More

    ಜಿಲ್ಲೆಯ ಅಭಿವೃದ್ಧಿ ತಡೆದ ಸಿಆರ್‌ಎಸ್: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಬಿಜೆಪಿ ಜತೆ ಸೇರಿ ಚಲುವರಾಯಸ್ವಾಮಿ ಮತ್ತವರ ತಂಡ ಅಭಿವೃದ್ಧಿಯನ್ನು ತಡೆದರು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
    ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಚಲುವರಾಯಸ್ವಾಮಿ ಮತ್ತವರ ಕಂಪನಿ ಪ್ಲಾೃನ್ ಮಾಡಿ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದರು. ಡಿ.ಕೆ.ಶಿವಕುಮಾರ್ ಹೇಳಿದರೂ ಕೇಳಲಿಲ್ಲ. ಪರಿಣಾಮ ಸುಮಲತಾ ಗೆದ್ದರು. ಇತ್ತ ಅವರಿಂದಲೇ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸುಮಲತಾ ಅವರನ್ನು ಗೆಲ್ಲಿಸಲು ಹಗಲು-ರಾತ್ರಿ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡರು ನಾವೆಲ್ಲ ತಪ್ಪು ಮಾಡಿದ್ದೇವೆಂದು ಈಗ ಅರಿವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ ಸುಮಲತಾ ಪರ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡರು ಮತ್ತೆ ಅವರ ಪರ ಕಾಣಿಸಿಕೊಂಡರೆ ಅಮಾನತು ಮಾಡುವುದಾಗಿ ಪಕ್ಷದಿಂದ ಸೂಚನೆ ನೀಡಲಾಗಿದೆ. ನಿಖಿಲ್ ಗೆದ್ದಿದ್ದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತಿತ್ತು ಎಂದರು.
    ಚಲುವರಾಯಸ್ವಾಮಿ ಅವರಿಗೆ ರಾಜಕೀಯ ಅಧಿಕಾರ ಕೊಟ್ಟು ಸಾರಿಗೆ ಸಚಿವರನ್ನಾಗಿ ಮಾಡಿ ಪ್ರಭಾವಿ ರಾಜಕಾರಣಿಯಾಗಿ ರೂಪಿಸಿದ್ದ ಜೆಡಿಎಸ್‌ಗೆ ಅವರು ನಿಷ್ಠೆಯಿಂದ ಇರಬೇಕಿತ್ತು. ಆದರೆ ಹಣಕ್ಕಾಗಿ ಅವರು ಮತ್ತು ರಮೇಶ ಬಂಡಿಸಿದ್ದೇಗೌಡ ಪಕ್ಷಕ್ಕೆ ಮೋಸ ಮಾಡಿ ಕಾಂಗ್ರೆಸ್ ಸೇರಿದರು. ಅವರು ಅಧಿಕಾರ ನೀಡಿದ ಜೆಡಿಎಸ್‌ಗೆ ನಿಷ್ಠರಾಗಲಿಲ್ಲ. ಹೋಗಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಿ ಎಂದ ಕಾಂಗ್ರೆಸ್‌ಗೂ ನಿಷ್ಠೆ ತೋರಿಸಲಿಲ್ಲ. ಈಗ ರಮೇಶ ಬಂಡಿಸಿದ್ದೇಗೌಡ ಅವರೇ ಕಾಂಗ್ರೆಸ್ ಸೇರಿ ತಪ್ಪು ಮಾಡಿದ್ದಾರೆ. ಅದೊಂದು ದರಿದ್ರ ಪಕ್ಷ, ದಯಮಾಡಿ ಕ್ಷಮಿಸಿ ಎಂದು ಹೋದ ಕಡೆಯಲೆಲ್ಲ ಜೆಡಿಎಸ್ ಮುಖಂಡರ ಬಳಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
    ಇನ್ನು ರಾಜ್ಯ ರಾಜಕಾರಣಕ್ಕೆ ಸುಮಲತಾ ಬಂದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಬಿಜೆಪಿ ಸೇರ್ಪಡೆಯಾದರೂ ಯಾವುದೇ ಸಮಸ್ಯೆ ಇಲ್ಲ. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸುಮಲತಾ ಬಂದರೆ ಬರಲಿ. ಆದರೆ ಅವರನ್ನು ನಂಬಿ ರಾಜಕಾರಣ ಮಾಡಿದವರು ಉಳಿದಿಲ್ಲ. ಹಾಗಾದರೆ ಇಂಡುವಾಳು ಸಚ್ಚಿದಾನಂದನಿಗೂ ಗ್ರಹಚಾರ ಬಂತು ಎಂದು ವ್ಯಂಗ್ಯವಾಡಿದರು.
    ಎಚ್.ಡಿ.ಕುಮಾರಸ್ವಾಮಿ ಅವರು ಪ್ರಲ್ಹಾ ಜೋಶಿ ವಿರುದ್ಧ ಮಾತನಾಡಿದ್ದಾರೆಯೇ ಹೊರತು ಬ್ರಾಹ್ಮಣರ ವಿರುದ್ಧವಲ್ಲ. ಎಚ್‌ಡಿಕೆ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ 25 ಕೋಟಿ ರೂ ನೀಡಿದ್ದರು. ಸಮುದಾಯದ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ನೀಡಿ ಆ ಜನಾಂಗದ ಪರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜೋಶಿಯನ್ನು ಸಿಎಂ ಹುದ್ದೆಗೆ ತರಲು ನಡೆಸಿರುವ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದಾರೆ ಹೊರತು, ಬ್ರಾಹ್ಮಣ ಸಮುದಾಯದ ವಿರುದ್ಧ ಅಲ್ಲ ಎಂದು ಸಮರ್ಥಿಸಿಕೊಂಡರು.
    ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಇಂಡುವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಸದಸ್ಯ ರಮೇಶ್‌ರಾಜು, ಮುಖಂಡರಾದ ಎಸ್.ಟಿ.ಸಿದ್ದೇಗೌಡ, ಹನುಮಂತು, ತಿಮ್ಮೇಗೌಡ, ಎಸ್.ಎನ್.ಯೋಗೇಶ್, ಎಸ್.ಎಲ್.ಶಿವಣ್ಣ, ಕರೀಗೌಡ, ಗುತ್ತಿಗೆದಾರರಾದ ರವಿಕುಮಾರ್, ಯತಿರಾಜು, ನವೀನ್‌ಕುಮಾರ್, ರೈತ ಮುಖಂಡರಾದ ಸಿದ್ದೇಗೌಡ, ಇಂಡುವಾಳು ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts