More

    ಬಂಕಾಪುರದಲ್ಲಿ ಜಿ+1 ಮನೆಗಳ ಹಕ್ಕುಪತ್ರ ವಿತರಣೆ ಜು. 16ರಂದು

    ಬಂಕಾಪುರ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಿ+1 ಮಾದರಿ ಮನೆಗಳ ಸಮುಚ್ಚಯ ಸಿದ್ಧಗೊಂಡಿದ್ದು, ಜು. 16ರಂದು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ರಾಜೀವ ಗಾಂಧಿ ವಸತಿ ನಿಗಮ ಹಾಗೂ ಪುರಸಭೆ ಸಹಯೋಗದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಸತಿ ಸಚಿವ ಜಮೀರ ಅಹ್ಮದಖಾನ್, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರೊಂದಿಗೆ ವಿತರಿಸಲಿದ್ದಾರೆ. ಇದರಿಂದ ಸುಮಾರು ಹತ್ತು ವರ್ಷಗಳ ಹಿಂದೆ ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರ ಆಸೆ ಈಗ ಇಡೇರಲಿದೆ.

    ನಿರ್ವಣಗೊಂಡಿರುವ ಮನೆಗಳನ್ನು ಹಂಚಿಕೆ ಮಾಡುವಂತೆ ಇತ್ತೀಚೆಗೆ ಫಲಾನುಭವಿಗಳು ಪುರಸಭೆ ಮುಂದೆ ಪ್ರತಿಭಟನೆ ಮಾಡಿದ್ದರು. ತಾಲೂಕು ದಂಡಾಧಿಕಾರಿಯಿಂದ 15 ದಿನಗಳ ಗಡುವು ಪಡೆದುಕೊಂಡಿದ್ದರು. ಹೀಗಾಗಿ ಬಡವರ ಸ್ವಂತ ಸೂರಿನ ಕನಸು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹಕ್ಕುಪತ್ರ ಪಡೆದುಕೊಳ್ಳುವ ಮೂಲಕ ನನಸಾಗಲಿದೆ.

    ಹೈಟೆಕ್ ಮಾದರಿ ಮನೆ

    ಬಂಕಾಪುರದಲ್ಲಿ ನಿರ್ವಣಗೊಳ್ಳುತ್ತಿರುವ ಮನೆಗಳು ಸಂಪೂರ್ಣ ಹೈಟೆಕ್ ಮಾದರಿಯಲ್ಲಿವೆ. ಪ್ರತಿಯೊಂದು ಮನೆಗೂ ಒಂದು ಬೆಡ್ ರೂಂ, ಹಾಲ್, ಅಡುಗೆ ಕೋಣೆ, ಶೌಚಗೃಹ ಹಾಗೂ ವರಾಂಡವನ್ನು ಒಳಗೊಂಡಿದೆ. ಗಾಳಿ ಬೆಳಕು ವ್ಯಾಪಕವಾಗಿ ಬರುವಂತೆ ವಿನ್ಯಾಸಗೊಳಿಸಲಾಗಿದೆ.

    ಪಟ್ಟಣದಲ್ಲಿ ಜಿ+1 ಮಾದರಿಯ 604 ಮನೆಗಳ ಪೈಕಿ 352 ಮನೆಗಳ ಕಾಮಗಾರಿ ಮುಗಿದಿದೆ. ಈ ಪೈಕಿ ಮೊದಲ ಹಂತವಾಗಿ 252 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಭಾನುವಾರ ಸಾಂಕೇತಿಕವಾಗಿ ಕೆಲ ಮನೆಗಳನ್ನು ವಸತಿ ಸಚಿವರು ಹಂಚಿಕೆ ಮಾಡಲಿದ್ದಾರೆ. ಮನೆಗಳ ಹಂಚಿಕೆ ಕುರಿತು ದೂರುಗಳು ಬಂದಲ್ಲಿ ಪರಿಶೀಲನೆ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಎ.ಶಿವಪ್ಪ, ಪುರಸಭೆ ಮುಖ್ಯಾಧಿಕಾರಿ ಬಂಕಾಪುರ

    ಮನೆ ನಿರ್ಮಾಣ ಕಾಮಗಾರಿ ತಡವಾಗಿದ್ದರಿಂದ ಸ್ವಂತ ಸೂರಿನ ಕನಸು ಕೈ ಬಿಟ್ಟು ವಂತಿಗೆ ಹಣವಾದರೂ ಸಿಕ್ಕರೆ ಸಾಕು ಅನಿಸಿತ್ತು. ಆದರೆ, ಬಸವರಾಜ ಬೊಮ್ಮಾಯಿ ಅವರ ಪರಿಶ್ರಮದಿಂದ ಈಗ ಮನೆಗಳು ನಿರ್ವಣಗೊಂಡಿವೆ. ಹಕ್ಕು ಪತ್ರ ಪಡೆದುಕೊಳ್ಳುವುದರ ಮೂಲಕ ಬಹುದಿನಗಳ ಕನಸು ನನಸಾಗಲಿದೆ.

    | ಶಾರವ್ವ ಹುಬ್ಬಳ್ಳಿ, ಫಲಾನುಭವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts