More

    ರಾಜಕೀಯ ಬೆಳವಣಿಗೆಯಿಂದ ದೂರ ಉಳಿದ ಮಾಧುಸ್ವಾಮಿ ; ರಾಜಕೀಯ ವಲಯದಲ್ಲಿ ಹಲವು ಊಹಾಪೋಹ ; ನೀರಾವರಿ ಯೋಜನೆ ಅನುಷ್ಠಾನದಲ್ಲಿ ಬ್ಯುಸಿ

    ತುಮಕೂರು : ಸಮ್ಮಿಶ್ರ ಸರ್ಕಾರ ಪತನ ಹಾಗೂ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಸದನದಲ್ಲಿ ಬಿಎಸ್‌ವೈ ಬೆನ್ನಿಗೆ ನಿಂತು ಸಚಿವ ಸಂಪುಟದಲ್ಲಿ ಪ್ರಭಾವಿ ಖಾತೆ ಪಡೆದು, ಸಿಎಂ ಆಪ್ತ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದ ಜೆ.ಸಿ.ಮಾಧುಸ್ವಾಮಿ ಪ್ರಸ್ತುತ ರಾಜಕೀಯ ಬೆಳವಣಿಗೆಯಿಂದ ದೂರ ಉಳಿದಿರುವುದು ಆಶ್ಚರ್ಯ ಮೂಡಿಸಿದೆ.

    ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದರೂ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ಬೆಳಗ್ಗೆ ತುಮಕೂರಿನಲ್ಲಿ ಅಧಿಕಾರಿಗಳ ಸಭೆ ಹಾಗೂ ಮಧ್ಯಾಹ್ನದಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬೋರನಕಣಿವೆಗೆ ಗಂಟೇನಹಳ್ಳಿ ಕೆರೆಯಿಂದ ನೀರು ಹರಿಸುವ ಸಾಧ್ಯತೆ ಬಗ್ಗೆ ಸರ್ವೇ ನಡೆಸಲು ಖುದ್ದು ಸ್ಥಳದಲ್ಲಿಯೇ ಉಳಿದರು.

    ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡ ನಂತರ ಸಿಎಂ ಜತೆ ಅಂತರ ಕಾಯ್ದುಕೊಂಡಿರುವ ಮಾಧುಸ್ವಾಮಿ, ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿಯೂ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿರಲಿಲ್ಲ. ಈಗ ಲಿಂಗಾಯತ ಸಮುದಾಯದ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳಾಗುತ್ತಿದ್ದರೂ ಮಾಧುಸ್ವಾಮಿ ಮೌನವಹಿಸಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಕ್ಕೆ ಕಾರಣವಾಗಿದೆ.

    ಈ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಕರೊನಾ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ, ಈ ಬಗ್ಗೆಯಾಗಲಿ ಅಥವಾ ಸರ್ಕಾರದಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೇನೆ ಎಂದರು.

    ರಾಜ್ಯದ ಉಸ್ತುವಾರಿ ಅರುಣ್‌ಸಿಂಗ್ ಹಿರಿಯ ಸಚಿವರ ಜತೆ ಮಾತುಕತೆ ನಡೆಸಿದರು, ನನ್ನ ಜತೆಗೂ ಮಾತನಾಡಿದ್ದು ಸಣ್ಣ ನೀರಾವರಿ ಖಾತೆಗೆ ಸಂಬಂಧಪಟ್ಟ ವಿಯಷದ ಬಗ್ಗೆಯಷ್ಟೇ ವಿವರಣೆ ಪಡೆದರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಟಲ್ ಭೂಜಲ್ ಕಾರ್ಯಕ್ರಮ ಯಶಸ್ವಿ ಅನುಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಂತೆ ನಾಯಕತ್ವ ಬದಲಾವಣೆ ಬಗ್ಗೆ ನಮ್ಮ ಜತೆ ಮಾತನಾಡಲ್ಲಿ ಎಂದು ಸ್ಪಷ್ಟಪಡಿಸಿದರು.

    ಪ್ರಮುಖ ಮೂರು ನೀರಾವರಿ ಯೋಜನೆಗಳಿಂದ ನಮ್ಮ ಪಾಲಿಗೆ ಲಭ್ಯವಿರುವ ನೀರು ಬಳಸಿಕೊಂಡು ಜಿಲ್ಲೆಯೆಲ್ಲೆಡೆ ಕೆರೆ ತುಂಬಿಸುವ ಬಗ್ಗೆ ಡಿಪಿಆರ್ ತಯಾರಿಸಿದ್ದು ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲು ಅವಕಾಶ ಕೋರಿ ಗುರುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಅವನ್ನು ಭೇಟಿಯಾಗಿ ಎರಡು ನಿಮಿಷದಲ್ಲಿ ಮನವಿ ಮಾಡಿದೆ, ರಾಜಕೀಯದ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದರು.

    ಜನರು ಕಷ್ಟದಲ್ಲಿರುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ನನಗೆ ಆಸಕ್ತಿ ಇಲ್ಲ, ಬೆಂಗಳೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದ್ದರೂ ನಾನು ನನ್ನ ಕ್ಷೇತ್ರದಲ್ಲಿದ್ದೇನೆ. ವರಿಷ್ಠರಿಗೆ ನನ್ನ ಖಾತೆಗೆ ಸಂಬಂಧಪಟ್ಟ ಪ್ರಗತಿಯ ವರದಿ ನೀಡಿದ್ದೇನೆ, ರಾಜಕೀಯದ ಬಗ್ಗೆ ಏನೂ ಪ್ರತಿಕ್ರಿಯೆ ನೀಡದಿರಲು ನಾನು ನಿರ್ಧರಿಸಿದ್ದೇನೆ.
    ಜೆ.ಸಿ.ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts