More

    ಕಾಡಾನೆ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ

    ಹನಗೋಡು: ಹೋಬಳಿಯ ಕಿಕ್ಕೆರಿಕಟ್ಟೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
    ಗ್ರಾಮದ ಮಾಜಿ ಸೈನಿಕ ಬಿ.ಟಿ.ರಾಜು ಅವರ ಪತ್ನಿ ಕಾವೇರಿ (50) ಗಾಯಗೊಂಡಿದ್ದು, ಹನಗೋಡಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

    ಶುಕ್ರವಾರ ಬೆಳಗ್ಗೆ ಕಾವೇರಿ ಅವರು ತಮ್ಮ ಮನೆ ಮುಂಭಾಗ ಕಸ ಗುಡಿಸುತ್ತಿದ್ದ ವೇಳೆ ಮನೆಯ ಹಿಂಭಾಗದಿಂದ ಬಂದ ಸಲಗ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ, ಕಾವೇರಿ ಅವರ ಸೊಂಟದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಪಕ್ಕದಲ್ಲಿದ್ದ ಪತಿ ಬಿ.ಟಿ.ರಾಜು ಜೋರಾಗಿ ಕಿರುಚಾಡಿದ್ದರಿಂದ ಗಾಬರಿಯಾದ ಸಲಗ ಅರಣ್ಯದ ಕಡೆ ಓಡಿ ಹೋಗಿದೆ.

    ಘಟನಾ ಸ್ಥಳಕ್ಕೆ ಹುಣಸೂರು ವಲಯಾರಣ್ಯಧಿಕಾರಿ ಸುಬ್ರಹ್ಮಣ್ಯ, ಉಪ ವಲಯ ಅರಣ್ಯಾಧಿಕಾರಿ ಸಿದ್ದರಾಜು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮಹಜರ್ ನಡೆಸಿದರು. ಕಾಡಾನೆಗಳು ಅರಣ್ಯದಿಂದಾಚೆ ಹೊರ ಬಾರದಂತೆ ನಿಗಾ ವಹಿಸಲಾಗುವುದೆಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

    ಶಾಸಕ ಹರೀಶ್ ಗೌಡ ಭೇಟಿ: ಕಾಡಾನೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಶಾಸಕ ಜಿ.ಡಿ.ಹರೀಶ್ ಗೌಡ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್ ಹನಗೋಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಾವೇರಿ ಅವರ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜೋಗೇಂದ್ರನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಗಾಯಾಳು ಕಾವೇರಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು.

    ಗ್ರಾಮಸ್ಥರ ಆಕ್ರೋಶ: ಆಗಾಗ್ಗೆ ನಡೆಯುತ್ತಿರುವ ಕಾಡಾನೆ ದಾಳಿ ತಡೆಗೆ ಸರ್ಕಾರ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಪರಿಹಾರ ಘೋಷಿಸಿ ಕೈ ತೊಳೆದುಕೊಳ್ಳುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts