More

    ಸಪ್ತಪದಿಗೆ ಆರ್ಥಿಕ ಸಮಸ್ಯೆ: ಕನಕಾಚಲಪತಿ ದೇವಸ್ಥಾನದಲ್ಲಿ ಹಣದ ಕೊರತೆ, ಕೇವಲ 50 ಜೋಡಿಗೆ ಅವಕಾಶ

    ಕನಕಗಿರಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಹಣದ ಕೊರತೆ ಎದುರಾಗಿದೆ. ಹೀಗಾಗಿ ಈ ಬಾರಿ 50 ಜೋಡಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅರ್ಜಿ ನೀಡುವುದನ್ನು ನಿಲ್ಲಿಸಲಾಗಿದೆ.

    ಬಡ ಕುಟುಂಬಗಳಿಗೆ ನೆರವಾಗಲು 2020ರಲ್ಲಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳಲ್ಲಿ ಸಪ್ತಪದಿ ಹೆಸರಿನಡಿ ಸಾಮೂಹಿಕ ವಿವಾಹ ನಡೆಸಲು ಮುಂದಾಗಿತ್ತು. ಮದುವೆ ವೆಚ್ಚವನ್ನು ದೇವಸ್ಥಾನವೇ ಭರಿಸುವ ಯೋಜನೆ ಇದಾಗಿತ್ತು. ಆಗ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 352 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 264 ಅರ್ಜಿದಾರರು ಎಲ್ಲ ದಾಖಲೆೆ ಸಲ್ಲಿಸಿ ಸಪ್ತಪದಿ ತುಳಿಯಲು ಮುಂದಾಗಿದ್ದರು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಲಿಲ್ಲ. ಕಳೆದ ವರ್ಷ 22 ಜೋಡಿಗಳಿಗೆ ಮಾಂಗಲ್ಯ ತಂದಿದ್ದರೆ 11 ಜೋಡಿಗಳು ಮಾತ್ರ ಸಪ್ತಪದಿ ತುಳಿದಿದ್ದವು.

    ಸದ್ಯ ದೇವಸ್ಥಾನದಲ್ಲಿ ಎರಡನೇ ಹಂತದ ಸಪ್ತಪದಿಗೆ ದಿನಾಂಕ (ಆ.25ರಂದು) ನಿಗದಿಪಡಿಸಿದ್ದು, ಅರ್ಜಿ ಸಲ್ಲಿಸಲು ಆ.8 ಕೊನೆಯ ದಿನವಾಗಿತ್ತು. ಆದರೆ, ಪ್ರಚಾರ ಕೈಗೊಳ್ಳುವ ಮುನ್ನವೇ 30 ಜೋಡಿಗಳು ಅರ್ಜಿಗಳು ಸಲ್ಲಿಕೆಯಾಗಿದ್ದವು.ಇದರಿಂದ ಯೋಜನೆಯ ಪ್ರಚಾರಕ್ಕಾಗಿ ಮುದ್ರಿಸಿದ್ದ ಫ್ಲೆಕ್ಸ್‌ಗಳನ್ನು ಅಳವಡಿಸಿಲ್ಲ. ಅಧಿಕಾರಿಗಳು ಇನ್ನು 20 ಜೋಡಿಗಳಿಗೆ ಅವಕಾಶ ನೀಡಿದ್ದು, ಎರಡೇ ದಿನಗಳಲ್ಲಿ 20 ಅರ್ಜಿ ನೀಡಲಾಗಿದೆ. ಇದರಿಂದಾಗಿ ಜು.19ಕ್ಕೆ ಅರ್ಜಿ ನೀಡುವುದನ್ನು ಸ್ಥಗಿತಗೊಳಿಸಿರುವ ದೇವಸ್ಥಾನದ ಆಡಳಿತ ಮಂಡಳಿ, ಜು.30ರಂದು ಈಗಾಗಲೇ ಪಡೆದ ಅರ್ಜಿಗಳನ್ನು ಅಗತ್ಯ ದಾಖಲೆ ಸಮೇತ ಸಲ್ಲಿಸಲು ಸೂಚಿಸಿದೆ.

    ಖಾತೆಯಲ್ಲಿ ಎಷ್ಟು ದುಡ್ಡಿದೆ?: ಸಪ್ತಪದಿ ಸರ್ಕಾರದ ಯೋಜನೆಯಾದರೂ ದೇವಸ್ಥಾನದ ಖಾತೆಯಲ್ಲಿರುವ ಕಾಣಿಕೆ, ಮಳಿಗೆ ಬಾಡಿಗೆ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹವಾದ ಹಣವನ್ನೇ ಬಳಸಬೇಕು. ಒಂದು ಜೋಡಿಗೆ ಕನಿಷ್ಠ 65 ರಿಂದ 70 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ದೇವಸ್ಥಾನದ ಖಾತೆಯಲ್ಲಿ 32 ಲಕ್ಷ ರೂ. ಮಾತ್ರ ಇದ್ದು, ಹೆಚ್ಚು ಅರ್ಜಿ ನೀಡಿದರೆ ಹೊರೆಯಲಾಗಲಿದೆ. ಆದ್ದರಿಂದ 50 ಜೋಡಿಗಳಿಗೆ ಆಡಳಿತ ಮಂಡಳಿ ಸೀಮಿತಗೊಳಿಸಿದೆ.


    ದೇವಸ್ಥಾನದಲ್ಲಿ ಹಣದ ಕೊರತೆ ಇದೆ. ಒಂದು ಮದುವೆಗೆ 65 ರಿಂದ 75 ಸಾವಿರ ರೂ. ಖರ್ಚಾಗುತ್ತದೆ. ಆದ್ದರಿಂದ 50 ಜೋಡಿಗಳ ಮದುವೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆ ಸಮೇತ ಸ್ವೀಕರಿಸುತ್ತಿದ್ದೇವೆ. ಮುಂದಿನ ವರ್ಷವೂ ಕಾರ್ಯಕ್ರಮ ನಡೆಸಲಾಗುವುದು.
    | ಧನಂಜಯ ಮಾಲಗಿತ್ತಿ ತಹಸೀಲ್ದಾರ್, ಕನಕಾಚಲ ದೇವಸ್ಥಾನದ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts