More

    ಅಕ್ರಮ ಆಕ್ಸಿಜನ್ ಸಾಗಿಸಿದರೆ ಕ್ರಿಮಿನಲ್ ಕೇಸ್ ; ಸಚಿವ ಮಾಧುಸ್ವಾಮಿ ಸಮ್ಮುಖದಲ್ಲೇ ಎಚ್ಚರಿಕೆ ಕೊಟ್ಟ ಡಿಸಿ

    ತುಮಕೂರು : ಆಮ್ಲಜನಕ ಪೂರೈಕೆ ಜಿಲ್ಲಾಡಳಿತದಿಂದಲೇ ಆಗಬೇಕು. ತಮ್ಮ ಗಮನಕ್ಕೆ ಬಾರದೆ ಆಮ್ಲಜನಕ ರವಾನೆ ಹಾಗೂ ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ, ನೀವೇನಾದರೂ ಅಂತಹ ಕೆಲಸ ಮಾಡಿದ್ದೇ ಆದಲ್ಲಿ ನಿಮ್ಮ ಸದಸ್ಯತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ…
    ಹೀಗೆಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮ್ಮುಖದಲ್ಲೇ ಎಚ್ಚರಿಕೆ ನೀಡಿದ್ದು ಗಮನಸೆಳೆಯಿತು.

    ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ನಯಾಜ್ ಅಹಮದ್, ಸದಸ್ಯ ಬಿ.ಎಸ್.ಮಂಜುನಾಥ್, ತಮ್ಮ ವ್ಯಾಪ್ತಿಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಕ್ಸಿಜನ್ ಬೆಡ್‌ಗಾಗಿ ಪೈಪ್‌ಲೈನ್ ಅಳವಡಿಕೆಗೆ ಒಪ್ಪಿಗೆ ಕೊಡಿ, ಅಗತ್ಯವಿರುವ ಆಕ್ಸಿಜನ್ ಅನ್ನು ದಾನಿಗಳ ಮೂಲಕ ನಾವೇ ಪೂರೈಕೆ ಮಾಡಿಕೊಳ್ಳುತ್ತೇವೆ ಎಂದಾಗ ವೈ.ಎಸ್.ಪಾಟೀಲ ಅವರು ಜಿಲ್ಲಾಡಳಿತದ ಗಮನಕ್ಕೆ ತರದೆ ಆಕ್ಸಿಜನ್ ಬಳಕೆ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಲ್ಲದೆ, ನಿಮ್ಮ ಸದಸ್ಯತ್ವವೂ ಹೋಗಲಿದೆ ಎಂದು ಗುಡುಗಿದರು.

    ಜಿಲ್ಲಾಧಿಕಾರಿ ಹೇಳಿಕೆಯಿಂದ ತಬ್ಬಿಬ್ಬಾದ ಪಾಲಿಕೆ ಸದಸ್ಯರು ಕೆಲಹೊತ್ತು ವಾಗ್ವಾದಕ್ಕಿಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಪಾಟೀಲರು ಜಿಲ್ಲಾದಂಡಾಧಿಕಾರಿ ಕೂಡ. ವಾಸ್ತವಕ್ಕೆ ತಕ್ಕಂತೆ ನಿಮ್ಮನ್ನು ಎಚ್ಚರಿಸಿದ್ದಾರೆ. ಆಮ್ಲಜನಕ ಪೂರೈಕೆ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಲಭ್ಯವಿಲ್ಲ. ಆಮ್ಲಜನಕ ಪೂರೈಕೆಯಾದರೆ ಜಿಲ್ಲಾಸ್ಪತ್ರೆಯಲ್ಲೆ 200 ಹಾಸಿಗೆಗಳನ್ನು ಹೆಚ್ಚಿಸಲಾಗುವುದು. ಆಮ್ಲಜನಕವನ್ನು ಜಿಲ್ಲಾಧಿಕಾರಿ ಒಪ್ಪಿಗೆ ಮೇರೆಗೆ ಪಡೆಯಬೇಕು. ಹಾಗಾಗಿ, ಆಮ್ಲಜನಕ ಸಾಂದ್ರಕಗಳ ಮೂಲಕ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿ ಹೇಳಿದರು.

    ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ಐಸಿಯು, ವೆಂಟಿಲೇಟರ್, ಆಮ್ಲಜನಕ ಹಾಸಿಗೆಗಳಿವೆ ಎಂಬ ಮಾಹಿತಿ ಸಿಗುವ ವ್ಯವಸ್ಥೆ ಮಾಡಿದರೆ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗಲಿದೆ ಎಂದು ಸಭೆಯ ಗಮನಸೆಳೆದರು.
    ಸಂಸದ ಜಿ.ಎಸ್.ಬಸವರಾಜು, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ಡಾ.ಕೆ.ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

    ಪಿಂಕ್ ವಲಯಕ್ಕೆ ತುಮಕೂರು: ಪಾಲಿಕೆ ವ್ಯಾಪ್ತಿಯಲ್ಲಿ ಕರೊನಾ ನಿಗ್ರಹಕ್ಕೆ ಸದಸ್ಯರೆಲ್ಲರೂ ಹೆಚ್ಚಿನ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿ ಜಿಲ್ಲಾಡಳಿತದ ಜತೆಗೆ ಸಹಕರಿಸಬೇಕು. ಕಟ್ಟುನಿಟ್ಟಿನ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಕೆಂಪು ವಲಯದಲ್ಲಿದ್ದ ತುಮಕೂರು ಪ್ರಸ್ತುತ ಪಿಂಕ್ ವಲಯಕ್ಕೆ ಬಂದಿದೆ. ಆದರೂ, ಜಿಲ್ಲೆ ಸಮಾಧಾನದ ಸ್ಥಿತಿಗೆ ತಲುಪಬೇಕೆಂದರೆ ಸಂಪೂರ್ಣ ಕರೊನಾ ನಿಗ್ರಹಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಸೋಂಕಿತರ ಆರೈಕೆಗಾಗಿ ಕೋವಿಡ್ ಕೇರ್‌ಸೆಂಟರ್ ತೆರೆಯಲಾಗಿದೆ. ಆದರೆ, ಸೆಂಟರ್‌ಗೆ ಸೋಂಕಿತರು ಬರಲು ಹಿಂದೇಟು ಹಾಕುತ್ತಿದ್ದು ಇನ್ನು ಮುಂದೆ ಪಾಸಿಟಿವ್ ಬಂದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸುವ ವ್ಯವಸ್ಥೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗಾಗಿ, ಹೊಸ ಪಾಸಿಟಿವ್ ಪ್ರಕರಣಗಳ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್‌ಗೆ ಸ್ಥಳಾಂತರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರೆಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts