More

    ಜ.19ರಿಂದ ಪಲ್ಸ್ ಪೋಲಿಯೋ ಅಭಿಯಾನ

    ರಾಮನಗರ: ಜಿಲ್ಲೆಯಲ್ಲಿ ಜ.19ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಾಲಕರು 5 ವರ್ಷದೊಳಗಿನ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಪಿ ವಿಜಯ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.19ರಂದು ಪೋಲಿಯೋ ಲಸಿಕೆ ನೀಡಲಾಗುವುದು. ಜ.20ರಿಂದ 22ರವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮಕ್ಕಳು ಲಸಿಕೆ ಪಡೆದಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಹಾಗೂ ಜನವರಿ 19ರಂದು ಮಕ್ಕಳು ಲಸಿಕೆ ಪಡೆಯದೇ ಬಿಟ್ಟು ಹೋಗಿದ್ದಲ್ಲಿ ಅವರಿಗೆ ಲಸಿಕೆ ನೀಡುವಂತೆ ತಿಳಿಸಿದರು.

    ಜಿಲ್ಲೆಯ ಪ್ರವಾಸಿ ತಾಣಗಳು, ಜಾತ್ರೆ, ಸಂತೆ ನಡೆಯುವ ಸ್ಥಳಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಲಸಿಕೆ ನೀಡಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
    ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕರು, ಇಟ್ಟಿಗೆ ಕಾರ್ಖಾನೆ, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಸ್ಲಂಗಳಲ್ಲಿ ವಲಸಿಗರು ಹೆಚ್ಚಾಗಿರುತ್ತಾರೆ. ಈ ಸ್ಥಳಗಳಲ್ಲಿ ಲಸಿಕೆ ಹಾಕಲು ಯೋಜನೆ ರೂಪಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

    ತಾಲೂಕು ಮಟ್ಟದಲ್ಲಿ ಪಲ್ಸ್ ಪೋಲಿಯೋ: ಲಸಿಕೆ ನೀಡಲು ಪೂರ್ವಭಾವಿ ಸಿದ್ಧತಾ ಸಭೆಗಳನ್ನು ನಡೆಸಿ, ಜ. 17 ಹಾಗೂ 18ರಂದು ಜಾಗೃತಿ ಜಾಥಾ ಹಾಗೂ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಿಬೇಕು. ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು. ಹಾಗೂ ಆರೋಗ್ಯ ಇಲಾಖೆಗೆ ಬೇಕಿರುವ ವಾಹನ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ವಿಶ್ವ ಆರೋಗ್ಯ ಸಂಸ್ಥೆಯ ಡಾ. ನಾಗರಾಜು ಮಾತನಾಡಿ, 2011ರಿಂದ ಭಾರತದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಅಕ್ಕಪಕ್ಕದ ರಾಷ್ಟ್ರಗಳಿಂದ ಭಾರತಕ್ಕೆ ಹರಡುವ ಸಾಧ್ಯತೆ ಇದೆ. ಡಿ.11ರಿಂದ 30ರವರೆಗೆ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೆಲವು ಶಾಲೆಗಳಿಗೆ ಕ್ರಿಸ್‌ಮಸ್ ರಜೆ, ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಜ.10ರವರೆಗೆ ಲಸಿಕಾ ಅಭಿಯಾನ ವಿಸ್ತರಿಸಲಾಗಿದೆ ಎಂದರು.

    2019ರ ಗುರಿ ಮೀರಿ ಸಾಧನೆ: 2019ರ ಮಾರ್ಚ್‌ನಲ್ಲಿ ಜಿಲ್ಲೆಯಲ್ಲಿ ನಡೆದ ಲಸಿಕೆ ಕಾರ್ಯಕ್ರಮದಲ್ಲಿ 82,583 ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. 87,134 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.106ರಷ್ಟು ಸಾಧನೆ ಮಾಡಲಾಗಿದೆ. ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆಯು 250 ಮಕ್ಕಳಿಗೆ ಒಂದು ಲಸಿಕಾ ಕೇಂದ್ರ ತೆರೆಯುವಂತೆ ತಿಳಿಸಿದೆ. ಲಸಿಕಾ ಕೇಂದ್ರ ತೆರೆಯಲು ಜ.5ರೊಳಗಾಗಿ ಯೋಜನೆ ಸಿದ್ಧ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯ್ ಮಾಹಿತಿ ನೀಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎಸ್.ನಿರಂಜನ್, ಆರ್.ಸಿ.ಹೆಚ್. ಅಧಿಕಾರಿ ಡಾ. ಜಿ.ಎಲ್.ಪದ್ಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಂ. ವಿಶ್ವನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts