More

    ದರೋಜಿ-ಬಾಗಲಕೋಟೆ ರೈಲ್ವೆ ಮಾರ್ಗ ನಮ್ಮ ಹಕ್ಕು: ಹೋರಾಟದ ಸಂಚಾಲಕ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿಕೆ

    ಕನಕಗಿರಿ: ದರೋಜಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣವಾದರೆ ಪ್ರವಾಸೋದ್ಯಮ, ಶಿಕ್ಷಣದ ಅಭಿವೃದ್ಧಿ ಜತೆಗೆ ಕೈಗಾರಿಕೆಗಳ ಸ್ಥಾಪನೆ, ರೈತರ ಉತ್ಪನ್ನ ಸಾಗಣೆಗೆ ಅನುಕೂಲವಾಗಲಿದೆ. ಹೀಗಾಗಿ ರೈಲ್ವೆ ಮಾರ್ಗ ಪಡೆಯುವುದು ನಮ್ಮ ಹಕ್ಕಾಗಿದೆ ಎಂದು ದರೋಜಿ-ಬಾಗಲಕೋಟೆ ನೂತನ ರೈಲ್ವೆ ಮಾರ್ಗ ಹೋರಾಟದ ಸಂಚಾಲಕ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.

    ಪಟ್ಟಣದ ಎಪಿಎಂಸಿಯಲ್ಲಿ ಸೋಮವಾರ ಏರ್ಪಡಿಸಿದ್ದ ದರೋಜಿ- ಬಾಗಲಕೋಟೆ ರೈಲ್ವೆ ಮಾರ್ಗ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನೆರೆಯ ತಮಿಳುನಾಡು ಅತಿ ಹೆಚ್ಚು ರೈಲ್ವೆ ಸೌಲಭ್ಯ ಹೊಂದಿದ್ದರೆ, ಕರ್ನಾಟಕದಲ್ಲಿ ಕಡಿಮೆಯಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಅತಿ ವಿರಳ. ದರೋಜಿ-ಬಾಗಲಕೋಟೆ ರೈಲ್ವೆ ಮಾರ್ಗ ಆರಂಭದಿಂದ ತುಂಬ ಅನುಕೂಲವಾಗಲಿದೆ. ಈ ಬಗ್ಗೆ 2009ರಲ್ಲಿ ಆಗಿನ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದ ಅವರು, ಕನಕಗಿರಿಯ ಕನಕಾಚಲಪತಿ ಶಕ್ತಿಯುತವಾಗಿದ್ದರಿಂದ ಇಲ್ಲಿಂದಲೇ ಹೋರಾಟಕ್ಕೆ ನಾಂದಿ ಹಾಡಲಾಗುತ್ತಿದೆ. ಗಿಣಿಗೇರಾ-ಗಂಗಾವತಿ ರೈಲ್ವೆ ಮಾರ್ಗದ ಹೋರಾಟದ ಮಾದರಿಯಲ್ಲಿ ಮೂರು ಜಿಲ್ಲೆಗಳ ಜನ ಹೋರಾಡಬೇಕು. ಇದಕ್ಕೆ ಶಾಸಕರು-ಸಂಸದರ ಸಹಕಾರ ಅಗತ್ಯವಿದೆ. ಈಗಾಗಲೇ ಸಂಸದ ಸಂಗಣ್ಣ ಕರಡಿ ಒಲವು ತೋರಿಸಿದ್ದಾರೆ. ರಾಜ್ಯದ ಪಾಲಿನ ಶೇ.25 ಹಾಗೂ ಕೇಂದ್ರದ ಶೇ.75ರ ಸಹಯೋಗದಲ್ಲಿ ಈ ಯೋಜನೆ ಸಿದ್ಧಗೊಳ್ಳಬೇಕಿದ್ದು, ಮೊದಲಿಗೆ ಪಕ್ಷಾತೀತವಾಗಿ ನಿಯೋಗವು ಸಿಎಂರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

    ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಈ ಭಾಗದ ಜನರಿಗೆ ಒಳಿತಾಗುವ ಯೋಜನೆಗಳಿಗಾಗಿ ಪಕ್ಷಭೇದ ಮರೆತು ಒಂದಾಗಿ ಹೋರಾಟ ಮಾಡಬೇಕು. ದರೋಜಿ-ಬಾಗಲಕೋಟೆ ರೈಲ್ವೆ ಮಾರ್ಗದ ಬಗ್ಗೆ ಸಂಸದರು ಆಸಕ್ತಿವಹಿಸಿದ್ದು, ಶೀಘ್ರವೇ ದಿನಾಂಕ ನಿಗದಿಪಡಿಸಿ ಮುಖ್ಯಮಂತ್ರಿ ಬಳಿ ನಿಯೋಗವನ್ನು ಕರೆದೊಯ್ದು, ಡಿಪಿಆರ್ ಸಿದ್ಧಪಡಿಸಲು ಮನವಿ ಮಾಡಲಾಗುವುದು ಎಂದರು.

    ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ, ಸೂಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ, ಪ್ರಮುಖರಾದ ಚನ್ನಬಸಯ್ಯಸ್ವಾಮಿ, ಅಕ್ತರ್ ಸಾಬ್, ಮನೋಹರಸ್ವಾಮಿ ಹೇರೂರು, ಸುವರ್ಣಾ, ಹನುಮಂತಪ್ಪ ಜೋಗದ, ಪುರುಷೋತ್ತಮರೆಡ್ಡಿ ಮಾದಿನಾಳ, ಗಿರೇಗೌಡ, ನಿರ್ಲೂಟಿ ಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts