More

    ಕಲ್ಪನಾ ಚಾವ್ಲಾ ಪುಣ್ಯಸ್ಮರಣೆ ಇಂದು | ಆ 16 ನಿಮಿಷ…

    ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹಿನ್ನೆಲೆ, ಶಿಕ್ಷಣದ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ ಅಲ್ಲವೆ? ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಭೂಮಿಯ ಮೇಲೆ ಇಳಿಯುವ ಸಂದರ್ಭದಲ್ಲಿ ಅವರಿದ್ದ ನೌಕೆ ಸುಟ್ಟು ಭಸ್ಮವಾದ ದಿನವಿದು. ಭಾರತೀಯ ಸಂಜಾತೆಯ ಮೊದಲ ಹಾಗೂ ಕೊನೆಯ ಗಗನಯಾನದ ಅಪರೂಪದ ಮಾಹಿತಿ ಇಲ್ಲಿದೆ…

    17 ವರ್ಷಗಳ ಹಿಂದಿನ ಮಾತು. ಅಂದು ಕೂಡ ಫೆಬ್ರವರಿ 1 ಶನಿವಾರವೇ ಬಂದಿತ್ತು. ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ನಾಸಾ) ವಿಜ್ಞಾನಿಗಳು ನಿದ್ದೆಗೆಟ್ಟು ಕಾತರದಿಂದ ಕಾಯುತ್ತಿದ್ದ ದಿನವದು. ಕೌಂಟ್​ಡೌನ್ ಶುರುವಾಗಿತ್ತು. ಇನ್ನೇನು ಹದಿನಾರೇ ನಿಮಿಷ… ಗಗನಯಾತ್ರೆ ಮುಗಿಸಿ ಏಳು ಜನರ ತಂಡ ಆ 16 ನಿಮಿಷಗಳಲ್ಲಿ ಭೂಮಿಯನ್ನು ರ್ಸ³ಸುತ್ತಿತ್ತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಖುಷಿಯಲ್ಲಿ ಇಡೀ ನಾಸಾ ತಂಡ ಹೆಮ್ಮೆ ಪಡುತ್ತಿತ್ತು.

    ಅತ್ತ, 16 ದಿನಗಳ ಕಾಲ ಗಗನದಲ್ಲಿ 80ಕ್ಕೂ ಅಧಿಕ ಪ್ರಯೋಗಗಳನ್ನು ಮಾಡಿ ಅದರ ಅನುಭವವನ್ನು ಹಂಚಿಕೊಳ್ಳಲು ಏಳು ಮಂದಿಯ ತಂಡ ಕಾತರವಾಗಿತ್ತು.  ಆದರೆ…? ನೋಡನೋಡುತ್ತಿದ್ದಂತೆಯೇ ಈ ಗಗನಯಾತ್ರಿಗಳನ್ನು ಹೊತ್ತು ತಂದಿದ್ದ ಸ್ಪೇಸ್ ಶಟಲ್​ಗೆ (ಕೊಲಂಬಿಯಾ ಆಕಾಶನೌಕೆಎಸ್.ಟಿ.ಎಸ್-87) ಬೆಂಕಿ ಹೊತ್ತಿಕೊಂಡಿತು. ಗಗನಯಾತ್ರಿಗಳು ವಾಪಸಾಗುವ ದೃಶ್ಯವನ್ನು ಕಂಪ್ಯೂಟರ್​ನಲ್ಲಿ ವೀಕ್ಷಿಸುತ್ತಿದ್ದ ವಿಜ್ಞಾನಿಗಳು ಏನಾಯಿತೆಂದು ಅರಿಯುವ ಮುನ್ನವೇ ಏಳೂ ಮಂದಿ ಗನನಯಾತ್ರಿಗಳು ಸುಟ್ಟು ಭಸ್ಮವಾದರು…

    ಆ ಗಗನನೌಕೆಯಲ್ಲಿ ಇದ್ದ ಒಬ್ಬಳೇ ಒಬ್ಬಳು ಹೆಣ್ಣುಮಗಳೆಂದರೆ ಭಾರತ ಮೂಲದ ಅಮೆರಿಕ ಪ್ರಜೆ ಕಲ್ಪನಾ ಚಾವ್ಲಾ. ಭೂಕಕ್ಷೆಯಿಂದ ಹೊರಹೋಗಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಆದರೆ ನೌಕೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ತಮ್ಮ 42ನೇ ವಯಸ್ಸಿನಲ್ಲಿ ಕಲ್ಪನಾ ಇಹಲೋಕ ತ್ಯಜಿಸಿದರು.

    ಮೊದಲ ಪಯಣದ ವಿಶಿಷ್ಟ ಅನುಭವ: 1996ರಲ್ಲಿ ಮೊದಲ ಬಾರಿಗೆ ಗಗನಯಾನದ ಅವಕಾಶ ಕಲ್ಪನಾ ಅವರಿಗೆ ಸಿಕ್ಕಿತ್ತು. ಅಲ್ಲಿ 372 ಗಂಟೆಗಳವರೆಗೆ (ಅಂದರೆ ಸುಮಾರು ಹದಿನಾಲ್ಕೂವರೆ ದಿನ) ಭೂಮಿಯನ್ನು 252 ಬಾರಿ ಸುತ್ತಿ 10.4 ದಶಲಕ್ಷ ಮೈಲುಗಳನ್ನು ಕ್ರಮಿಸಿದ್ದರು. ಗುರುತ್ವಾಕರ್ಷಣೆಯೇ ಇಲ್ಲದೆ ಭಾರರಹಿತ ಸ್ಥಿತಿಯನ್ನು ಅನುಭವಿಸುವುದು ತುಂಬಾ ರೋಚಕವಾಗಿದೆ ಎಂದು ಅವರು ಹೇಳಿದ್ದರು.

    ಯಾತ್ರೆ ಮುಗಿಸಿ ಬಂದ ಬಳಿಕದ ವಿಶಿಷ್ಟ ಅನುಭವ ಹೇಳಿಕೊಂಡಿದ್ದ ಅವರು, ‘ಗಗನಯಾತ್ರೆಯಿಂದ ಮರಳಿದ ತಕ್ಷಣ ನಾವು ನೇರವಾಗಿ ಯಾರನ್ನೂ ಸಂರ್ಪಸುವಂತಿಲ್ಲ. ನಮ್ಮನ್ನು ತೀವ್ರ ತಪಾಸಣೆಗೆ ಕೆಲ ದಿನಗಳ ಕಾಲ ಒಳಪಡಿಸಲಾಗುತ್ತದೆ. ಏಕೆಂದರೆ ಅಂತರಿಕ್ಷದಿಂದ ತಂದಿರಬಹುದಾದ, ಮನುಕುಲಕ್ಕೆ ಮಾರಕವಾದ ಸೂಕ್ಷ್ಮ ಕ್ರಿಮಿ ನಮ್ಮ ದೇಹವನ್ನು ಪ್ರವೇಶಿಸಿರುವ ಸಾಧ್ಯತೆಗಳು ಇರುತ್ತವೆ. ಕಠಿಣ ತಪಾಸಣೆ ಮುಗಿಯುವ ವರೆಗೂ ನಮ್ಮನ್ನು ವಿಶೇಷ ಕೋಣೆಯೊಳಗೇ ಇಡುತ್ತಾರೆ. ಪಯಣ ಮುಗಿಸಿ ಬಂದಾಗ ಯಾರೇ ಅಭಿನಂದನೆ ಸಲ್ಲಿಸಬೇಕಾದರೂ ಕೋಣೆಯ ಹೊರಗಿನಿಂದ ಗಾಜಿನ ಮೂಲಕವೇ ಹೇಳುತ್ತಾರೆ. ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಹೊರಬಂದ ಮೇಲೆ ನನಗೆ ನಾಸಾದ ಸ್ಪೇಸ್ ಸ್ಟೇಷನ್ ವಿಭಾಗದಲ್ಲಿ ತರಬೇತು ದಾರಳಾಗಿ ನೇಮಕಾತಿ ದೊರೆಯಿತು. ಇವೆಲ್ಲಾ ರೋಚಕ ಅನುಭಗಳು’ ಎಂದಿದ್ದರು ಕಲ್ಪನಾ.

    2000ರಲ್ಲಿ ಗಗನಯಾತ್ರೆಗೆ ಎರಡನೆಯ ಬಾರಿ ಇವರು ಆಯ್ಕೆಯಾದರು. ಆದರೆ ಹಲವಾರು ತಾಂತ್ರಿಕ ಸಮಸ್ಯೆಗಳಿಂದಾಗಿ ಯಾತ್ರೆಯ ದಿನಾಂಕ ಮೂರು ವರ್ಷ ಮುಂದಕ್ಕೆ ಹೋಯಿತು. ಎಲ್ಲವೂ ಸರಿಯಾಗಿದೆ ಅಂದ ಮೇಲೆಯೇ 2003ರ ಜನವರಿ 16ರಂದು ಗಗನನೌಕೆ ಉಡ್ಡಯನಗೊಂಡಿತು. ಆದರೆ ದುರಂತವೆಂದರೆ, ಅಲ್ಲೆಲ್ಲೋ ಆದ ಚಿಕ್ಕದೊಂದು ದೋಷ ಕಲ್ಪನಾ ಸೇರಿದಂತೆ ಏಳು ಮಂದಿಯ ಬಲಿ ತೆಗೆದುಕೊಂಡಿತು. ಈ ವೀರ ಪುತ್ರಿ ನಮ್ಮನ್ನಗಲಿ ಇಂದಿಗೆ 17 ವರ್ಷಗಳು.

    ಬಾಲ್ಯದಿಂದ ಗಗನಯಾತ್ರಿಯವರೆಗಿನ ಪಯಣ…: ಕಲ್ಪನಾ ಚಾವ್ಲಾ ಹುಟ್ಟಿದ್ದು 1962ರ ಮಾರ್ಚ್ 17ರಂದು. ಆದರೆ ಬಾಲ್ಯದಲ್ಲಿಯೇ ಪ್ರತಿಭಾನ್ವಿತೆಯಾಗಿದ್ದ ಈಕೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ವಯಸ್ಸಿನ ಕಾರಣ, ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ವಯಸ್ಸನ್ನು 1961 ಜುಲೈ 1 ಎಂದು ಬದಲಾಯಿಸಲಾಯಿತು. ಇವರ ಮೊದಲ ಹೆಸರು ಮೊಂಟೊ, ಆದರೆ ಈ ಹೆಸರು ವಿಚಿತ್ರ ಇದೆ ಎಂದುಕೊಂಡು ಖುದ್ದಾಗಿ ಹೆಸರನ್ನು ಕಲ್ಪನಾ ಎಂದು ಬದಲಾಯಿಸಿಕೊಂಡರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. 1988ರಲ್ಲಿ ಪಿ.ಎಚ್.ಡಿ. ಮುಗಿಸಿದ ಬಳಿಕ ನಾಸಾದಲ್ಲಿ ಉದ್ಯೋಗ ಸಿಕ್ಕಿತು. ಅವರ ಪ್ರತಿಭೆ ಗಮನಿಸಿ ಏಮ್್ಸ ರೀಸರ್ಚ್ ಸೆಂಟರ್​ನಲ್ಲಿ ಉಪಾಧ್ಯಕ್ಷ ಸ್ಥಾನ ದೊರಕಿದ್ದು ವಿಶೇಷ. ಅಮೆರಿಕದ ಪೌರತ್ವ ಪಡೆದು ಗಗನಯಾತ್ರಿಯಾಗಲು ಅರ್ಜಿ ಸಲ್ಲಿಸಿದರು. ಅಂತೂ ನಾಲ್ಕು ವರ್ಷಗಳ ಬಳಿಕ ಅಂದರೆ 1995ರಲ್ಲಿ ಗಗನಯಾತ್ರಿಯಾಗುವ ಅವಕಾಶ ದೊರಕಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts