More

    ಮೇಕೆದಾಟಿಗಾಗಿ ಜನಾಂದೋಲನ: ಚಾಮರಾಜನಗರದಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ವರೆಗೆ ಜಾಥಾ

    ರಾಮನಗರ : ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಡಿ.22ರಿಂದ ಚಾಮರಾಜನಗರದಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ವರೆಗೆ ಜನಾಂದೋಲನ ಪಾದಯಾತ್ರೆ ನಡೆಯಲಿದೆ. 6 ಜಿಲ್ಲೆಗಳ ಜನರು 6 ದಿನ 390 ಕಿಮೀ ದೂರದವರೆಗಿನ ಕಾಲ್ನಡಿಗೆಯ ಆಂದೋಲನದಲ್ಲಿ ಪಾಲ್ಗೊಳ್ಳಲಿರುವುದಾಗಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

    ಜನಾಂದೋಲನದ ಬಗ್ಗೆ ಮಾಹಿತಿ ನೀಡಲು ರಾಮನಗರದ ಅರ್ಚಕರಹಳ್ಳಿಯ ಮಠದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಪ್ರತಿನಿಧಿ ಗಳು, ರಾಜಕಾರಣಿಗಳು, ಸಂಘ- ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ಚಳವಳಿ ರೂಪಿಸದ ಹೊರತು ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅವರೆಲ್ಲರನ್ನೂ ಒಳಗೊಂಡಂತೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

    ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಏನೊಂದು ಸಮಸ್ಯೆ ಆಗುವುದಿಲ್ಲ. ಈಗಾಗಲೆ ನಿರಂತರವಾಗಿ ಅವರಿಗೆ ನೀರು ಪೂರೈಕೆಯಾಗುತ್ತಿದೆ. ಹೀಗಿದ್ದರೂ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ
    ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಚ್ಛಾಶಕ್ತಿ ಪ್ರದರ್ಶಿಸಿ: ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ದರಿಂದ, ಯೋಜನೆಯ ಅನುಷ್ಠಾನದಿಂದ ಯಾವುದೇ ರಾಜ್ಯಕ್ಕೂ ತೊಂದರೆ ಆಗುವುದಿಲ್ಲ ಎಂಬುದನ್ನು ರಾಜ್ಯದ ಸಚಿವರು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದು ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಆಗ್ರಹಿಸಿದರು.

    ವ್ಯರ್ಥವಾಗಿ ಸಮುದ್ರ ಸೇರುವ ನೀರು: ಸದ್ಯ 80 ಟಿಎಂಸಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಅಪವ್ಯಯವಾಗುತ್ತಿರುವ ನೀರನ್ನು ತಡೆಗಟ್ಟಿ, ವಿದ್ಯುತ್ ಉತ್ಪಾದಿಸಬಹುದು. ಕುಡಿಯುವ ನೀರಿಗೂ ಅನುಕೂಲವಾಗುತ್ತದೆ ಎಂದು ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

    ಆರೇಳು ಜಿಲ್ಲೆಗಳ ಬಾಯಾರಿಕೆ ತಣಿಯುತ್ತೆ: ಮೇಕೆದಾಟು ಯೋಜನೆ ಅನುಷ್ಠಾನದಿಂದ ರಾಜ್ಯದ 6ರಿಂದ 7 ಜಿಲ್ಲೆಗಳ ಕುಡಿಯುವ ನೀರಿನ ಬವಣೆ ಪರಿಹಾರವಾಗುತ್ತದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಹೇಳಿದರು. ಈ ಯೋಜನೆಗೆ ನೆರೆ ರಾಜ್ಯ ತಮಿಳುನಾಡು ತಡೆಒಡ್ಡುತ್ತಿರುವುದು ಸರಿಯಲ್ಲ. ಈಗಾಗಲೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಯೋಜನೆಯ ಅನುಷ್ಠಾನ 50 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ವೇದಿಕೆಯ ಯೋಗೇಶ್ ಗೌಡ, ಶ್ರೀಧರ್, ಚಂದ್ರೇಗೌಡ, ಅಕ್ರಂ ಖಾನ್, ಶಿವು, ವೆಂಕಟೇಶ್, ಮಂಗಳಮ್ಮ ಮತ್ತಿತರರಿದ್ದರು.

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts