More

    ಆನೇಕಲ್ ಕರಗ ಕಣ್ತುಂಬಿಕೊಂಡ ಭಕ್ತರು ; ವೀರಕುಮಾರರಿಂದ ಅಲಗು ಸೇವೆ, ಕರಗ ಹೊತ್ತ ಪೂಜಾರಿ ನೃತ್ಯಕ್ಕೆ ತಲೆತೂಗಿದ ಜನ

    ಆನೇಕಲ್: ತಿಗಳ ವಹ್ನಿಕುಲದ ಸಾಂಪ್ರದಾಯಿಕ ಆಚರಣೆಯಾದ ಕರಗ ಉತ್ಸವಕ್ಕೆ ಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ದೂರಿ ಚಾಲನೆ ದೊರೆಯಿತು.

    ಪಟ್ಟಣದ ಸಂತೆಮಾಳದಲ್ಲಿರುವ ಧರ್ಮರಾಯ ದೇವಾಲಯದಿಂದ ತಡರಾತ್ರಿ 3.30ರ ಸಮಯದಲ್ಲಿ ದ್ರೌಪದಿ ದೇವಿಯ ಕರಗ ಹೊತ್ತು ಚಂದ್ರಪ್ಪ ಆಗಮಿಸಿದ ವೇಳೆ ವೀರಕುಮಾರರಿಂದ ಅಲಗು ಸೇವೆ ನಡೆಯಿತು. ಗೋವಿಂದ ನಾಮಸ್ಮರಣೆ ಮೊಳಗಿತು. ಎರಡು ವರ್ಷದಿಂದ ಕರೊನಾ ಹಿನ್ನೆಲೆಯಲ್ಲಿ ಕರಗ ಆಯೋಜಿಸಿರಲಿಲ್ಲ. ಈ ಬಾರಿಯ ಕರಗ ವೀಕ್ಷಿಸಲು ಆನೇಕಲ್ ಹಾಗೂ ಸುತ್ತಮುತ್ತಲಿನಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕರಗ ಹೊತ್ತ ಪೂಜಾರಿ ನೃತ್ಯಕ್ಕೆ ತಲೆತೂಗಿದರು. ಹಲವರು ಮೊಬೈಲ್‌ಗಳಲ್ಲಿ ೆಟೋ ಸೆರೆಹಿಡಿದು ಖುಷಿಪಟ್ಟರು.
    ಪಟ್ಟಣದ ಪ್ರಮುಖ ವೃತ್ತಗಳು ಮತ್ತು ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ಸಾಗಿತ್ತು. ರಸ್ತೆಗಳಲ್ಲಿ, ಅಕ್ಕಪಕ್ಕದ ಕಟ್ಟಡಗಳ ಮೇಲೆ ಜನರು ಕುಳಿತು ಕರಗ ವೀಕ್ಷಣೆ ಮಾಡಿದರು.

    ಪೊಲೀಸ್ ಬಂದೋಬಸ್ತ್: ಉತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಎಲ್ಲೆಡೆ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಭಕ್ತರಿಗೆ ನಿರಾಸೆ: ಕರಗ ಆಗಮಿಸುವ ಪ್ರಮುಖ ವೃತ್ತಗಳಾದ ದೇವರಕೊಂಡ ವೃತ್ತ, ಕೆಇಬಿ ಕಚೇರಿ, ಶ್ರೀರಾಮ ದೇವಾಲಯ ವೃತ್ತ, ಭಜನೆ ಮನೆ ಬೀದಿಗಳಲ್ಲಿ ಪ್ರತಿಬಾರಿಯೂ ಕರಗ ಹೊತ್ತು ದೀಪ ಸ್ವೀಕಾರ ಮಾಡುವುದು ಹಾಗೂ ನೃತ್ಯ ಪ್ರದರ್ಶನ ವಾಡಿಕೆಯಾಗಿತ್ತು. ಆದರೆ ಈ ಬಾರಿ ಅನ್ನಪೂರ್ಣೇಶ್ವರಿ ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ಕರಗ ಹೊತ್ತ ಚಂದ್ರಪ್ಪ ತುಸು ಸುಸ್ತಾದಂತೆ ಕಂಡರು. ಹಾಗೆಯೇ ಪ್ರಮುಖ ವೃತ್ತಗಳಲ್ಲಿ ಕುಣಿಯದೆ ತೆರಳಿದ್ದರಿಂದ ಭಕ್ತರಿಗೆ ನಿರಾಸೆಯಾಯಿತು.

    ಅದ್ದೂರಿ ಕರಗಕ್ಕೆ ಸರ್ಕಾರದಿಂದ ಸಹಕಾರ: ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ಆನೇಕಲ್ ಕರಗ ಉತ್ಸವಕ್ಕೆ ತನ್ನದೆ ಆದ ಇತಿಹಾಸವಿದೆ. ಕುಲಸ್ಥರು ಹಾಗೂ ಪೂಜಾರಿ ನಡುವೆ ಒಂದಷ್ಟು ಭಿನ್ನಾಭಿಪ್ರಾಯ ಇದ್ದು, ಎಲ್ಲರೂ ಒಟ್ಟಾಗಿ ಕರಗ ನಡೆಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಭಾವನೆ. ಈ ಬಾರಿ ಚಂದ್ರಪ್ಪ ಅವರಿಗೆ ಕರಗ ಹೊರಲು ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಕರಗ ಆಚರಣೆಗೆ ಸರ್ಕಾರದಿಂದಲೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಬಿ ಶಿವಣ್ಣ, ಬಿಜೆಪಿ ಮುಖಂಡರಾದ ಟಿವಿ ಬಾಬು, ಹುಲ್ಲಳ್ಳಿ ಶ್ರೀನಿವಾಸ್, ಡಿವೈಎಸ್ಪಿ ಮಲ್ಲೇಶ್ ಇತರರು ಇದ್ದರು.

    ಕರಗ ಸಾಗಿದ ಮಾರ್ಗ: ದೇವಾಲಯದಿಂದ ಹೊರಟ ಕರಗ ಮೊದಲಿಗೆ ಶಂಕರ ಮಠದಲ್ಲಿ ಪೂಜೆ ಸ್ವೀಕರಿಸಿತು. ಬಳಿಕ ತಿಲಕ್ ವೃತ್ತ, ದೊಡ್ಡಕೆರೆ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ದೊಡ್ಡ ಬೀದಿ, ಚರ್ಚ್ ರಸ್ತೆ, ಪಸುವಲಪೇಟೆ, ಹುಳ್ಳಿತಿಗಳರ ಬೀದಿ, ಹೂವಾಡಿಗರ ಬೀದಿಗಳ ಮೂಲಕ ಹಾದು ಅನ್ನಪೂರ್ಣೇಶ್ವರಿ ಟಾಕೀಸ್ ವೃತ್ತ, ಯಲ್ಲಮ್ಮ ದೇವಾಲಯ, ದೇವರಕೊಂಡಪ್ಪ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ಭಾನುವಾರ ಬೆಳಗ್ಗೆ 6.30ರ ಸುಮಾರಿಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts