More

    ದಾಖಲೆಗಳ ಕಂಬಳ ಋತುವಿಗೆ ವಿಧ್ಯುಕ್ತ ತೆರೆ

    ಮಂಗಳೂರು: ಕಂಬಳದ ಅತಿ ವೇಗದ ಓಟಗಾರ ಅಶ್ವತ್ಥಪುರ ಶ್ರೀನಿವಾಸ ಗೌಡ ಸಾರ್ವಕಾಲಿಕ ಪದಕ ದಾಖಲೆ ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಅವರ ಕೋಣಗಳು ಗೆಲುವು ಸಾಧಿಸಿ ಚಾಂಪಿಯನ್‌ಷಿಪ್ ಅಲಂಕರಿಸುವ ಜತೆಗೆ ಈ ಸಾಲಿನ ಕಂಬಳ ಋತು ವಿಧ್ಯುಕ್ತವಾಗಿ ಮುಕ್ತಾಯಗೊಂಡಿದೆ.
    ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಮತ್ತು ಇರುವೈಲು ಪಾಣಿಲ ಬಾಡ ಪೂಜಾರಿ ಕೋಣಗಳ ನಡುವೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ತೀವ್ರ ಪೈಪೋಟಿ ಇತ್ತು. ಬಂಗಾಡಿ ಅಂತಿಮ ಕಂಬಳದಲ್ಲಿ ಬೋಳದಗುತ್ತು ಗೆಲುವು ಸಾಧಿಸುವುದರೊಂದಿಗೆ ಸತತ ಆರನೇ ವರ್ಷ ಚಾಂಪಿಯನ್‌ಷಿಪ್ ಪಡೆದುಕೊಂಡಿದೆ. ಬೋಳದಗುತ್ತು ಕೋಣಗಳು ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲಲು ಕಾರಣವಾಗಿರುವುದು ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.

    ಅಂಕದಲ್ಲಿ ಹಿಂದೆ ಇದ್ದ ಬೋಳದಗುತ್ತು ಬಂಗಾಡಿ ಕಂಬಳದಲ್ಲಿ ಚಿನ್ನ ಗೆದ್ದು 5 ಅಂಕ ಪಡೆದು ಒಟ್ಟು ಅಂಕ 39ಕ್ಕೆ ಏರಿಸುವುದರೊಂದಿಗೆ ಸರಣಿ ಶ್ರೇಷ್ಠ ಲಭಿಸಿದೆ. ಪ್ರತಿಸ್ಪರ್ಧಿ ಇರುವೈಲು 37 ಅಂಕ ಪಡೆಯಿತು. ಇದನ್ನು ಹೊರತುಪಡಿಸಿ ಉಳಿದ ವಿಭಾಗಗಳ ಸರಣಿ ಶ್ರೇಷ್ಠ ಪ್ರಶಸ್ತಿಗಳು ಹಿಂದೆಯೇ ಅಂತಿಮಗೊಂಡಿದ್ದವು. ನೇಗಿಲು ಕಿರಿಯ ವಿಭಾಗದಲ್ಲಿ ಮೂಡುಬಿದಿರೆ ನ್ಯೂ ಪಡಿವಾಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಕೋಣಗಳನ್ನು ಓಡಿಸಿದವರು ಅಶ್ವತ್ಥಪುರ ಶ್ರೀನಿವಾಸ ಗೌಡ. ಪದವು ಕಾನಡ್ಕ ಫ್ರಾನ್ಸಿಸ್ ಫ್ಲಾವಿಯೋ ಡಿಸೋಜ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಸತತ ಮೂರನೇ ವರ್ಷ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿವೆ. ಪ್ರವೀಣ್ ಕೋಟ್ಯಾನ್ ಈ ಕೋಣಗಳನ್ನು ಓಡಿಸಿದ್ದರು. ಹಗ್ಗ ಕಿರಿಯ ವಿಭಾಗದಲ್ಲಿ ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ ಕೋಣಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ. ಇವುಗಳನ್ನು ಓಡಿಸಿದವರು ಅಶ್ವತ್ಥಪುರ ಶ್ರೀನಿವಾಸ ಗೌಡ.

    ಇನ್ನು ಅಡ್ಡ ಹಲಗೆ ವಿಭಾಗದ ಚಾಂಪಿಯನ್‌ಷಿಪ್ ಬೋಳಾರ ತ್ರಿಶಾಲ್ ಪೂಜಾರಿ ಮಾಲೀಕತ್ವದ ಕೋಣಗಳ ಪಾಲಾಗಿದೆ. ಮಂದಾರ್ತಿ ಶಿರೂರು ಗೋಪಾಲ ನಾಯಕ್ ಈ ಕೋಣಗಳನ್ನು ಓಡಿಸಿದವರು. ಕನೆ ಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಗೌರವ ಬೇಲಾಡಿ ಬಾವ ಅಶೋಕ್ ಶೆಟ್ಟಿ ಕೋಣಗಳಿಗೆ ಸಿಕ್ಕಿದೆ. ಈ ಕೋಣಗಳನ್ನು ಓಡಿಸಿದವರು ನಾರಾವಿ ಯುವರಾಜ ಜೈನ್.

    ಶ್ರೀನಿವಾಸ ಗೌಡ ಸಾರ್ವಕಾಲಿಕ ದಾಖಲೆ
    ಅತಿ ವೇಗದ ಓಟದ ಮೂಲಕ ವಿಶ್ವದ ಗಮನ ಸೆಳೆದ ಅಶ್ವತ್ಥಪುರ ಶ್ರೀನಿವಾಸ ಗೌಡ 33 ಚಿನ್ನ, 13 ಬೆಳ್ಳಿ ಸಹಿತ 46 ಪದಕಗಳೊಂದಿಗೆ ಕಂಬಳದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 42 ಪದಕ ಪಡೆದಿದ್ದ ಅವರು ಬಂಗಾಡಿ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ, ಕಿರಿಯ ವಿಭಾಗದಲ್ಲಿ ಪ್ರಥಮ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಈ ಸಾಧನೆ ಮಾಡಿದ್ದಾರೆ. ಒಂದು ಕಂಬಳ ಋತುವಿನಲ್ಲಿ 35 ಪದಕ ಗೆದ್ದಿರುವುದು ಇದುವರೆಗಿನ ದಾಖಲೆಯಾಗಿತ್ತು. ಜತೆಗೆ ಹಗ್ಗ ಕಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ 14 ಸ್ವರ್ಣ, 1 ಬೆಳ್ಳಿ ಪದಕ ಸಹಿತ 15 ಪದಕ ಗೆದ್ದಿರುವುದೂ ದಾಖಲೆಯಾಗಿದೆ. ಉಪ್ಪಿನಂಗಡಿ ಕಂಬಳದಲ್ಲಿ ದ್ವಿತೀಯ ಸ್ಥಾನ ಬಂದಿದ್ದರಿಂದ ಎಲ್ಲ 15 ಸ್ಚರ್ಣ ಪದಕ ಪಡೆಯುವುದು ಕೈತಪ್ಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts