More

    ಕಂಬಳ ಶಿಸ್ತು, ನಿಯಮ ರೂಪಿಸಲು ಸಮಿತಿ

    ಮೂಡುಬಿದಿರೆ: ಕಂಬಳದಲ್ಲಿ ಶಿಸ್ತಿನ ಚೌಕಟ್ಟು, ನಿಯಮಗಳನ್ನು ರೂಪಿಸಲು ಭಾಸ್ಕರ್ ಕೋಟ್ಯಾನ್ ನೇತೃತ್ವದಲ್ಲಿ ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು ಸೇರಿತೆ 15 ಮಂದಿಯನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.

    ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕಂಬಳ ಸಮಿತಿಯ ಮಹಾಸಭೆಯಲ್ಲಿ ಶಿಸ್ತು, ನಿಯಮ ರೂಪಿಸುವ ಸಮಿತಿ ರಚನೆ, ಕಂಬಳ ಸಂದರ್ಭ ಲೋಪ ಸರಿಪಡಿಸಲು ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ಚರ್ಚಿಸಲಾಯಿತು.
    ತಿಂಗಳೊಳಗೆ ನಿಯಮ ರೂಪಿಸುವ ಸಮಿತಿ ರಚಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮುಂದಿನ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.

    ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಂಬಳಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು, ಯಾವುದೇ ಲೋಪಗಳಾಗದ ರೀತಿಯಲ್ಲಿ ಮುನ್ನಡೆಯಬೇಕಾಗಿದೆ. ಕಂಬಳದಲ್ಲಿ ತೀರ್ಪುಗಾರರ ಕಾಲೆಳೆಯುವ ಪ್ರಯತ್ನ ಸರಿಯಲ್ಲ ಎಂದರು.

    ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ, ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಹಲವಾರು ಹೋರಾಟಗಳಿಂದಾಗಿ ಕಂಬಳ ಉಳಿದಿದೆ. ಅದನ್ನು ಮತ್ತಷ್ಟು ಉತ್ತಮಗೊಳಿಸುವ ಜವಾಬ್ದಾರಿ ನಮ್ಮದಾಗಬೇಕು. ಸರ್ಕಾರವು ಅನುದಾನ ನೀಡುವುದರಿಂದ ಅದಕ್ಕೆ ಪೂರಕವಾಗಿ ನೀತಿ ನಿಯಮಗಳನ್ನು ರೂಪಿಸಬೇಕು ಎಂದರು.
    ಕಂಬಳ ಸಮಿತಿ ಗೌರವ ಸಲಹೆಗಾರ ಏರ್ಮಾಳು ರೋಹಿತ್ ಹೆಗ್ಡೆ, ಬಾರ್ಕೂರು ಶಾಂತಾರಾಮ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಮಾಳ, ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು. ವಿವಿಧ ಕಂಬಳ ಸಮಿತಿಯ ಪದಾಧಿಕಾರಿಗಳು, ಕೋಣಗಳ ಯಜಮಾನರು ಅಭಿಪ್ರಾಯ ತಿಳಿಸಿದರು.

    ಕರೊನಾ ಆತಂಕದ ನಡುವೆಯೂ ಈ ಬಾರಿ ಕಂಬಳ ಆಯೋಜಿಸುವಲ್ಲಿ ಕಂಬಳಕ್ಕೆ ಸಂಬಂಧಪಟ್ಟ ಎಲ್ಲ ವರ್ಗದವರ ಪ್ರೋತ್ಸಾಹ ಅಪಾರ. ರಾಜ್ಯ ಸರ್ಕಾರ ಕಂಬಳಕ್ಕೆ ಅನುದಾನ ನೀಡಲು ಪ್ರಾರಂಭಿಸಿದ್ದು, ಇದಕ್ಕೆ ಅನುಸಾರವಾಗಿ ನಿಯಮ, ಶಿಸ್ತನ್ನು ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ.
    – ಪಿ.ಆರ್.ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts