More

    ಮಲ್ಲಿಕಟ್ಟೆ ಪಾರ್ಕ್‌ಗೆ ಹೊಸ ಲುಕ್

    ಭರತ್ ಶೆಟ್ಟಿಗಾರ್ ಮಂಗಳೂರು
    ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಮಲ್ಲಿಕಟ್ಟೆಯ ಲೈಬ್ರೆರಿ ಪಾರ್ಕ್‌ಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಲಭಿಸಿದ್ದು, ಮೊದಲ ಹಂತದಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ.

    ಪಾರ್ಕ್ ಅಭಿವೃದ್ಧಿ ಕುರಿತಂತೆ ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಹಲವಾರು ವರ್ಷಗಳಿಂದ ಪಾಲಿಕೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿತ್ತು. ಇದೀಗ ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಾರ್ಕನ್ನು ಮೊದಲ ಹಂತದಲ್ಲಿ ಸುಮಾರು 14.30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಪಾಲಿಕೆ ಮುಂದಾಗಿದೆ.

    14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಆವರಣ ಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ಪಾರ್ಕನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಮುಡಾ ಇದರ ಉಸ್ತುವಾರಿ ವಹಿಸಲಿದ್ದು, ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ಕುರಿತಂತೆ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ.

    ಆಕ್ಯುಪಂಕ್ಚರ್ ಟ್ರಾೃಕ್: ಎರಡನೇ ಹಂತದ ಪಾರ್ಕ್ ಅಭಿವೃದ್ಧಿಯಲ್ಲಿ ಸೌಂದರ್ಯ ವೃದ್ಧಿಗೆ ಹೆಚ್ಚಿನ ಅದ್ಯತೆ ದೊರೆಯಲಿದೆ. ವಾಕಿಂಗ್ ಮಾಡುವವರಿಗಾಗಿ ಆಕ್ಯುಪಂಕ್ಚರ್ ಟ್ರಾೃಕ್ ನಿರ್ಮಾಣವಾಗಲಿದೆ. ನೆಲಕ್ಕೆ ಹುಲ್ಲುಹಾಸು, ಹೂವಿನ ಗಿಡಗಳು, ಕುಳಿತುಕೊಳ್ಳಲು ಬೆಂಚುಗಳು, ಸಿಸಿ ಟಿವಿ ಕ್ಯಾಮರಾ ಮೊದಲಾದವುಗಳ ಅಳವಡಿಕೆಯಾಗಲಿದೆ. ಈ ಮೊದಲು ಪಾರ್ಕ್‌ನ ಪರಿಸ್ಥಿತಿಯಿಂದಾಗಿ ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗಲು ಹಿಂಜರಿಯುವ ಪರಿಸ್ಥಿತಿ ಇತ್ತು. ಗಾರ್ಡನ್ ನಿರ್ವಹಣೆ ಇಲ್ಲದೆ, ಹುಲ್ಲು, ಪೊದೆಗಳು ಬೆಳೆದಿತ್ತು. ಗ್ರಂಥಾಲಯದ ಜಗಲಿಯಲ್ಲೇ ಊಟ ಮಾಡಿ, ರಾತ್ರಿ ವೇಳೆ ಅಲ್ಲೇ ಮಲಗುವವರೂ ಇದ್ದಾರೆ. ಆವರಣ ಗೋಡೆ ಇಲ್ಲದ ಕಾರಣ ಒಳಗೆ ಅಲೆಮಾರಿಗಳು, ಬಿಕ್ಷುಕರು, ಬೀದಿನಾಯಿಗಳ ಆವಾಸ ಸ್ಥಾನವಾಗಿತ್ತು. ಮದ್ಯದ ಬಾಟಲಿ, ಮುರಿದ ಬೆಂಚುಗಳು ಪಾರ್ಕ್‌ನ ಅಂದಗೆಡಿಸಿದ್ದವು.

    ಲೈಬ್ರೆರಿ ದುರಸ್ತಿಗೆ ಆಗ್ರಹ: ಪಾರ್ಕ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ನಗರ ಕೇಂದ್ರ ಗ್ರಂಥಾಲಯದ ಕದ್ರಿ ಶಾಖೆಯ ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳೇ ಸಂದಿವೆ. ಪ್ರಸ್ತುತ ಕಟ್ಟಡ ಸಂಪೂರ್ಣ ಹಾಳಾಗಿದೆ. ಗೋಡೆಯಲ್ಲಿ ನೀರು ಲೀಕ್ ಆಗುತ್ತಿದೆ. ಯೋಗೀಶ್ ಭಟ್ ಶಾಸಕರಾಗಿದ್ದಾಗ ಮೇಲಂತಸ್ತು ನಿರ್ಮಿಸಲಾಗಿದ್ದು, ಅಲ್ಲಿಗೆ ಅಳವಡಿಸಲಾಗಿರುವ ಶೀಟ್‌ನಲ್ಲೂ ಮಳೆಗೆ ನೀರು ಸೋರಿಕೆಯಾಗುತ್ತಿದೆ. ಇದರಿಂದ ಕಟ್ಟಡದಲ್ಲಿರುವ ಬೆಲೆಬಾಳುವ ಪುಸ್ತಕಗಳು, ಕಂಪ್ಯೂಟರ್ ಸಹಿತ ವಿವಿಧ ಉಪಕರಣಗಳು ಹಾನಿಗೀಡಾಗುವ ಭೀತಿ ಎದುರಾಗಿದೆ. ಪಾರ್ಕ್ ಅಭಿವೃದ್ಧಿ ಜತೆಗೆ ಗ್ರಂಥಾಲಯವನ್ನೂ ಅಭಿವೃದ್ಧಿಪಡಿಸಬೇಕು ಎನ್ನುವ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

    ಮಲ್ಲಿಕಟ್ಟೆ ಪಾರ್ಕ್ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 14.30 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಿಸಲಾಗುತ್ತದೆ. ಮುಂದಿನ ಹಂತದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts