More

    ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದ ಗೊಂದಲ

    ಹುಬ್ಬಳ್ಳಿ : ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರಬಲ್ಲೆ ಎಂಬ ಗೊಂದಲದಲ್ಲಿ ಇದ್ದಾರೆ. ಹೀಗಾಗಿ, ಭವಿಷ್ಯದ ದಿನಗಳ ಬಗ್ಗೆ ಉದಾಸೀನತೆ ತೋರುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಚಿವರಿಂದ ಕನಿಷ್ಠ ಕೆಲಸ ತೆಗೆದುಕೊಳ್ಳುವಲ್ಲಿಯೂ ವಿಫಲರಾಗಿದ್ದಾರೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮರೆತು, ವರ್ಗಾವಣೆ ದಂಧೆ ಮೂಲಕ ಹಣ ಮಾಡುವಲ್ಲಿ ನಿರತವಾಗಿದೆ ಎಂದು ದೂರಿದರು.

    ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಆದರೂ, ಕಾಂಗ್ರೆಸ್ ಸರ್ಕಾರಕ್ಕೆ ಇದಾವುದರ ಪರಿವೇ ಇಲ್ಲ. ತನ್ನ ಜವಾಬ್ದಾರಿ ನಿಭಾಯಿಸುವುದನ್ನು ಬಿಟ್ಟು, ಕೇಂದ್ರದತ್ತ ಬೊಟ್ಟು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

    ತಮಿಳುನಾಡಿಗೆ ಕಾವೇರಿ ನೀಡು ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸುವ ಮೊದಲೇ ಸಿದ್ದರಾಮಯ್ಯ ಸರ್ಕಾರ ನೀರು ಹರಿಬಿಡುವ ಮೂಲಕ ರಾಜ್ಯದ ರೈತರ ಹಿತ ಕಾಯುವಲ್ಲಿ ವಿಫಲವಾಯಿತು ಎಂದರು.

    ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಹಳೇ ಹುಬ್ಬಳ್ಳಿ ಗಲಭೆಯ ಆರೋಪಿಗಳ ವಿರುದ್ಧದ ಪ್ರಕರಣ ಹಿಂಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪತ್ರ ಬರೆದಿದ್ದಾರೆ. ಶಿವಮೊಗ್ಗ ಗಲಭೆ ಬಗ್ಗೆ ಸ್ವತಃ ಗೃಹ ಸಚಿವರೇ ಉದಾಸೀನತೆ ತೋರಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು, ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಅವರಿಗೆ ಬೆಂಬಲ ನೀಡುವ ಸಂದೇಶ ನೀಡುತ್ತಿದೆ ಎಂದು ದೂರಿದರು.

    ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಹಮಾಸ್ ಉಗ್ರರನ್ನು ಬೆಂಬಲಿಸುತ್ತಿರುವುದು ಆತಂಕಕಾರಿ ಸಂಗತಿ. ಇದು ಪ್ರಜಾಪ್ರಭುತ್ವದ ದುರಂತ. ಮತಬ್ಯಾಂಕ್ ಉದ್ದೇಶದಿಂದ ತುಷ್ಠೀಕರಣ ಮಾಡುವುದು ಕಾಂಗ್ರೆಸ್​ನ ಹಳೇಯ ಚಾಳಿ ಎಂದರು.

    ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಭವಿಷ್ಯದ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ. ಲೋಕಸಭೆ ಚುನಾವಣೆಯಲ್ಲಿ ಈ ಮೈತ್ರಿಯ ಪರಿಣಾಮ ತಿಳಿಯಲಿದೆ. ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ ಎಲ್ಲ ಶಾಸಕರು ಪ್ರತಿಪಕ್ಷ ನಾಯಕನ ಜವಾಬ್ದಾರಿ ನಿಭಾಯಿಸಿದರು. ಶೀಘ್ರ ಪ್ರತಿಪಕ್ಷ ನಾಯಕನ ನೇಮಕವಾಗುವ ವಿಶ್ವಾಸ ಇದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts