More

    ದುರ್ನಾತ ಬೀರುತ್ತಿದೆ ಲಕ್ಷ್ಮೇಶ್ವರದ ಇಟ್ಟಿಕೆರೆ!

    ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ಏಕೈಕ ಇಟ್ಟಿಗೆರೆ ರಕ್ಷಣೆಯಾಗಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಕೇಳುತ್ತಾ ಬಂದರೂ ಕೆರೆ ಅಭಿವೃದ್ಧಿಯಾಗುತ್ತಿಲ್ಲ.

    ಬದಲಾಗಿ ಕೆರೆಗೆ ಚರಂಡಿ ನೀರಿನ ಜತೆಗೆ ತ್ಯಾಜ್ಯ ಸಂಗ್ರಹವಾಗುತ್ತಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 13 ಎಕರೆ ವಿಸ್ತಾರದ ಈ ಕೆರೆ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುವಂತಿದೆ.


    ಕಳೆದ ವರ್ಷ ಹೆಚ್ಚು ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿ ಕೆರೆಯಂಚಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಆಗ ಕೆರೆ ನೀರು ಹೊರ ಹಾಕಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು.

    ಈ ವರ್ಷ ಮುಂಜಾಗ್ರತೆ ಕ್ರಮವಾಗಿ ಕೆರೆಗೆ ಹೆಚ್ಚುವರಿ ನೀರು ಬರದಂತೆ ಕೆರೆ ಹೊರ ಬದಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಈಗ ಕೆರೆಯ ನೀರು ಬಹುತೇಕ ಖಾಲಿಯಾಗಿದ್ದು ಕೆರೆಗೆ ಪಟ್ಟಣದ ಚರಂಡಿ ನೀರಿನ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ ಹರಿದು ಬಂದು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಕೆರೆಯಲ್ಲಿ ಇಳಿಯಲೂ ಆಗದಂತೆ ಗಬ್ಬು ನಾರುತ್ತಿದೆ.

    ಪುರಸಭೆಯವರು ಈ ಕೆರೆ ದಂಡೆಯ ಮೇಲೆ ಇಲ್ಲಿ ಯಾರೂ ಮಲಮೂತ್ರ ಮಾಡಬಾರದು. ಮಾಡಿದರೆ ದಂಡ ವಿಧಿಲಾಗುವುದು ಎಂಬ ಫಲಕ ಹಾಕಿ ಒಬ್ಬ ಸಿಬ್ಬಂದಿಯನ್ನೂ ನೇಮಿಸಿದ್ದರು. ಆದರೆ, ಕೆರೆಯಲ್ಲಿ ಮಲಮೂತ್ರ ವಿಸರ್ಜನೆ ನಿಂತಿಲ್ಲ. ಕೆರೆಯಂಚಿನಲ್ಲಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದ್ದು ಅದಕ್ಕೂ ಕಡಿವಾಣ ಬಿದ್ದಿಲ್ಲ.


    ಕೆರೆಗೆ ಹರಿದು ಬರುವ ಚರಂಡಿ ನೀರು ತಡೆಯಬೇಕು ಮತ್ತು ಕೆರೆಯಲ್ಲಿ ಯಾರೂ ಕಸ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕು ಕೇಂದ್ರವಾದ ಲಕ್ಷ್ಮೇಶ್ವರದಲ್ಲಿ ಇರುವುದು ಈ ಕೆರೆ ಮಾತ್ರ. ಅಂತರ್ಜಲ ಮೂಲವಾದ ಈ ಕೆರೆ ಸಂರಕ್ಷಣೆಯಾಗದಿದ್ದರೆ ಮುಂದೊಂದು ದಿನ ಲಕ್ಷ್ಮೇಶ್ವರ ಕೆರೆ ಮುಕ್ತ ಪಟ್ಟಣವಾಗಲಿದೆ. ಕೆರೆಗಳ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಕಳಕಳಿ ಹೊಂದಿರುವ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕು. -ಪೂರ್ಣಾಜೆ ಖರಾಟೆ, ಬಿ.ಎಸ್ ಬಾಳೇಶ್ವರಮಠ, ಸ್ಥಳೀಯ ನಿವಾಸಿಗಳು

    ಕೆರೆಯ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಾಗಿದೆ. ಕೂಡಲೆ ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಚರಂಡಿ ನೀರು ಹರಿದು ಬರುವುದನ್ನು ತಡೆಯಲಾಗುವುದು. ಕಾಲುವೆ ಮಾರ್ಗಕ್ಕೆ ಅಡ್ಡಲಾಗಿ ಜಾಳಿಗೆ ಹಾಕಿ ನೀರಿನ ಜತೆಗೆ ಪ್ಲಾಸ್ಟಿಕ್ ಇತರೆ ತ್ಯಾಜ್ಯ ಬರದಂತೆ ಕ್ರಮ ಕೈಗೊಳ್ಳಲಾಗುತ್ತದೆ. -ಮಂಜುನಾಥ ಮುದಗಲ್, ಪುರಸಭೆ ಆರೋಗ್ಯ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts