More

    ಜನಾರ್ದನರೆಡ್ಡಿ ವಾಪ್ಸಿಯಿಂದ ಕಲ್ಯಾಣ ಕರ್ನಾಟಕದಲ್ಲಿ‌ ಬಿಜೆಪಿಗೆ ದೊಡ್ಡ ಶಕ್ತಿ: ಬಿ.ವೈ.ವಿಜಯೇಂದ್ರ ಬಣ್ಣನೆ

    ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಸರ್ಜಿಸಿ, ಬಿಜೆಪಿಯಲ್ಲಿ ವಿಲೀನ ಮಾಡುವುದರೊಂದಿಗೆ ಮಾಜಿ ಸಚಿವ, ಶಾಸಕ ಜಿ.ಜನಾರ್ದನರೆಡ್ಡಿ ವಾಪಸ್ಸಾಗಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ, ಮುಖಂಡರು ಹಾಗೂ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿ, ಸುರಕ್ಷತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಮೋದಿ ವರ್ಚಸ್ಸು ವೃದ್ಧಿಸಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ಜನಾರ್ದನರೆಡ್ಡಿ ಮತ್ತೆ ಪಕ್ಷಕ್ಕೆ ಮರಳಿದ್ದಾರೆ ಎಂದರು.

    ಪಕ್ಷದ ಏಳಿಗೆ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಪಕ್ಷಕ್ಕೆ ಬಂದವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುವುದು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಗೆಲ್ಲುವುದು ಈಗಿನ ನಮ್ಮ ಏಕೈಕ ಗುರಿಯಾಗಿದೆ‌ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

    ಆಪ್ತ ಗೆಳೆಯ…..!

    ವೇದಿಕೆ ಮೇಲಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಜನಾರ್ದನರೆಡ್ಡಿ ಗುಣಗಾನ ಮಾಡಿ, ಆಪ್ತ ಗೆಳೆಯ ಬಿ.ಶ್ರೀರಾಮುಲು ಹೆಸರು ಹೇಳುತ್ತಿದ್ದಂತೆಯೇ‌ ಸಭಾಂಗಣದಲ್ಲಿ ನೆರೆದ ಕಾರ್ಯಕರ್ತರು ಸಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಜಯಘೋಷ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.

    ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಸರ್ಜಿಸಿ, ಬಿಜೆಪಿಯಲ್ಲಿ ವಿಲೀನ ಮಾಡುವುದರೊಂದಿಗೆ ಪಕ್ಷಕ್ಕೆ ಮುಖಡರ ಜತೆಗೆ ಸೇರ್ಪಡೆಯಾಗಿರುವೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಪಕ್ಷದಲ್ಲಿ ಸಾಮಾನ್ಯ ದುಡಿಯಲು ಸಜ್ಜಾಗಿ ಬಂದಿರುವೆ. ಬಿಜೆಪಿಯಿಂದಲೇ ಬೆಳೆದವರು, ಹೊಂದಾಣಿಕೆ ಏನೂ ಬೇಡ. ಕೆಆರ್ ಪಿಪಿ ವಿಸರ್ಜಿಸಿ, ವಿಲೀನ ಮಾಡಿಯೇ ಪಕ್ಷಕ್ಜೆ ಸೇರ್ಪಡೆಯಾಗಿ ಎಂದು ಕೇಂದ್ರ ಸಚಿವ ಅಮಿತ್ ಷಾ ಸೂಚಿಸಿದ್ದರು.

    ಷಾ ಅವರು ಹೇಳಿದಂತೆಯೇ ನಡೆದುಕೊಂಡಿರುವೆ. ಬೇಷರತ್ ಆಗಿ ಪಕ್ಷಕ್ಕೆ ಮರಳಿರುವೆ. ತಾಯಿ ಮಡಿಲು ಸೇರಿದ ಸಂತಸವಾಗುತ್ತಿದೆ. ಯಾವುದೇ ಫಲಾಪೇಕ್ಷೆಯೂ ಇಲ್ಲ. ಪಕ್ಷ ಹಾಗೂ ಯಡಿಯೂರಪ್ಪ ಆಶೀರ್ವಾದದಿಂದ ಚಿಕ್ಕ ವಯಸ್ಸಿನಲ್ಲೇ ಎಲ್ಲ ಅಧಿಕಾರ ಪಡೆದಿರುವೆ. ಏಳು-ಬೀಳು ಅನುವಿಸಿರುವೆ. ಇನ್ನುಮುಂದೆ ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸುವೆ ಎಂದು ಜಿ.ಜನಾರ್ದನರೆಡ್ಡಿ ವಾಗ್ದಾನವಿತ್ತಾಗ ನೆರೆದ ಮುಖಂಡರು, ಜಾರ್ಯಕರ್ತರು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts