More

    ಅಮೃತ ಯೋಜನೆಗೆ ಗ್ರಾಪಂ ಹೆಸರು ಗುರುತಿಸಿ ನೀಡಿ : ಶಾಸಕರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ

    ತುಮಕೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅನುಷ್ಠಾನಗೊಳಿಸಿರುವ ಅಮೃತ ಗ್ರಾಪಂ ಯೋಜನೆಯಡಿ ಜಿಲ್ಲೆಯ ಆಯ್ದ 38 ಗ್ರಾಪಂಗಳನ್ನು ಅಮೃತ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾಲೂಕುವಾರು ಗ್ರಾಪಂ ಆಯ್ಕೆ ಮಾಡಲು ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಜಿಪಂ ಸಭಾಂಗಣದಲ್ಲಿ ಬುಧವಾರ ಅಮೃತ ಗ್ರಾಪಂ ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಗ್ರಾಪಂ ಯೋಜನೆಯಡಿ ಆಯ್ದ ಗ್ರಾಪಂಗಳಲ್ಲಿ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಚರ್ಚಿಸಲಾಯಿತು.

    ಅಮೃತ ಗ್ರಾಮ ಯೋಜನೆಯಡಿ ಜಿಲ್ಲೆಯಲ್ಲಿ 38 ಗ್ರಾಪಂ ಅಭಿವೃದ್ಧಿಗೊಳಿಸಲು ಸರ್ಕಾರ ಗುರಿ ನಿಗದಿಪಡಿಸಿದೆ. ಅದರಂತೆ ಜಿಲ್ಲೆಯ ಪ್ರತಿ ತಾಲೂಕಿಗೆ 4 ಗ್ರಾಪಂ ಗುರುತಿಸಿ ಹೆಸರು ನೀಡುವಂತೆ ಎಲ್ಲ ಶಾಸಕರಿಗೆ ಸಚಿವ ಮಾಧುಸ್ವಾಮಿ ತಿಳಿಸಿದರು. ಗ್ರಾಪಂ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.

    ಬೀದಿ ದೀಪ, ಸೋಲಾರ್ ಬೀದಿ ದೀಪ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ.100 ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾಪಂ ಕಟ್ಟಡಗಳಲ್ಲಿ ಸೌರವಿದ್ಯುತ್ ಅಳವಡಿಕೆ, ಅಮೃತ ಉದ್ಯಾನವನ, ಗ್ರಾಪಂ ಗ್ರಂಥಾಲಯ ಡಿಜಿಟಲೀಕರಣ, ಶಾಲೆಗಳು ಮತ್ತು ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಗೃಹ ಸೌಲಭ್ಯ ಕಲ್ಪಿಸುವುದು ಎಂದರು.

    ಶಾಲೆಗಳಲ್ಲಿ ಆಟದ ಮೈದಾನ ಹಾಗೂ ಆವರಣ ಗೋಡೆ ನಿರ್ಮಿಸುವುದು, ಕೆರೆ, ಕಲ್ಯಾಣಿಗಳ ಪುನಶ್ಚೇತನ ಹಾಗೂ ಗ್ರಾಮಗಳ ಇತರ ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಿದೆ. ಆಯ್ಕೆಯಾದ ಗ್ರಾಪಂ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ 25 ಲಕ್ಷ ರೂ. ಅನುದಾನ ನೀಡಲಿದೆ ಎಂದರು.

    ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಅಮೃತ ಗ್ರಾಮ ಯೋಜನೆ ಮಾರ್ಗಸೂಚಿಯಂತೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆ ನಳ ಸಂಪರ್ಕ, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಹಾಗೂ 15ನೇ ಹಣಕಾಸು ಯೋಜನೆಯಡಿ ಬೀದಿ ಅಥವಾ ಸೋಲಾರ್ ದೀಪಗಳ ಅಳವಡಿಕೆ, ನರೇಗಾ ಯೋಜನೆಯಡಿ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದರು.

    ಅಮೃತ ಗ್ರಾಮ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಿದ್ದು, ಶೀಘ್ರವಾಗಿ ಗ್ರಾಪಂಗಳನ್ನು ಗುರುತಿಸಿ ಹೆಸರು ನೀಡಬೇಕು. ಈ ಯೋಜನೆಯ ಯಶಸ್ವಿಗಾಗಿ ಇತರ ಮೂಲಗಳಿಂದ ದೊರೆಯಬಹುದಾದ ಆರ್ಥಿಕ ದೇಣಿಗೆ, ಭೌತಿಕ ಸಂಪನ್ಮೂಲ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಸಿಎಸ್‌ಆರ್ ಅನುದಾನ ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಬಹುದು ಎಂದರು. ಸಭೆಯಲ್ಲಿ ಶಾಸಕರಾದ ಡಾ.ಎಚ್.ಡಿ.ರಂಗನಾಥ್, ಮಸಾಲ ಜಯರಾಮ್, ಡಾ.ಸಿ.ಎಂ.ರಾಜೇಶ್‌ಗೌಡ, ಎಂ.ವಿ.ವೀರಭದ್ರಯ್ಯ, ಚಿದಾನಂದ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಇದ್ದರು.

    ಅಮೃತ ಮಹೋತ್ಸವ ವಸತಿ ಯೋಜನೆಯಡಿ ವಸತಿ ರಹಿತರಿಗೆ ವಸತಿ ನಿರ್ಮಿಸಲು ಜಿಲ್ಲೆಯಲ್ಲಿ 43 ಗ್ರಾಪಂಗಳನ್ನು ಆಯ್ಕೆ ಮಾಡಬೇಕಾಗಿದ್ದು, ಈ ಪೈಕಿ ತಾಲೂಕಿಗೆ ಕನಿಷ್ಠ 2 ಪಂಚಾಯತ್ ಆಯ್ಕೆ ಮಾಡಿ ವಸತಿ ಇಲ್ಲದವರಿಗೆ ವಸತಿ ನಿರ್ಮಿಸಲಾಗುವುದು.
    ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts