More

  ಹೃದಯದೊಳಗೆ ಸತ್ವದ ಝುರಿ

  ಶಕ್ತಿ ಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ |

  ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ||

  ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ |

  ಸತ್ತ್ವದಚ್ಛಿನ್ನಝುರಿ – ಮಂಕುತಿಮ್ಮ ||

  ‘ವಿಧಿಯು ನಿನ್ನ ಶಕ್ತಿಗೂ ಮೀರಿದ ಪರೀಕ್ಷೆಗಳನ್ನು ನೀಡಿದರೆ, ಯುಕ್ತಿಗೂ ಮೀರಿದ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಚಿತ್ತವನ್ನು ಒಳಗಡೆಗೆ ತಿರುಗಿಸಿಕೋ. ಅಲ್ಲಿ ಸತ್ತ್ವಯುತವಾದ ಅವಿಚ್ಛಿನ್ನ ಝುರಿಯೊಂದು ಇದೆ’ ಎನ್ನುತ್ತದೆ ಈ ಕಗ್ಗ. ವಿಧಿಲಿಖಿತವನ್ನು, ಒಡ್ಡುವ ಪರೀಕ್ಷೆಗಳನ್ನು ಮನುಷ್ಯಮತಿಯು ಊಹಿಸಲಾರದು. ಜೀವನದಲ್ಲಿ ಅವೆಷ್ಟೋ ಸಲ ನಮ್ಮ ಶಕ್ತಿಯನ್ನೂ ಮೀರಿದ ಸವಾಲುಗಳನ್ನು ವಿಧಿಯು ಮುಂದಿಡುತ್ತಾನೆ. ಅದನ್ನು ಎದುರಿಸಲಾಗದೆ ಎಲ್ಲ ಮುಗಿಯಿತೆಂದು ಆತಂಕಿತರಾಗುವ ಸಂದರ್ಭಗಳು ಬದುಕನ್ನು ನಡುಗಿಸಿಬಿಡುತ್ತವೆ.

  ತನ್ನ ಸುಂದರ ಬಾಳ್ವೆಯೊಳಗೆ ಸಂತಸದಿಂದಿದ್ದ ವ್ಯಕ್ತಿಯೊಬ್ಬನಿಗೆ ಇದ್ದಕ್ಕಿದ್ದಂತೆ ಅನಾರೋಗ್ಯದ ಚಿಹ್ನೆಗಳು ಕಾಣಿಸಿಕೊಂಡವು. ವೈದ್ಯರ ಬಳಿಗೆ ಹೋದಾಗ ನರಳಿಸುವ ಕಾಯಿಲೆಯೊಂದು ಸದ್ದಿಲ್ಲದೆ ದೇಹದೊಳಗೆ ನುಸುಳಿ ಬೆಳೆಯುತ್ತಿರುವುದು ತಿಳಿಯಿತು. ಯಾವುದೇ ದುರಭ್ಯಾಸವೂ ಇಲ್ಲದೆ, ಆರೋಗ್ಯಕರ ಜೀವನಕ್ರಮವನ್ನು ಅನುಸರಿಸಿಯೂ ಬದುಕಿನಲ್ಲಿ ಈ ಕಂದಕವೊಂದು ಸೃಷ್ಟಿಯಾದದ್ದು ಹೇಗೆಂದು ಬಹಳಷ್ಟು ಚಿಂತಿಸಿದರು. ಚಿಕಿತ್ಸೆಯ ಹಂತದಲ್ಲಿ ನಷ್ಟ-ಕಷ್ಟಗಳಿಗೆ ಒಳಗಾಗಬೇಕಾಯಿತು. ಅನೇಕ ವಿಧದ ವೈದ್ಯಕೀಯ ಚಿಕಿತ್ಸಾಕ್ರಮವನ್ನು ಅನುಸರಿಸಿದರು. ಆರೋಗ್ಯವನ್ನು ಮರಳಿ ಪಡೆಯುವುದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದರೂ ಫಲಪ್ರದವಾಗಲಿಲ್ಲ. ಹಲವು ಯುಕ್ತಿಗಳನ್ನು, ಯುಕ್ತ ಮಾರ್ಗಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೂ ಕಾಯಿಲೆ ಗುಣವಾಗಲಿಲ್ಲ, ಬದುಕು ಸಾಕು ಎನ್ನಿಸುವಷ್ಟು ರೋಸಿಹೋದರು. ಹೀಗೆ ವಿಷಾದದಿಂದ ತತ್ತರಿಸಿದ ಮನಸ್ಸು ಮೌನದೊಳಗೆ ತನ್ನೊಳಗನ್ನು ಬಿಚ್ಚಿಕೊಳ್ಳತೊಡಗುತ್ತದೆ. ಆ ವ್ಯಕ್ತಿ ಅಂತಮುಖಿಯಾದರು, ಬದುಕುವ ಧೈರ್ಯವನ್ನು ತಮ್ಮೊಳಗಿನಿಂದಲೇ ಕ್ರೋಡೀಕರಿಸಿಕೊಂಡು ಸೋಲಿನಲ್ಲೂ ಗೆಲುವಿನ ನಗೆ ನಕ್ಕರು.

  ಬಾಳಹಾದಿಯಲ್ಲಿ ಯಾವಾಗ ಯಾವುದು ಬಂದೆರಗುತ್ತದೆ ಎಂದು ತಿಳಿಯಲಾರೆವು. ಹಾಗೆ ಬರುವುದನ್ನು ತಡೆಯುವುದಕ್ಕೂ ನಮಗೆ ಸಾಧ್ಯವಿಲ್ಲ. ಯಾಕೆ ಹೀಗಾಯಿತು ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ದೊರೆಯಲಾರದು. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳುವುದಷ್ಟೇ ನಮಗುಳಿವ ಆಯ್ಕೆ. ಹಾಗೆಂದು ನಿರಾಶೆಯಿಂದ, ಬಿಕ್ಕಳಿಸುತ್ತ, ಕೊರಗುತ್ತ ಬದುಕಬೇಕಾಗಿಲ್ಲ. ಕ್ಷೋಭೆಗೊಳಗಾದ ಚಿತ್ತವನ್ನು ಆಂತರ್ಯದತ್ತ ತಿರುಗಿಸಬೇಕು. ಅಲ್ಲಿ ಸತ್ತ್ವಾತಿಶಯವಾದ, ಸತ್ಯಸ್ವರೂಪವೇ ಆದ ಆತ್ಮಚೈತನ್ಯವಿದೆ. ಅದು ಜೀವನದ ನೋವು-ನಲಿವುಗಳನ್ನು ಸಾಕ್ಷೀಭೂತವಾಗಿ ನೋಡುತ್ತಿರುತ್ತದೆ. ಆ ಆತ್ಮವು ದೇವರ ಅಂಶವೇ ಆಗಿದ್ದು, ಯಾತ್ರೆಯನ್ನು ಕೈಗೊಂಡು ದೇಹದೊಳಗೆ ಸೇರಿಕೊಂಡಿದೆ. ಈ ಅರಿವನ್ನು ಪಡೆಯುವುದೇ ನಿತ್ಯಸತ್ಯವಾದ ಜ್ಞಾನ. ಈ ಆತ್ಮಜ್ಞಾನದ ಝುರಿಯೊಂದು ನಮ್ಮೆಲ್ಲರ ಆಂತರ್ಯದಲ್ಲಿ ಹರಿಯುತ್ತಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಮಸಿ ಹಿಡಿದ ಗಾಜಿನ ಕವಚದೊಳಗೆ ಮಂದವಾಗಿ ಬೆಳಗುವ ದೀಪದಂತೆ, ಆತ್ಮನೂ ಲೌಕಿಕದ ಮಸಿ ಹಿಡಿದ ಕಾಯದೊಳಗೆ ಬಲ ಕುಂದಿದಂತೆ ಕಾಣುತ್ತಾನೆ. ಯಾವಾಗ ಆತ್ಮಪ್ರಜ್ಞೆ ಜಾಗೃತವಾಗುತ್ತದೋ ಆಗ ಸಂಕಷ್ಟಗಳನ್ನು ಎದುರಿಸುವ ಆತ್ಮಬಲ ವೃದ್ಧಿಸುತ್ತದೆ. ಆತ್ಮವಿಶ್ವಾಸ ಮೈಗೂಡುತ್ತಿದ್ದಂತೆಯೇ ಸಮಸ್ಯೆಗಳು ನಿವಾರಣೆಯಾಗುತ್ತವೆ, ಋಣಾತ್ಮಕ ಅಂಶಗಳು ಮರೆಯಾಗಿ ಸಂತೃಪ್ತಿ ಹೃದಯ ತುಂಬುತ್ತದೆ. ಹಾಗಾಗಿ ನಮ್ಮ ಶಕ್ತಿ ಮತ್ತು ಯುಕ್ತಿಯನ್ನು ಮೀರಿದ ಸವಾಲುಗಳನ್ನು, ಸಮಸ್ಯೆಗಳನ್ನು ವಿಧಿಯು ತಂದೊಡ್ಡಿದರೂ ಆತ್ಮಶಕ್ತಿಯು ಎಚ್ಚೆತ್ತುಕೊಂಡರೆ ಜೀವನವು ಆಪ್ತವೆನ್ನಿಸುತ್ತದೆ, ಪ್ರತಿಯೊಂದು ಸನ್ನಿವೇಶಗಳನ್ನೂ ಅರ್ಥೈಸಿಕೊಂಡು ಸಮಚಿತ್ತದಿಂದಿರುವುದು ರೂಢಿಯಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts