More

    ಜನಸೇವೆಗೆ ಟೊಂಕಕಟ್ಟಿದ ಜನನಾಯಕರು: ಅಸ್ತಿತ್ವ ಹೆಚ್ಚಿಸಿಕೊಳ್ಳಲು ಲಾಕ್‌ಡೌನ್ ಸದ್ಬಳಕೆ

    ರಾಮನಗರ: ಕರೊನಾ ಮಾನವ ಕುಲದ ಅಸ್ತಿತ್ವಕ್ಕೆ ಸವಾಲು ಹಾಕಿ ನಿಂತಿದೆ. ಎಲ್ಲರೂ ಬದುಕಲೇಬೇಕು ಎನ್ನುವ ಧಾವಂತದಲ್ಲಿದ್ದರೆ ಸರ್ಕಾರ ಮತ್ತು ಸರ್ಕಾರದ ಅಂಗ ಸಂಸ್ಥೆಗಳು ರೋಗ ಹಿಮ್ಮೆಟಿಸುವ ಕಾಯಕದಲ್ಲಿ ನಿರತವಾಗಿವೆ.
    ಇದರ ನಡುವೆ ರಾಜಕೀಯ ಪಕ್ಷಗಳು ಲಾಕ್‌ಡೌನ್ ಸಂದರ್ಭ ಬಳಕೆ ಮಾಡಿಕೊಂಡು ಅಸ್ತಿತ್ವ ಉಳಿಸಿಕೊಳ್ಳುವ, ಹೆಚ್ಚಿಸಿಕೊಳ್ಳುವ ಕೆಲಸ ಮಾಡುವ ಮೂಲಕ ಜನರಿಗೆ ನೆರವಾಗಿವೆ.

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ, ಸಂಸದ ಡಿ.ಕೆ.ಸುರೇಶ್, ಶಾಸಕ ಎ.ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್, ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ವರದರಾಜಗೌಡ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಹೀಗೆ ಹಲವು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಹಾಲಿ, ಮಾಜಿ ಜನಪ್ರತಿನಿಧಿಗಳು ಜನರ ಸೇವೆಗೆ ಟೊಂಕಕಟ್ಟಿ ನಿಂತಿದ್ದಾರೆ.

    ರೈತರಿಗೆ ಅನುಕೂಲ: ಈ ನಡುವೆ ಪೈಪೋಟಿಗೆ ಬಿದ್ದವರಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ರೈತರಿಂದ ನೇರವಾಗಿ ತರಕಾರಿ ಖರೀದಿಸುವ ಮೂಲಕ ಜಿಲ್ಲೆಯ ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭದ ವಾಸನೆ ಇದ್ದರೂ ಸಂಕಷ್ಟದಲ್ಲಿ ಕೈ ಹಿಡಿದ ಜನಪ್ರತಿನಿಧಿಗಳಿಗೆ ಒಂದೆಡೆ ರೈತರು, ಮತ್ತೊಂದೆಡೆ ಜನರು ಶಹಬಾಷ್ ಹೇಳುತ್ತಿದ್ದಾರೆ.

    ತಲುಪಿವೆ ಲಕ್ಷಾಂತರ ಕಿಟ್‌ಗಳು: ಜಿಲ್ಲೆಯಲ್ಲಿ ಬಡ ಮತ್ತು ನಿರ್ಗತಿಕರಿಗೆ ಆಹಾರದ ಕೊರತೆ ಆಗಬಾರದು ಎನ್ನುವ ಸರ್ಕಾರದ ನಿರ್ಧಾರಕ್ಕೆ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು ಕೈಜೋಡಿಸಿರುವ ಜತೆಗೆ, ಸಂಘ-ಸಂಸ್ಥೆಗಳು ಅಷ್ಟೇ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಒಂದೆಡೆ ಮನೆ ಬಾಗಿಲಿಗೆ ಆಹಾರ ಕಿಟ್ ಪೂರೈಸುತ್ತಿದ್ದು, ಸರಿ ಸುಮಾರು 2.5 ಲಕ್ಷ ಆಹಾರ ಕಿಟ್‌ಗಳು ಜಿಲ್ಲೆಯಲ್ಲಿ ಅಗತ್ಯವಿರುವವರ ಮನೆ ಸೇರಿ ಸಂಕಷ್ಟ ನಿವಾರಿಸಿವೆ. ಅಷ್ಟೇ ಅಲ್ಲದೆ, ಕೆಲವು ಸಂಘ ಸಂಸ್ಥೆಗಳು ಪ್ರಚಾರದ ಅಪೇಕ್ಷೆ ಇಲ್ಲದೆ ಪ್ರತಿದಿನ ನೂರಾರು ಮಂದಿಗೆ ಅನ್ನ ನೀಡುವ ಮೂಲಕ ಮೆಚ್ಚುಗೆ ಗಳಿಸುತ್ತಿವೆ.

    ಅಸ್ತಿತ್ವದ ಪ್ರಶ್ನೆ?: ರಾಜಕಾರಣಿಗಳ ಪಾಲಿಗೆ ಕರೊನಾ ಅಸ್ತಿತ್ವದ ಪ್ರಶ್ನೆ ಹುಟ್ಟುಹಾಕಿದೆ. ಇಂತಹ ಸಂದರ್ಭದಲ್ಲಿ ಜನತೆಯ ನೆರವಿಗೆ ಧಾವಿಸದೇ ಇದ್ದರೆ ಇದರ ರಾಜಕೀಯ ಪರಿಣಾಮ ಬೇರೆಯದ್ದೇ ಆಗಿರುತ್ತದೆ ಎನ್ನುವ ಅರಿವು ಅವರಿಗಿದ್ದ ಕಾರಣದಿಂದಲೇ ಜನತೆ ನಿರಾಳರಾಗುವಂತೆ ಮಾಡಿದೆ.

    ಬೀದಿಗಿಳಿದ ನಾಯಕರು: ಎಚ್‌ಡಿಕೆ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಅಪರೂಪದ ಅತಿಥಿಯಾಗಿದ್ದರು. ಆದರೆ ಮಗನ ಮದುವೆ ಸಂದರ್ಭದಲ್ಲಿ ಸಾಕಷ್ಟು ಬಾರಿ ಬಂದು ಹೋಗಿದ್ದು ಬಹುಚರ್ಚಿತ ವಿಷಯವೂ ಆಗಿತ್ತು. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಜನ ಮೆಚ್ಚುಗೆಯನ್ನೂ ಗಳಿಸಿತು.

    ಆದೇ ರೀತಿ ಸಂಸದ ಸುರೇಶ್, ರೈತರ ಜಮೀನುಗಳಿಗೆ ತೆರಳಿ ತರಕಾರಿ ಖರೀದಿಸಿದ್ದು ಮಾದರಿ ಎನಿಸಿತು. ಮತ್ತೊಂದೆಡೆ ಬಿಜೆಪಿಯ ಎಂ.ರುದ್ರೇಶ್ ನೇತೃತ್ವದಲ್ಲಿ ವರದರಾಜಗೌಡ ಮುಂತಾದವರು ಆಹಾರ, ಔಷಧ, ತರಕಾರಿಯನ್ನು ಮನೆ ಬಾಗಿಲಿಗೆ ತಲುಪಿಸಿದ್ದೂ ಸಹ ಜನಮಾನಸದಲ್ಲಿ ಉಳಿಯುವಂತಾಯಿತು.

    ಸಿ.ಪಿ. ಯೋಗೇಶ್ವರ್ ಹೀಗೇಕೆ?: ರಾಜಕೀಯ ಪಕ್ಷಗಳ ಹಾಲಿ ಮತ್ತು ಮಾಜಿ ನಾಯಕರು ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿದ್ದರೆ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಎಲ್ಲಿಯೂ ಕಾಣಿಸಿಕೊಳ್ಳದಿವುದು ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಯೋಗೇಶ್ವರ್ ರಾಜಕೀಯ ಎದುರಾಳಿಗಳು ಬಿರುಸಿನಿಂದ ಓಡಾಟ ನಡೆಸುತ್ತಿದ್ದರೆ, ಯೋಗೇಶ್ವರ್ ಅವರಾಗಲಿ, ಅವರ ಬೆಂಬಲಿಗರಾಗಲಿ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿದ್ದು, ಯೋಗೇಶ್ವರ್ ಹೀಗೇಕೆ ಮಾಡುತ್ತಿದ್ದಾರೆ ಎನ್ನುವ ಚರ್ಚೆಯನ್ನು ಕ್ಷೇತ್ರದಲ್ಲಿ ಆರಂಭವಾಗಿದೆ.

    ಕರೊನಾದಂತಹ ಸಂದರ್ಭದಲ್ಲಿ ರಾಜಕೀಯ ಎನ್ನುವುದಕ್ಕಿಂತ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ಜವಾಬ್ದಾರಿಯಾಗಿದೆ. ಬಿ.ವೈ.ವಿಜಯೇಂದ್ರ ಮತ್ತು ಎಂ.ರುದ್ರೇಶ್ ಮಾರ್ಗದರ್ಶನದಲ್ಲಿ ಜಿಲ್ಲೆಯ ಜನತೆಗೆ ಕೈಲಾದ ಸೇವೆ ಮಾಡುತ್ತಿದ್ದೇವೆ. ಇದು ಮುಂದುವರಿಯಲಿದೆ.
    ಆರ್.ವರದರಾಜಗೌಡ ಅಧ್ಯಕ್ಷ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ

    ಜನಸೇವೆ ಮಾಡುವ ಉದ್ದೇಶದಿಂದಲೇ ರಾಜಕೀಯ ಪ್ರವೇಶ ಮಾಡುತ್ತೇವೆ. ಕರೊನಾದಂತಹ ಪರಿಸ್ಥಿತಿಯಲ್ಲಿ ಜನಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ನಮ್ಮನ್ನು ನಂಬಿದ ಜನ ತೊಂದರೆಗೆ ಒಳಗಾಗಬಾರದು. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆಸುರೇಶ್ ಮಾರ್ಗದರ್ಶನದಲ್ಲಿ ಎಲ್ಲ ಮುಖಂಡರು ದುಡಿಯುತ್ತಿದ್ದೇವೆ.
    ಇಕ್ಬಾಲ್ ಹುಸೇನ್ ಜಿಪಂ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts