More

    ಹಾಸ್ಯ ಮತ್ತು ಭಾವುಕತೆಯ ರಜಾದಿನ; ಮಂಗಳವಾರ ರಜಾದಿನ ಸಿನಿಮಾ ವಿಮರ್ಶೆ

    • ಚಿತ್ರ: ಮಂಗಳವಾರ ರಜಾದಿನ
    • ನಿರ್ಮಾಣ: ತ್ರಿವರ್ಗ ಫಿಲಂಸ್
    • ನಿರ್ದೇಶನ: ಯುವಿನ್
    • ತಾರಾಗಣ: ಚಂದನ್ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ಲಾಸ್ಯಾ ನಾಗರಾಜ್, ರಜನಿಕಾಂತ್, ಜಹಂಗೀರ್.

    ಬೆಂಗಳೂರು: ಕಥಾನಾಯಕನಿಗೆ ‘ಕಿಚ್ಚ’ ಸುದೀಪ್ ಅವರ ಹೇರ್ ಸ್ಟೈಲ್ ಮಾಡಬೇಕೆಂಬ ಮಹದಾಸೆ. ಚಿಕ್ಕಂದಿನಲ್ಲಿ ಶಾಲೆಯಲ್ಲಿ ಶಿಕ್ಷಕರು , ‘ಕುಮಾರ್ ದೊಡ್ಡವನಾದ ಮೇಲೆ ಏನಾಗ್ತಿಯಾ ?’ ಎಂದು ಕೇಳಿದಾಗ, ಆತ ಅದನ್ನೇ ಹೇಳಿರುತ್ತಾನೆ. ಆ ಆಸೆಯನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿ ಏನೆಲ್ಲ ಪ್ರಹಸನ ನಡೆಯುತ್ತದೆ ಎಂಬುದೇ ‘ಮಂಗಳವಾರ ರಜಾದಿನ’ ಚಿತ್ರ. ಆಗಾಗ ಕಚಗುಳಿ ಇಡುವ ಡಬಲ್ ಮೀನಿಂಗ್ ಡೈಲಾಗು, ಹೊಟ್ಟೆ ಹುಣ್ಣಾಗುವಷ್ಟು ನಗು, ಒಂದಷ್ಟು ಭಾವುಕತೆ, ಅಪ್ಪ- ಮಗನ ಬಾಂಧವ್ಯ; ಇವೆಲ್ಲ ಕುಮಾರನ (ಚಂದನ್ ಆಚಾರ್) ಕಟಿಂಗ್ ಶಾಪ್​ನಲ್ಲಿನ ಸರಕುಗಳು. ಇದನ್ನಿಟ್ಟುಕೊಂಡು ‘ಮಂಗಳವಾರ ರಜಾದಿನ’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಯುವನ್. ಸಹಜವಾಗಿ ಕಟಿಂಗ್ ಶಾಪ್​ಗಳಿಗೆ ಮಂಗಳವಾರ ರಜಾದಿನ. ಅದನ್ನೇ ಸಿನಿಮಾ ಶೀರ್ಷಿಕೆಯಾಗಿ ಮಾಡಿಕೊಂಡು, ಅದರ ಸುತ್ತ ಕಥೆ ಹೆಣೆದು ಕಮರ್ಷಿಯಲ್ ಅಂಶಗಳನ್ನು ತುಂಬಿ ಪ್ರೇಕ್ಷಕರ ಮುಂದಿಟ್ಟಿರುವ ನಿರ್ದೇಶಕರು, ಅದನ್ನು ಅಷ್ಟೇ ಚೆಂದವಾಗಿ ಸಿಂಗಾರ ಮಾಡಿದ್ದಾರೆ. ಮಿಡಲ್ ಕ್ಲಾಸ್ ಕುಮಾರನ ಆಸೆಯ ಜತೆಗೆ ಆತನ ಸುತ್ತಲಿನ ಸಂಬಂಧಗಳ ಕಪಾಟುಗಳನ್ನು ತೆರೆದು ಅದರಲ್ಲಿನ ಏರಿಳಿತಗಳನ್ನು ರಜಾದಿನದಲ್ಲಿ ಭರ್ತಿ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯವೇ ಹೈಲೈಟ್ ಆಗಿರುವುದರಿಂದ, ಆ ಭಾಗಕ್ಕೆ ನಿರ್ದೇಶಕರು ಹೆಚ್ಚಿನ ಸ್ಪೇಸ್ ನೀಡಿದ್ದಾರೆ. ಮೊದಲಾರ್ಧ ಪೋಲಿಪೋಲಿಯಾಗಿ ನಗು ಉಕ್ಕಿಸುತ್ತ ಹೋಗುವ ಕಥಾನಾಯಕ, ದ್ವಿತೀಯಾರ್ಧಕ್ಕೆ ಬರುವ ವೇಳೆಗೆ ಪ್ರೇಕ್ಷಕನನ್ನು ಭಾವುಕತೆಗೆ ನೂಕುತ್ತಾನೆ. ಇತ್ತ ಮಾರ್ಟಿನ್ ಲೂಥರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಜಹಂಗೀರ್, ಬೇರೆಯವರ ಕಥೆ ಕೇಳುತ್ತ ತನ್ನದೇ ನೋವಿನ ಕಥೆಯೊಳಗೆ ಪ್ರೇಕ್ಷಕನನ್ನು ಇಳಿಸುತ್ತಾನೆ. ಈ ಕಥೆಯಲ್ಲಿ ಶೀತಲ್ (ಲಾಸ್ಯಾ ನಾಗರಾಜ್) ಮತ್ತು ಅಭಿ (ರಜನಿಕಾಂತ್) ಪಾಲುದಾರರಾಗಿ ಕೊಟ್ಟ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಇನ್ನು ಚಿತ್ರದ ಮುಖ್ಯ ಪಿಲ್ಲರ್ ಎಂದರೆ ಅದು ಮಾದೇವ (ಗೋಪಾಲಕೃಷ್ಣ ದೇಶಪಾಂಡೆ). ಅಪ್ಪನಾಗಿ ತೆರೆಮೇಲೆ ಕಾಣಿಸುವ ಅವರು, ಹತಾಶೆ, ಕಾಳಜಿ, ನೋವು, ಎಲ್ಲವನ್ನೂ ನೈಜ ಅಭಿನಯದ ಮೂಲಕವೇ ತೋರ್ಪಡಿಸಿದ್ದಾರೆ. ಯೋಗರಾಜ್ ಭಟ್ ಬರೆದ ಶೀರ್ಷಿಕೆ ಗೀತೆ ಮಜವಾಗಿದೆ. ಛಾಯಾಗ್ರಹಣ ಮತ್ತು ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಹಾಸ್ಯ ಮತ್ತು ಭಾವುಕತೆಯೇ ಈ ಸಿನಿಮಾದ ಬಂಡವಾಳವಾಗಿರುವುದರಿಂದ ಅದನ್ನಷ್ಟೇ ಗಮನದಲ್ಲಿಟ್ಟುಕೊಂಡು ಸಿನಿಮಾ ನೋಡಿದರೆ, ನಿಮಗೆ ‘ಮಂಗಳವಾರ ರಜಾದಿನ’ ಖಂಡಿತ ಮಜಾ ಕೊಡುತ್ತದೆ.

    ಕಾಣದ ನೆರಳಲ್ಲಿ ಆತ್ಮದ ಆಟ; ಶ್ಯಾಡೊ ಸಿನಿಮಾ ವಿಮರ್ಶೆ

    ವಿಕ್ರಮನ ಸಾಹಸಗಳು; ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts