

ಶಿರ್ವ: ವಿದ್ಯಾರ್ಥಿ ಜೀವನದಲ್ಲಿ ಪದವಿಪೂರ್ವ ಹಂತ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಮತ್ತು ಹೆತ್ತವರು ಯೋಚಿಸಿ-ಯೋಜಿಸಿ ಜೀವನದಲ್ಲಿ ಯಶಸ್ಸನ್ನು ಕಾಣಲು ಪೂರಕವಾದ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗಾಗಿ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಸುಂದರ ಮೇರಾ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲು ಸಹಕರಿಸಿದರು. ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ಶುಭಹಾರೈಸಿದರು, ಅಕಾಡೆಮಿಕ್ ಡೀನ್ ಪ್ರೊ.ಗುರುಪ್ರಸಾದ್ ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು. ಜ್ಞಾನ ಚೇತನಾ ಟ್ರಸ್ಟ್‌ನ ಸದಸ್ಯ ಸತೀಶ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ರೋಹನ್ ಕುಮಾರ್ ನಿರೂಪಿಸಿದರು.