More

    ಮೆಕ್ಕೆಜೋಳಕ್ಕೆ ಕಾಡು ಹಂದಿಗಳ ಕಾಟ

    ಜಗಳೂರು: ತಾಲೂಕಿನ ಗೋಡೆ ಗ್ರಾಮದ 22 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆಯನ್ನು ಕಾಡು ಹಂದಿಗಳ ಹಿಂಡೊಂದು ಬುಧವಾರ ರಾತ್ರಿ ದಾಳಿ ಮಾಡಿ, ಹಾಳು ಮಾಡಿವೆ.

    ಗ್ರಾಮದ ರೈತರಾದ ಸಣ್ಣ ಮಂಜಪ್ಪ ಎಂಬುವವರ 8 ಎಕರೆ, ದೊಡ್ಡ ಮಂಜಪ್ಪ 8 ಎಕರೆ, ರಾಜಣ್ಣ 2 ಎಕರೆ, ಶೇಖರಪ್ಪ 4 ಎಕರೆ ಜಮೀನಿನಲ್ಲಿ ಬಿತ್ತನೆ ಹಾನಿಯಾಗಿದೆ.

    ರಂಗಯ್ಯನದುರ್ಗ ಕೊಂಡುಕುರಿ ವನ್ಯಜೀವಿ ಅಭಯಾರಣ್ಯದಂಚಿನ ಗೋಡೆ ಗ್ರಾಮದ ಜಮೀನಿನಲ್ಲಿ ಇತ್ತೀಚೆಗೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಸುತ್ತಲು ಅರಣ್ಯವಿರುವ ಕಾರಣ ಈ ಭಾಗದಲ್ಲಿ ಹಂದಿ, ಕರಡಿಗಳ ಹಾವಳಿ ಹೆಚ್ಚಾಗಿದೆ.

    ಬುಧವಾರ ತಡರಾತ್ರಿ ಇಪ್ಪತ್ತಕ್ಕೂ ಹೆಚ್ಚು ಅಧಿಕ ಹಂದಿಗಳುಳ್ಳ ಹಿಂಡೊಂದು ಸಾಲು ಹಿಡಿದು ಮೆಕ್ಕೆಜೋಳದ ಬೀಜ ತಿಂದು ಹಾಕಿವೆ. ಬೆಳಗ್ಗೆ ಜಮೀನನ್ನು ನೋಡಿದ ರೈತರು ಆತಂಕಗೊಂಡಿದ್ದಾರೆ. ಪ್ರತಿ ವರ್ಷ ಕಾಡುಪ್ರಾಣಿಗಳ ಹಾವಳಿಗೆ ಬೆಳೆಗಳು ಹಾನಿಯಾಗುತ್ತಿವೆ.

    ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಉಳುಮೆ ಮಾಡಲಾಗುತ್ತಿದೆ. ಫಲಕ್ಕೆ ಬರುವ ಮುನ್ನವೇ ನಾಶ ಮಾಡಿದರೆ ಬೆಳೆಯಲು ಹೇಗೆ ಸಾಧ್ಯ? ಬಿತ್ತನೆ ಬೀಜ, ಗೊಬ್ಬರಕ್ಕೆ ಮಾಡಿದ ಸಾಲ ತೀರಿಸುವುದು ಕಷ್ಟವಾಗಲಿದ್ದು, ಸಂಕಷ್ಟ ಅನುಭವಿಸಬೇಕಾಗುತ್ತದೆ.

    ಸರ್ಕಾರ ರೈತರ ಪರ ನಿಂತುಕೊಳ್ಳಬೇಕು. ಪ್ರಾಣಿಗಳ ಕಾಟ ಹಾವಳಿ ತಪ್ಪಿಸಬೇಕು. ಹಾನಿಯಾಗಿರುವ ಬೆಳೆಗೆ ನಷ್ಟ ತುಂಬಿಕೊಡಬೇಕು ಎಂದು ರೈತರಾದ ಸಂತೋಷ್, ರಾಜಣ್ಣ, ಶೇಖರಪ್ಪ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts