More

    ಕಡಬ ಮೆಸ್ಕಾಂ ದ್ವಿಪಥ ವಿದ್ಯುತ್ ಲೈನ್ ಅಳವಡಿಕೆ

    ಪ್ರವೀಣ್‌ರಾಜ್ ಕೊಲ ಕಡಬ

    ಲೋ ವೋಲ್ಟೇಜ್, ಅನಿಯಮಿತ ವಿದ್ಯುತ್ ಕಡಿತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದ್ವಿಪಥ ವಿದ್ಯುತ್ ಲೈನ್ ಅಳವಡಿಕೆಯೊಂದಿಗೆ ಕಡಬ ಮೆಸ್ಕಾಂ ಸಬ್‌ಸ್ಟೇಶನ್‌ನ ಸಾಮರ್ಥ್ಯ ವೃದ್ಧಿಯಾಗಿದ್ದು, ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲವೂ ತಡೆರಹಿತ ಗುಣಮಟ್ಟದ ವಿದ್ಯುತ್ ಪೂರೈಸಲು ಮೆಸ್ಕಾಂ ಸಜ್ಜಾಗಿದೆ.

    ಕಡಬ ಮೆಸ್ಕಾಂ ಉಪ ವಿಭಾಗದ ಕಡಬ 33/11 ಕೆವಿ ಸಬ್‌ಸ್ಟೇಶನ್‌ನಲ್ಲಿ 1.81 ಕೋಟಿ ರೂ. ವೆಚ್ಚದಲ್ಲಿ 12.5 ಎಂವಿಎ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವ ಮೂಲಕ ಸಾಮರ್ಥ್ಯ ವೃದ್ಧಿಸಲಾಗಿದೆ. 16.9 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು 110 ಕೆವಿ ಸಬ್‌ಸ್ಟೇಶನ್‌ನಿಂದ 25 ಕಿ.ಮೀ. ನೆಲ್ಯಾಡಿ ಟ್ಯಾಪಿಂಗ್ ಪಾಯಿಂಟ್ ಆಲಂಕಾರು ತನಕ ದ್ವಿಪಥ ಲೈನ್ ಅಳವಡಿಕೆಯಿಂದಾಗಿ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯ ನಿರೀಕ್ಷೆ ಹೊಂದಲಾಗಿದೆ. ಒಂದು ವರ್ಷ ಅವಧಿಯಲ್ಲಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 3.25 ಕೋಟಿ ರೂ. ವೆಚ್ಚದಲ್ಲಿ 65 ಹೆಚ್ಚುವರಿ ಪರಿವರ್ತಕ ಅಳವಡಿಸಲಾಗಿದ್ದು, ಸುಮಾರು 50 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. 1.4 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಬದಲಾವಣೆ ಕೆಲಸ ನಡೆದಿದ್ದು, ಸುಮಾರು 49 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. 1.50 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಸ್ಥಾವರ ಹಾಗೂ ಗಂಗಾಕಲ್ಯಾಣ ಯೋಜನೆಗೆ ವಿದ್ಯುದೀಕರಣ ಮಾಡಲಾಗಿದೆ.

    ಕಡಬ ಉಪ ವಿಭಾಗಕ್ಕೆ 22 ಗ್ರಾಮಗಳ ವ್ಯಾಪ್ತಿ: ಕಡಬ, ಆಲಂಕಾರು, ಬಿಳಿನೆಲೆ ಹಾಗೂ ನೆಲ್ಯಾಡಿ ಶಾಖಾ ಕಚೇರಿಗಳ ಒಟ್ಟು 22 ಗ್ರಾಮಗಳ ವ್ಯಾಪ್ತಿಯನ್ನು ಕಡಬ ಮೆಸ್ಕಾಂ ಉಪ ವಿಭಾಗ ಹೊಂದಿದೆ. ಕಡಬ ಹಾಗೂ ನೆಲ್ಯಾಡಿ ವಿದ್ಯುತ್ ಸಬ್‌ಸ್ಟೇಶನ್‌ಗಳು ಇದರ ವ್ಯಾಪ್ತಿಯಲ್ಲಿವೆ. ಉಪ ವಿಭಾಗ ವ್ಯಾಪ್ತಿಯಲ್ಲಿ ಎಚ್‌ಟಿ 2-4, ಎಲ್‌ಟಿ 7-36, ಭಾಗ್ಯಜ್ಯೋತಿ-1401, ಮನೆ-17103, ವಾಣಿಜ್ಯ-2047, ಕೃಷಿ-8642, ಕೈಗಾರಿಕೆ-236, ಕುಡಿಯುವ ನೀರಿನ ಸ್ಥಾವರ-242, ಬೀದಿದೀಪ-178 ಹೀಗೆ ಒಟ್ಟು 29892 ವಿದ್ಯುತ್ ಬಳಕೆದಾರ ಸಂಪರ್ಕಗಳಿವೆ. ಕಡಬ ತಾಲೂಕು ಮಟ್ಟದ ಉಪ ವಿಭಾಗ ಕಚೇರಿ 2009ರಲ್ಲೇ ಆರಂಭಗೊಂಡಿತ್ತು. ಇದರಿಂದ ಮೆಸ್ಕಾಂನ ಕೆಲಸಗಳಿಗೆ ಪುತ್ತೂರಿಗೆ ಅಲೆಯಬೇಕಾಗಿದ್ದ ಬಳಕೆದಾರರು ಕಡಬದಲ್ಲೇ ಕೆಲಸ ಮಾಡಿಸಿಕೊಳ್ಳುವಂತಾಗಿದೆ.

    ಬೇಕಿದೆ ಪೂರ್ಣ ಪ್ರಮಾಣದ ಸೇವಾ ಕೇಂದ್ರ:ಉಪ ವಿಭಾಗ ವ್ಯಾಪ್ತಿಯ 24/7 ತುರ್ತು ಸೇವೆಗಳಿಗಾಗಿ ಇಲ್ಲಿ ಸೇವಾ ಕೇಂದ್ರ (ಸರ್ವೀಸ್ ಸ್ಟೇಶನ್) ಕೆಲಸ ಮಾಡುತ್ತಿದೆ. ಆದರೆ ಕೇವಲ ವಾಹನ ಮಾತ್ರ ಮಂಜೂರಾಗಿದ್ದು, ಸೇವಾ ಕೇಂದ್ರಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಸಿಕ್ಕಿಲ್ಲ. ಉಪ ವಿಭಾಗದ ಬಹುತೇಕ ವಿದ್ಯುತ್ ಲೈನ್‌ಗಳು ಅರಣ್ಯ ಪ್ರದೇಶದಲ್ಲೇ ಇರುವುದರಿಂದ ಪದೇಪದೆ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಮಳೆಗಾಲದಲ್ಲಂತೂ ಸಮಸ್ಯೆ ಹೇಳತೀರದು. ಆನೆ ಹಾವಳಿ ಹಾಗೂ ನಕ್ಸಲ್ ಬಾಧಿತ ಅರಣ್ಯ ಭಾಗಗಳೂ ಈ ವ್ಯಾಪ್ತಿಯಲ್ಲಿರುವುದರಿಂದ ಉಪ ವಿಭಾಗಕ್ಕೆ ಪೂರ್ಣ ಪ್ರಮಾಣದ ಸೇವಾ ಕೇಂದ್ರ ಸಿಗಬೇಕೆಂಬುದು ಸ್ಥಳೀಯ ಬಳಕೆದಾರರ ಬೇಡಿಕೆ.

    ವಿದ್ಯುತ್ ಸಮಸ್ಯೆ ಸಂಬಂಧಪಟ್ಟ ಕಡಬದ ಜನರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದ್ವಿ ಪಥ ವಿದ್ಯುತ್ ಲೈನ್ ಅಳವಡಿಕೆ, ಸಬ್‌ಸ್ಟೇಶನ್‌ನ ಸಾಮರ್ಥ್ಯ ವೃದ್ಧಿ ಸೇರಿದಂತೆ ಹಲವಾರು ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು. ಇನ್ನಿರುವ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.
    -ಎಸ್ ಅಂಗಾರ, ಶಾಸಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts