More

    ಕಳಚಿತು ರಾಮನಗರದ ಕರೊನಾ ಹಸಿರು ವಲಯದ ಕಿರೀಟ

    ರಾಮನಗರ: ಎರಡು ತಿಂಗಳಿಂದಲೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮನಗರ ಜಿಲ್ಲೆಗೆ ಚೆನ್ನೈ ಕಂಟಕ ಅಂಟಿಕೊಂಡಿದ್ದು, ಎರಡು ವರ್ಷದ ಗಂಡು ಮಗುವಿಗೆ ಸೋಂಕು ದೃಢಪಟ್ಟಿದೆ.

    ಮಾಗಡಿ ತಾಲೂಕು ಕುದೂರು ಹೋಬಳಿಯ ಮಾರಸಂದ್ರದ 2 ವರ್ಷದ ಗಂಡು ಮಗುವಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾದಂತೆ ಆಗಿದೆ. ಮೇ 9ರಂದು ಚೆನ್ನೈನಿಂದ ಬಂದಿದ್ದ ಮಗುವನ್ನು 2ನೇ ಬಾರಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಧೃಢಪಟ್ಟಿದ್ದು, ಭಾನುವಾರ ರಾತ್ರಿಯೇ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಇತರರಿಗೆ ಇಲ್ಲ: ಸೋಂಕಿತ ಮಗು ಪಾಲಕರೊಂದಿಗೆ ಚೆನ್ನೈನ ಟಿ.ನಗರದಲ್ಲಿತ್ತು. ತಂದೆ ತಮಿಳುನಾಡಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ವಂತ ಊರಿಗೆ ವಾಪಸಾಗುವ ನಿಟ್ಟಿನಲ್ಲಿ ಪಾಸ್ ಪಡೆದು ಮೇ 9ರಂದು ರಾಮನಗರಕ್ಕೆ ಬಂದಿದ್ದರು. ಈ ವೇಳೆ ಮಗು, ಮಗುವಿನ ತಂದೆ ಹಾಗೂ ಗರ್ಭಿಣಿ ತಾಯಿಯನ್ನು ಹೋಂ ಕ್ವಾರಂಟೇನ್‌ನಲ್ಲಿ ಇಡಲಾಗಿತ್ತು. ಮೇ 9ರಂದೇ ಅಷ್ಟೂ ಜನದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಎಲ್ಲರ ವರದಿಯೂ ನೆಗೆಟಿವ್ ಬಂದಿತ್ತು. 14 ದಿನಗಳ ನಂತರ ಮಗು, ತಂದೆ-ತಾಯಿ, ಅಜ್ಜ ಹಾಗೂ ಚಿಕ್ಕಮ್ಮನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಗುವಿಗೆ ಮಾತ್ರ ಸೋಂಕು ಇರುವುದು ಪತ್ತೆಯಾಗಿದೆ.

    ಪೊಲೀಸ್ ಭಯ: ಮತ್ತೊಂದೆಡೆ ಹಾಸನದಲ್ಲಿ ಸೋಂಕು ದೃಢಪಟ್ಟಿರುವ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಇದಕ್ಕೂ ಮೊದಲು ರಾಮನಗರದ ವಿವಿಧ ಕಡೆಗಳಲ್ಲಿ ಓಡಾಟ ನಡೆಸಿದ್ದಾರೆ. ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್‌ನಲ್ಲಿರುವ ಬೆಳಗಾವಿ ಮೂಲಕ ಕಾನ್‌ಸ್ಟೆಬಲ್ ಮೇ 7ರಂದು ಬೆಂಗಳೂರಿನಲ್ಲಿ ಬಂದೋಬಸ್ತ್ ನಿಯೋಜನೆಗೊಂಡಿದ್ದರು. ಮುತ್ತಪ್ಪ ರೈ ಶವ ಸಂಸ್ಕಾರ ವೇಳೆ ಹಾಗೂ ರಾಮನಗರದ ರೇಷ್ಮೆಗೂಡಿನ ಗಲಾಟೆ ಸಂದರ್ಭದಲ್ಲೂ ಭದ್ರತಾ ಕೆಲಸಕ್ಕೆ ನಿಯೋಜನೆಗೊಂಡಿದ್ದರು. 3 ದಿನಗಳ ಹಿಂದಷ್ಟೇ ಹಾಸನದ ಇಂದಿರಾ ನಗರದಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಿದ್ದರು. ಆದರೆ, ಈ ವ್ಯಕ್ತಿ ಜತೆ ಸಾರ್ವಜನಿಕ ಸಂಪರ್ಕ ಕಡಿಮೆ ಇರುವ ಸಾಧ್ಯತೆ ಇರುವುದರಿಂದ ಆತಂಕ ಹೆಚ್ಚಿಲ್ಲವಾದರೂ ಪೊಲೀಸ್ ಸಿಬ್ಬಂದಿಗೆ ಒಡನಾಟ ಹೆಚ್ಚಿರುವುದು ದಿಗಿಲು ಜಾಸ್ತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಜಿಲ್ಲೆಯ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗ್ರಹಿಸಿದ್ದು ಅವರನ್ನು ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆದಿದೆ.

    ಚಾಲಕನಿಂದ ಆತಂಕ: ಮಾಗಡಿಯ ಕೆಎಎಸ್ ಆರ್‌ಟಿಸಿ ಡಿಪೋದಲ್ಲಿ ಚಾಲಕನಾಗಿರುವ ತುಮಕೂರು ಜಿಲ್ಲೆ ಬೆಳ್ಳಾವಿಯ ವ್ಯಕ್ತಿಗೂ ಪಾಸಿಟಿವ್ ಬಂದಿರುವುದು ಆತಂಕ ಹೆಚ್ಚಿಸಿದೆ. ಲಾಕ್‌ಡೌನ್ ಸಡಿಲಿಕೆ ನಂತರ ಕಳೆದ 5 ದಿನಗಳ ಹಿಂದಷ್ಟೇ ಬೆಳ್ಳಾವಿಯಿಂದ ಬಂದು ಕರ್ತವ್ಯಕ್ಕೆ ಹಾಜರಾಗಿದ್ದ ಈತ ಮಾಗಡಿಯಿಂದ ಬೆಂಗಳೂರಿಗೆ ಚಾಲಕ ಕಂ ನಿರ್ವಾಹಕನಾಗಿ ಹೋಗಿದ್ದ. ಪರೀಕ್ಷೆಗೆ ಒಳಪಟ್ಟ ನಂತರ 20 ಸ್ನೇಹಿತರೊಂದಿಗೆ ಮಾಗಡಿ ಡಿಪೋದಲ್ಲಿಯೇ ಊಟ ಮಾಡಿದ್ದಾರೆ. ಅಲ್ಲದೆ, ಬೆಂಗಳೂರಿಗೆ ಬಸ್ ಚಲಾಯಿಸಿದ್ದ ವೇಳೆ ಟಿಕೆಟ್ ಸಹ ನೀಡಿರುವುದರಿಂದ ಹೆಚ್ಚಿನ ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನುವ ಆತಂಕವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಪ್ರತಿಯೊಬ್ಬರನ್ನೂ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಇದರ ಜತೆಗೆ ಬಸ್‌ನಲ್ಲಿದ್ದ ಪ್ರಯಾಣಿಕರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದು, ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದರೆ ಅಂತಹವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ.

    ಮೂಲ ಪತ್ತೆ ಆಗುತ್ತಿಲ್ಲ: ಸೋಂಕು ದೃಢಪಟ್ಟ ಮಗು, ಚಾಲಕ ಮತ್ತು ಕಾನ್‌ಸ್ಟೆಬಲ್‌ಗೆ ಸೋಂಕು ಹೇಗೆ ತಗುಲಿದೆ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಇದರ ಪತ್ತೆಗಾಗಿ ರಾಮನಗರ, ತುಮಕೂರು ಹಾಗೂ ಹಾಸನ ಜಿಲ್ಲಾಡಳಿತಗಳು ಸತತ ಪ್ರಯತ್ನ ನಡೆಸುತ್ತಿವೆ. ಆದರೆ, ಈವರೆಗೂ ಮೂಲ ಪತ್ತೆ ಆಗದಿರುವುದು ಎಲ್ಲರ ನಿದ್ದೆಗೆಡಿಸುವಂತೆ ಮಾಡಿದೆ.

    ಜತೆಯಲ್ಲಿದ್ದರೂ ಅಂಟದ ಸೋಂಕು: ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಪ್ರತಿಯೊಬ್ಬರಿಗೂ ಕರೊನಾ ಹಬ್ಬುವ ಸಾಧ್ಯತೆ ಇದೆ. ಆದರೆ ಮಾಗಡಿ ಮಾರಸಂದ್ರ ಪ್ರಕರಣದಲ್ಲಿ ಮಗುವಿನ ಜತೆ ಕಳೆದ 14 ದಿನಗಳಿಂದ ಜತೆಗಿದ್ದರೂ ಕುಟುಂಬದ ಇತರ ನಾಲ್ವರು ಸದಸ್ಯರಲ್ಲಿ ಸೋಂಕು ಪತ್ತೆ ಆಗದ ಹಿನ್ನೆಲೆಯಲ್ಲಿ ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ, ನಾಲ್ವರನ್ನು ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.

     

    ಕಳೆದ ಹಲವು ದಿನಗಳಿಂದಲೂ ಸೋಂಕು ಪತ್ತೆ ಆಗಿರಲಿಲ್ಲ. ಆದರೆ ಚೆನ್ನೈನಿಂದ ಬಂದ ಮಗುವಿಗೆ ಸೋಂಕು ದೃಢಪಟ್ಟಿದ್ದು, ಜನತೆ ಎಚ್ಚರಿಕೆಯಿಂದ ಇರಬೇಕಿದೆ. ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಇರಿ.
    ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ, ರಾಮನಗರ

    ಕರೊನಾ ಹರಡುವಿಕೆ ಯಕ್ಷಪ್ರಶ್ನೆ?: ಮಾಗಡಿಯ ಕೆಎಸ್‌ಆರ್‌ಟಿಸಿ ಚಾಲಕನಿಗೆ ಸೋಂಕು ದೃಢಪಡುತ್ತಿದ್ದಂತೆ ಆತನೊಂದಿಗೆ ತಿಂಡಿ-ಊಟ ಮಾಡಿರುವ ಇತರ ಸಹೋದ್ಯೋಗಿಗಳೂ ಆತಂಕದಲ್ಲಿದ್ದಾರೆ. ಮಾಗಡಿ-ಬೆಂಗಳೂರು ಮಾರ್ಗದಲ್ಲಿ ಮೂರು ದಿನ ಕಾರ್ಯ ನಿರ್ವಹಿಸಿದ್ದು, ಸುಮಾರು 110 ಮಂದಿ ಪ್ರಯಾಣಿಸಿದ್ದು, ಇವರ ಮೇಲೆ ನಿಗಾ ಇಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮಾಗಡಿ-ಬೆಂಗಳೂರು ಮಾರ್ಗದ ಬಸ್‌ಗಳ ಸಂಚಾರವನ್ನು ಕೆಲಸಮಯ ಸ್ಥಗಿತಗೊಳಿಸಲಾಯಿತು.

    ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು, ಸೋಂಕಿತ ಚಾಲಕನ ಜತೆ ತಿಂಡಿ-ಊಟ ಮಾಡಿದವರನ್ನು ಹುಲಿಕಟ್ಟೆ ಬಳಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲು ಆರೋಗ್ಯಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇಂದು ಕೂಡ ಡಿಪೋ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿದ್ದು, ಔಷಧ ಸಿಂಪಡಿಸಿ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ರೆನ್ ಮಾಡಲು ಪುರಸಭೆ ಮುಖ್ಯಾಧಿಕಾರಿ ಮಹೇಶ್ ನೇತೃತ್ವದಲ್ಲಿ ಸರ್ವೇ ನಡೆಸಲಾಗಿದೆ.
    ತಾಲೂಕಿನಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.

    ರೋಗದ ಮೂಲ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಅನಗತ್ಯವಾಗಿ ಓಡಾಟ ಮಾಡುವುದು ಬಿಟ್ಟು ಮನೆಯಲ್ಲಿರಿ.
    ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ

    ಕರೊನಾ ಪ್ರಾರಂಭದಿಂದಲೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಜನ ಆತಂಕಪಡುವುದು ಬೇಡ. ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಡಿಎಚ್‌ಒ, ಟಿಎಚ್‌ಒ ಜತೆ ಮಾತನಾಡಿದ್ದೇನೆ.
    ಎ.ಮಂಜುನಾಥ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts