More

    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ ಬೇಕಾದ ಮಾಹಿತಿ!- ಆರ್​ಟಿಐ ಈಗ ಮತ್ತಷ್ಟು ಸರಾಗ , ‘ಜನ ಸೇವಕ’ ವ್ಯಾಪ್ತಿ ಮೂರು ಕ್ಷೇತ್ರಗಳಿಗೆ ವಿಸ್ತರಣೆ

    ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಅಗತ್ಯ ಮಾಹಿತಿ ಪಡೆಯುವುದು ಇನ್ನಷ್ಟು ಸರಾಗವಾಗಿದ್ದು, ಆನ್​ಲೈನ್ ನಲ್ಲೇ ನಿಗದಿತ ಶುಲ್ಕ ಪಾವತಿ ಜತೆಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಎಸ್​ಎಂಎಸ್ ಮೂಲಕ ಅರ್ಜಿ ಹಂತ ಮತ್ತು ಇ-ಮೇಲ್ ಮೂಲಕ ಇತರೆ ವಿವರ ಅರ್ಜಿದಾರರಿಗೆ ಲಭ್ಯವಾಗಲಿದೆ. ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ‘ಜನ ಸೇವಕ’ ವಿಸ್ತರಣೆ, ‘ಮಾಹಿತಿ ಕಣಜ- ಸಾರ್ವಜನಿಕ ಮಾಹಿತಿ ಜಾಲತಾಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಜನ ಸ್ನೇಹಿ’ ಸಹಾಯ ವೇದಿಕೆ, ಕಾರ್ವಿುಕ ಇಲಾಖೆಯ ‘ಕಾರ್ವಿುಕ ಸಹಾಯವಾಣಿ’ ಹಾಗೂ ‘ಆಶಾದೀಪ’ ಜಾಲ ತಾಣ (ಬ್ಲಾಕ್ ಚೈನ್ ತಂತ್ರಜ್ಞಾನ), ಆನ್​ಲೈನ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ ಸ್ನೇಹಿ ಆಡಳಿತ ಸರ್ಕಾರದ ಮುಖ್ಯ ಉದ್ದೇಶ ಎಂದರು. ಸದ್ಯಕ್ಕೆ ಕಂದಾಯ, ನಗರಾಭಿವೃದ್ಧಿ, ಒಳಾಡಳಿತ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಗೆ ಆನ್​ಲೈನ್​ನಲ್ಲಿ ಆರ್​ಟಿಐ ಅರ್ಜಿ ಸಲ್ಲಿಸಿ, ಮಾಹಿತಿ ಪಡೆಯಲು ಅವಕಾಶವಿದೆ.
     ಕಾರ್ವಿುಕ ಸಹಾಯವಾಣಿ
    =ಟೋಲ್ ಫ್ರೀ – 155214, =ವಾಟ್ಸ್​ಆಪ್- 93333 33684 =ಕಾರ್ವಿುಕ ಇಲಾಖೆ ರೂಪಿಸಿದ ಈ ಸಹಾಯವಾಣಿಗೆ ಇಲಾಖೆ ಮತ್ತದರ ಅಧೀನ ಮಂಡಳಿ ಸೌಲಭ್ಯಗಳ ಮಾಹಿತಿ ಪಡೆಯಬಹುದು. ಅಸಂಘಟಿತ, ವಲಸೆ ಕಾರ್ವಿುಕರು ದೂರು ನೀಡಿ ಪರಿಹಾರ ಪಡೆದುಕೊಳ್ಳಬಹುದು. ಕಾರ್ವಿುಕರ ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ಕಾಲಮಿತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು 7 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತಂದಿದ್ದು, 11 ಯೋಜನೆಗಳನ್ನು ಆನ್​ಲೈನ್ ಮೂಲಕ ಒದಗಿಸಲಾಗುತ್ತಿದೆ.

    ‘ಆಶಾದೀಪ’ ಜಾಲತಾಣ (www.ashadeepa.in)
    ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಪಡೆಯುವುದಕ್ಕೆ ಅನುಕೂಲ ಮಾಡಿಕೊಡುವುದು ಕಾರ್ವಿುಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿ ಮುಖ್ಯ ಉದ್ದೇಶವಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿದ ಎಸ್ಸಿ, ಎಸ್ಟಿ ಉದ್ಯೋಗಿಗಳಿಗೆ ಮಾಲೀಕರು ಪಾವತಿಸುವ ಇಎಸ್​ಐ, ಇಪಿಎಫ್ ವಂತಿಕೆ ಮರು ಪಾವತಿ, ಅಂಪ್ರೆಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶಿಷ್ಯ ವೇತನ ಮರು ಪಾವತಿ, ಅಪ್ರೆಂಟಿಸ್ ತರಬೇತಿ ನಂತರ ಕಾಯಂ ಮಾಡಿದಲ್ಲಿ ವೇತನ ಮರು ಪಾವತಿ ಸೌಲಭ್ಯಗಳು ಈ ಯೋಜನೆಯಡಿ ಲಭ್ಯವಿದೆ. ಯೋಜನೆಯಡಿ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಪಾರದರ್ಶಕತೆ, ನಿಖರತೆ ಉದ್ದೇಶದಿಂದ ಬ್ಲಾಕ್ ಚೈನ್ ತಂತ್ರಾಂಶ ಅಳವಡಿಸಲಾಗಿದೆ.

    ‘ಜನ ಸ್ನೇಹಿ’ ಸಹಾಯ ವೇದಿಕೆ

    =ವಾಟ್ಸಾಪ್- 9980299802 =ಟ್ವಿಟ್ಟರ್- @karnataka_Dipr =ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಚಿಸಿದ ಈ ವೇದಿಕೆ ಮೂಲಕ ಸಾರ್ವಜನಿಕರು ಯಾವುದೇ ಸರ್ಕಾರಿ ಸೇವೆಗಳ ಬಗ್ಗೆ ದೂರು ಸಲ್ಲಿಸಿದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವರು.

    ‘ ಜನ ಸೇವಕ’
    =ಟೋಲ್ ಫ್ರೀ ನಂಬರ್- 080 44554455 (ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ) ಜನರ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ‘ಜನ ಸೇವಕ’ ಆನ್ ಲೈನ್ ಸೇವೆಯನ್ನು ಬೆಂಗಳೂರು ನಗರ ವ್ಯಾಪ್ತಿಯ ಟಿ. ದಾಸರಹಳ್ಳಿ ಬಳಿಕ ಇದೀಗ ರಾಜಾಜಿನಗರ, ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿದ್ದು, 53 ಸೇವೆಗಳನ್ನು ಪಡೆಯಬಹುದಾಗಿದೆ. ನಾಗರಿಕರು ಹಣ ಮತ್ತು ಸಮಯ ವ್ಯಯ ಮಾಡಿ ಸರ್ಕಾರಿ ಕಚೇರಿ ಅಥವಾ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಕಾಲಮಿತಿಯೊಳಗೆ ಪಾರದರ್ಶಕವಾಗಿ ಒದಗಿಸುವ ಈ ಸೇವೆಗೆ 115 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮುಂದಿನ ಹಂತದಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತಿತರ ನಗರಗಳಿಗೂ ಈ ಸೇವೆ ವಿಸ್ತರಿಸುವ ಚಿಂತನೆಯಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ಜೆ.ಸಿ.ಮಾಧುಸ್ವಾಮಿ, ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರ ಸುದರ್ಶನ ಬೇಳೂರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಮಾಹಿತಿ ಕಣಜ: ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಹೆಚ್ಚಿಸಲು ಉದ್ದೇಶಿತ ‘ಮಾಹಿತಿ ಕಣಜ’ ಜಾಲತಾಣವು ಸಾರ್ವಜನಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ಒದಗಿಸಲಿದೆ. 11 ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ 80 ಸಂಸ್ಥೆಗಳ ಮಾಹಿತಿ ಪಡೆಯುವ ಆಯ್ಕೆ ಲಭ್ಯವಿದೆ. ಭೂ ಕಂದಾಯ, ಬೆಳೆ ಪರಿಹಾರ ಜತೆಗೆ ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಶೈಕ್ಷಣಿಕ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಗುರಿಯಾಗಿಸಿಕೊಂಡ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಈ ತಾಣವು ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಒದಗಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts