರ್ ಸಲ್ಲಿಕೆಯಾಗದ ಕಾರಣ ಪಾಲಿಕೆ ವತಿಯಿಂದ ನೇರವಾಗಿ ಮಳಿಗೆಗಳನ್ನು ಹಂಚಿಕೆ ಮಾಡಲಾಗಿತ್ತು. ಅಮ್ಯೂಸ್‌ಮೆಂಟ್ ಪಾರ್ಕ್ ಮಾತ್ರ 10 ಲಕ್ಷ ರೂ.ಮೊತ್ತಕ್ಕೆ ಹೊರಗುತ್ತಿಗೆ ನೀಡಲಾಗಿತ್ತು. ಈ ಪೈಕಿ ಆತ ಪಾವತಿಸಿದ್ದು 8 ಲಕ್ಷ ರೂ. 2 ಲಕ್ಷ ರೂ. ಬಾಕಿ. ಪರಿಣಾಮ ಫೆ.23ರಂದು ಉತ್ಸವ ಮುಗಿದರೂ ಮೈದಾನ ತೆರವಾಗಿಲ್ಲ.

    ಅಮ್ಯೂಸ್‌ಮೆಂಟ್ ಪಾರ್ಕ್ ವಹಿಸಿದವರು ಹಣ ಬಾಕಿ ಇರಿಸಿದ್ದರು. ಹಾಗಾಗಿ ಮೈದಾನದಿಂದ ಸಾಮಗ್ರಿಗಳನ್ನು ಸಾಗಾಟ ಮಾಡದಂತೆ ತಡೆ ಹಿಡಿಯಲಾಗಿತ್ತು. ಈಗ ಪೂರ್ತಿ ಹಣ ಪಾವತಿಸಿದ್ದಾರೆ. ಸಾಮಾಗ್ರಿ ಸಾಗಿಸಲು ಅನುಮತಿ ನೀಡಲಾಗಿದೆ. ಒಂದೆರಡು ದಿನದಲ್ಲಿ ಮೈದಾನ ತೆರವಾಗಲಿದೆ.
    ಸಂತೋಷ್ ಕುಮಾರ್ ಜಂಟಿ ಆಯುಕ್ತ, ಮಂಗಳೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts