More

    ದರ್ಶನಕ್ಕೆ ಭಕ್ತರ ಹರಸಾಹಸ

    ಕಲಾದಗಿ: ದೇವಸ್ಥಾನದತ್ತ ಸಾಗುವ ಎಲ್ಲ ದಾರಿಗಳು ಬಂದ್, ಕಾವಲಿಗೆ ನಿಂತ ಪೊಲೀಸ್ ಪಡೆ, ದೇವರ ನೈವೇದ್ಯಕ್ಕೆ ಹಾಗೂ ದರ್ಶನಕ್ಕೆ ಹರಸಾಹಸ ಪಡುತ್ತಿದ್ದ ಭಕ್ತ ಸಮೂಹ, ಜನಸಂದಣಿ ಹೆಚ್ಚಾಗದಂತೆ ನೋಡಿಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶಮಾಡಿಕೊಟ್ಟ ಅಧಿಕಾರಿ ಪಡೆ, ಈ ಸ್ಥಿತಿಯಲ್ಲಿ ಅವಸರ ಅವಸರದಿಂದಲೇ ನಡೆದ ಸಾಂಪ್ರದಾಯಕ ಆಚರಣೆಗಳು..!

    ಇವು ಈ ಭಾಗದ ಸುಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯಲ್ಲಿ ಹನುಮಂತ ದೇವರ ಕಾರ್ತಿಕೋತ್ಸವದ ದಿನವಾದ ಶನಿವಾರ ಬೆಳಗಿನಜಾವ 4 ಗಂಟೆಯಿಂದ ಇಡೀ ದಿನ ಕಂಡುಬಂದ ದೃಶ್ಯಗಳು.

    ಕೋವಿಡ್ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಭಕ್ತರು ನೆರೆಯುವುದನ್ನು ತಪ್ಪಿಸಲು ಜಿಲ್ಲಾಡಳಿತ ಕಾರ್ತಿಕೋತ್ಸವವನ್ನು ನಿಷೇಧಿಸಿತ್ತು. ಭಕ್ತರಿಗೆ ದೇವರ ದರ್ಶನಕ್ಕೂ ಅವಕಾಶ ನೀಡಬಾರದೆಂದು ಅನೇಕ ಬಿಗಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಭಕ್ತರು ಬಿಗಿ ವಾತಾವರಣದಲ್ಲಿಯೇ ದೇವರದರ್ಶನ ಪಡೆದು ಅಷ್ಟಕ್ಕೆ ಸಂತೃಪ್ತಿ ಪಡಬೇಕಾಯಿತು.

    ಬೆಳಗಿನಜಾವವೇ ಕಲಶಾರೋಹಣ
    ಊರವರ ಕೋರಿಕೆ ಮೇರೆಗೆ ಸಂಪ್ರದಾಯದಂತೆ ಹನುಮಂತ ದೇವರಿಗೆ ನೈವೇದ್ಯ ಸಮರ್ಪಿಸಲು ಗ್ರಾಮಸ್ಥರಿಗೆ ಮಾತ್ರ ಬೆಳ್ಳಂಬೆಳಗ್ಗೆಯೇ ಅವಕಾಶ ಮಾಡಿಕೊಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ 8 ಗಂಟೆ ಸುಮಾರಿಗೆ ನಡೆಯುತ್ತಿದ್ದ ಕಲಶಾರೋಹಣ, ಮಹಾಪೂಜೆಯನ್ನು ಬೆಳಗಿನಜಾವವೇ ನೆರವೇರಿಸಲಾಯಿತು.

    ಊರೊಳಗಿನ ಕೊತ್ತಲೇಶನ ಗುಡಿಯಿಂದ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಕಲಶಗಳನ್ನು ತಂದು ಸಾಪ್ರದಾಯಕ ವಿಧಿವಿಧಾನಗಳೊಂದಿಗೆ ದೇವಾಲಯದ ಶಿಖರಕ್ಕೆ ಹಾಗೂ ದೇವಾಲಯದ ಸುತ್ತಲಿರುವ ಗುಮ್ಮಟಗಳಿಗೆ ಕಲಶಾರೋಹಣ ಮಾಡಲಾಯಿತು. ಆನಂತರ ದೇವರಿಗೆ ಮಹಾಪೂಜೆ ನಡೆದು ದರ್ಶನ ಲಭ್ಯವಾಗುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಲಿನ ಊರವರು ನೈವೇದ್ಯವನ್ನು ಸಮರ್ಪಿಸಿ ಗೋಪಾಳವನ್ನು ತುಂಬಿಸಿ ಭಕ್ತಿ ಮೆರೆದರು.

    ರಸ್ತೆಯುದ್ದಕ್ಕೂ ನಾಕಾಬಂದಿ
    ನಸುಕಿನಿಂದಲೇ ಪಾದಯಾತ್ರೆ ಮೂಲಕ, ವಾಹನಗಳಲ್ಲಿ ತುಳಸಿಗೇರಿಯತ್ತ ವಿವಿಧ ಕಡೆಗಳಿಂದ ಬರುತ್ತಿರುವ ಭಕ್ತರನ್ನು ತಡೆಯಲು ಪ್ರಮುಖ ರಸ್ತೆಗಲ್ಲಿ ನಾಕಾಬಂದಿಯನ್ನು ಹಾಕಲಾಗಿತ್ತು. ಭಕ್ತರ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸ್ ಬಲವನ್ನು ನಿಯೋಜನೆ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಹಾಕಿದ್ದ ನಾಕಾಬಂದಿಗಳನ್ನು, ಬ್ಯಾರೇಕೇಡ್‌ಗಳನ್ನು ತಪ್ಪಿಸಿಕೊಂಡು ಭಕ್ತರು ಅಡ್ಡದಾರಿಗಳ ಮೂಲಕ ತುಳಸಿಗೇರಿಗೆ ಬಂದು ದೇವರ ದರ್ಶನಕ್ಕೆ ಮುಂದಾಗಿದ್ದು, ಅವರಿಗಿದ್ದ ದೇವರ ಮೇಲಿನ ಭಕ್ತಿಗೆ ಸಾಕ್ಷಿಯಾಗಿತ್ತು.

    ದೇವರ ದರ್ಶನಕ್ಕೆ ಅವಕಾಶ
    ಬ್ಯಾರಿಕೇಡ್ ಮೂಲಕ ದೇವಾಲಯದತ್ತ ಬರುವ ಎಲ್ಲ ದಾರಿಗಳನ್ನು ಬಂದ್ ಮಾಡಿದ್ದರು. ಮತ್ಯಾವುದೋ ದಾರಿಯಲ್ಲಿ ದೇವಾಲಯದತ್ತ ಬಂದ ಭಕ್ತರಿಗೆ ಪೂರ್ವದ ಬಾಗಿಲಿನಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಒಂದಿಷ್ಟು ಉದಾರತನವನ್ನು ತೋರಲಾಯಿತು. ಹೀಗೆ ಬಂದವರು ದೇವರ ದರ್ಶನಕ್ಕೆ ಹೋಗಬೇಕಾದರೆ ಬಾಗಿಲಲ್ಲೆ ನಡೆಯುತ್ತಿದ್ದ ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಾದ ಅನಿವಾರ್ಯವಾಗಿತ್ತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts