More

    ಕಂಪ್ಲಿಯಲ್ಲಿ ನವಜಾತ ಹೆಣ್ಣು ಶಿಶು ಮಾರಾಟ ಪ್ರಕರಣ ಬಯಲು: 20 ಸಾವಿರ ರೂ.ಗೆ ಪಡೆದ ರಾಮಸಾಗರದ ದಂಪತಿ

    ಕಂಪ್ಲಿ: ತಾಲೂಕಿನಲ್ಲಿ ನವಜಾತ ಹಣ್ಣು ಶಿಶು ಮಾರಾಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಮಸಾಗರ ಗ್ರಾಮದ ದಂಪತಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ 20 ಸಾವಿರ ರೂ.ಗೆ ಹೆಣ್ಣು ಮಗುವನ್ನು ಪಡೆದಿದ್ದು, ಸ್ಥಳೀಯ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಇದು ಅವಳಿ ಜಿಲ್ಲೆಯಲ್ಲಿ ಮೊದಲ ಪ್ರಕರಣವಾಗಿದೆ.

    ರಾಮಸಾಗರ ಗ್ರಾಮ ನಿವಾಸಿ ಮೌಲಮ್ಮ(46) ರಾಮಾಂಜನಿ(53) ದಂಪತಿಗೆ 20 ವರ್ಷವಾದರೂ ಮಕ್ಕಳಾಗಿಲ್ಲ. ವರ್ಷದ ಹಿಂದೆ ಗ್ರಾಮದಲ್ಲಿ ಬಾಡಿಗೆಯಿದ್ದ ಮಣಿಯಮ್ಮ ಎಂಬಾಕೆ 2021ರ ಸೆ.1ರಂದು ದಂಪತಿಗೆ ಕರೆ ಮಾಡಿ 20 ಸಾವಿರ ರೂ. ತೆಗೆದುಕೊಂಡು ಹಿರಿಯೂರಿಗೆ ಬಂದರೆ ಹೆಣ್ಣು ಮಗು ಕೊಡಿಸುವುದಾಗಿ ತಿಳಿಸಿದ್ದಾಳೆ. ಅದೇ ದಿನ ಹಿರಿಯೂರಿನ ಆಸ್ಪತ್ರೆ ಗಲ್ಲಿಯ ಬಳಿ ಮಣಿಯಮ್ಮ ಹಣ ಪಡೆದು ನವಜಾತ ಹೆಣ್ಣು ಶಿಶುವನ್ನು ನೀಡಿದ್ದಾಳೆ. ನಂತರ ದಂಪತಿ ಸ್ವಗ್ರಾಮಕ್ಕೆ ಬಂದು ಮಗುವನ್ನು ಸಾಕುತ್ತಿದ್ದರು. ಮಗುವಿಗೆ ಚುಚ್ಚುಮದ್ದು ಹಾಕಿಸಲು ಅಂಗನವಾಡಿ ಕಾರ್ಯಕರ್ತೆ ಕಲಾವತಿ ಹತ್ತಿರ ತಂದಿದ್ದಾರೆ. ಗರ್ಭಿಣಿಯಾಗಿರದ ಮೌಲಮ್ಮಳಿಗೆ ಮಗು ಹೇಗೆ ಬಂತೆಂದು ಅನುಮಾನಿಸಿದ ಕಲಾವತಿ, ಮೇಲ್ವಿಚಾರಕಿ ಉಷಾ ಸಿಂಗ್ ಹಾಗೂ ಡಿಸಿಪಿಒ ಕಚೇರಿಯ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಗಮನಕ್ಕೆ ತಂದಿದ್ದಾರೆ.

    2021ರ ನ.4ರಂದು ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮೌಲಮ್ಮ ದಂಪತಿಯನ್ನು ವಿಚಾರಿಸಿದಾಗ ಮಗು ಮಾರಾಟ ವಿಷಯ ಗೊತ್ತಾಗಿದೆ. ಬಳ್ಳಾರಿ ಬಾಲಕಿಯರ ಸರ್ಕಾರಿ ಬಾಲಮಂದಿರದ ಆವರಣದಲ್ಲಿನ ಅಮೂಲ್ಯ ಶಿಶು ಮಂದಿರದ ವಶಕ್ಕೆ ನೀಡಲಾಗಿದೆ. ನ.12ರಂದು ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಆದೇಶದಂತೆ ಎಸ್‌ಜೆಪಿ ಯೂನಿಟ್‌ನ ಲಲಿತಮ್ಮ, ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರರಾವ್, ಮೌಲಮ್ಮ ಅವರ ಮನೆಗೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ.

    ಹಣದಾಸೆಗೆ ಪಾಲಕರಿಂದ ಮಗು ಪಡೆದ ಮಣಿಯಮ್ಮ, ಹೆತ್ತ ಮಗುವನ್ನು ಮಾರಾಟ ಮಾಡಿದ ಪಾಲಕರು, ಖರೀದಿ ಮಾಡಿದ ಮೌಲಮ್ಮ ದಂಪತಿ ಹಾಗೂ ಇತರರ ವಿರುದ್ಧ ನ.16ರಂದು ಬಾಲನ್ಯಾಯ ಕಾಯ್ದೆಯಡಿ ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಎಸ್.ಉಷಾ, ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts