More

    ಚಿಕ್ಕನಾಯಕನಹಳ್ಳಿಗೆ ಸಿಕ್ಕೀತೆ ಶಾಶ್ವತ ಕಾಯಕಲ್ಪ

    ಪಾವಗಡ: ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಫೆ.20ರಂದು ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಡೆಯಲಿದೆ. ಕೃಷಿ ಹಾಗೂ ಕೃಷಿ ಕಾರ್ಮಿಕರ 267 ಕುಟುಂಬಗಳಿರುವ ಗ್ರಾಮದಲ್ಲಿ ಸಮಸ್ಯೆಗಳು ಸಾಕಷ್ಟಿವೆ.

    ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮದಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದಿರುವುದು ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಂದೊಡ್ಡಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ನೋಡದಿರುವ ಈ ಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ತಾಲೂಕು ಆಡಳಿತವೇ ಬರಲಿದ್ದು, ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ.

    1,171 ಮತದಾರರಿರುವ ಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಜನರೇ ಹೆಚ್ಚಾಗಿದ್ದಾರೆ, ಈ ವರೆಗೆ ಕಂದಾಯ ಇಲಾಖೆಗೆ ಸಲ್ಲಿಸಿರುವ ಎಸ್‌ಎಸ್‌ವೈ 47 ಅರ್ಜಿ, ಒಎಪಿ ಯೋಜನೆಗೆ 18 ಅರ್ಜಿ, ಪಿಡಬ್ಲ್ಯೂಡಿ ಯೋಜನೆಯಡಿ 27 ಅರ್ಜಿ ಹಾಗೂ ಪಿಎಚ್‌ಪಿ 13 ಅರ್ಜಿ ಮತ್ತು ಮನಸ್ವಿನಿ ಯೋಜನೆಯಡಿ 4 ಅರ್ಜಿಗಳು ವಿಲೇವಾರಿಗೆ ಕಾದು ಕೂತಿವೆ.

    ಪಿಂಚಣಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದೆ ಅರ್ಜಿದಾರರಿಗೆ ನೋಟಿಸ್ ನೀಡಿ ತಾವೇ ಖುದ್ದು ಕಚೇರಿಗೆ ಆಗಮಿಸಬೇಕು ಎಂದು ಕರೆಸಿಕೊಂಡರೂ ಸಲ್ಲದ ದಾಖಲೆಗಳ ನೆಪದಲ್ಲಿ ಅರ್ಜಿಯನ್ನು ಅಧಿಕಾರಿಗಳು ಮರೆತಿದ್ದಾರೆ. ಗ್ರೇಡ್-2 ತಹಸೀಲ್ದಾರ್ ಸುಮತಿ ಎಂಬುವವರ ಬಗ್ಗೆ ದೂರುಗಳ ಸುರಿಮಳೆಗೈಯುತ್ತಾರೆ.

    ಬಸ್ ವ್ಯವಸ್ಥೆ ಮರೀಚಿಕೆ: ತೆಲುಗು ಪ್ರಭಾವದ ಗ್ರಾಮದಲ್ಲಿ 7ನೇ ತರಗತಿವರೆಗೂ ಕನ್ನಡ ಮಾಧ್ಯಮ ಶಾಲೆಯಿದ್ದು, 55 ಮಕ್ಕಳಿದ್ದಾರೆ. ಶಾಲೆಗೆ ಈವರೆಗೂ ವಿದ್ಯುತ್ ಸಂಪರ್ಕವಿಲ್ಲ, ಪ್ರೊಜೆಕ್ಟರ್, ಕಂಪ್ಯೂಟರ್ ಬಳಕೆ ದೂರದ ಮಾತು. ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ, ಇಲ್ಲಿನ ರೈತರು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದು, ಇರುವ 1,295 ಜಾನುವಾರುಗಳ ತಪಾಸಣೆಗೆ ಪಶು ಆಸ್ಪತ್ರೆಯೂ ಗತಿಯಿಲ್ಲ, ಪಶು ವೈದ್ಯರಿಗೆ ಊರಿನ ಪರಿಚಯ ಇಲ್ಲ ಎಂಬುದು ಸ್ಥಳೀಯರ ಆರೋಪ.

    ಚಿಕ್ಕನಾಯಕನಹಳ್ಳಿಗೆ ಸಿಕ್ಕೀತೆ ಶಾಶ್ವತ ಕಾಯಕಲ್ಪ
    ಗ್ರಾಮದಲ್ಲಿ ಕೆಟ್ಟು ಕೂತಿರುವ ಶುದ್ಧ ನೀರಿನ ಘಟಕ

    ಭರವಸೆಗಳು ಈಡೇರಿಲ್ಲ: 25 ಕೃಷಿ ಕುಟುಂಬಗಳು ರೇಷ್ಮೆ ಬೆಳೆಯುತ್ತಿದ್ದು, ಇಲಾಖೆ ಸೌಲಭ್ಯದ ಅರಿವಿಲ್ಲ. ಸಣ್ಣ ರೈತರು ಹೂವು ತರಕಾರಿ ಬೆಳೆದು ಅಗತ್ಯ ಮಾರ್ಗದರ್ಶನ ಹಾಗೂ ಔಷಧ ಮತ್ತು ಸಂಬಂಧಪಟ್ಟ ಇಲಾಖೆಯ ಯೋಜನೆ ಪಡೆದಿಲ್ಲ, ತಲುಪಿಸುವ ಕೆಲಸವೂ ಆಗಿಲ್ಲ. ರಾಜವಂತಿ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಿ ನೀಡಿದ್ದ ಯಾವುದೇ ಭರವಸೆಗಳೂ ಈವರೆಗೂ ಈಡೇರಿಲ್ಲ.

    ಎಗ್ಗಿಲ್ಲದೆ ನಡೆಯುವ ಅಕ್ರಮ ಚಟುವಟಿಕೆಗಳು: ಗ್ರಾಮದಲ್ಲಿ ಬರೋಬ್ಬರಿ 11 ಚಿಲ್ಲರೆ ಅಂಗಡಿಗಳಿದ್ದು, ಇಲ್ಲಿ ದಿನಸಿಗಿಂತ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸುತ್ತಮುತ್ತಲ ಕನ್ನಮೇಡಿ, ಕೊತ್ತೂರು, ಸಂತೆಬಂಡೆ ಆಂಧ್ರದ ಗಡಿಯಲ್ಲಿರುವುದರಿಂದ ಪ್ರತಿನಿತ್ಯ ಜೂಜು ನಡೆಯುತ್ತಿರುವುದು ಬಡ ಕುಟುಂಬಗಳನ್ನು ಕಂಗಾಲಾಗಿಸಿದೆ. ಈಗಾಗಲೇ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಉದ್ಯೋಗ ಬಯಸಿ ತುಮಕೂರು ಹಾಗೂ ಬೆಂಗಳೂರು ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಇರುವ ರೈತರನ್ನು ಉಳಿಸುವ ಕೆಲಸವಾಗಬೇಕಿದೆ.

    ತರಾತುರಿಯಲ್ಲಿ ಸ್ಪಿಂಕ್ಲರ್ ಕಿಟ್ ವಿತರಣೆ! ಕಾರ್ಯಕ್ರಮ ನಿಗದಿಯಾದ ಕೂಡಲೇ ಎಚ್ಚೆತ್ತುಕೊಂಡಿರುವ ಕೃಷಿ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಶನಿವಾರ ಅರ್ಜಿ ಸಲ್ಲಿಸಿದ್ದ ರೈತರಿಗೆ ಸ್ಪಿಂಕ್ಲರ್ ಕಿಟ್ ವಿತರಣೆಗೆ ಮುಂದಾಗಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷದಿಂದಲೂ ಕಿಟ್‌ಗಾಗಿ ಅರ್ಜಿ ಸಲ್ಲಿಸಿದ್ದಾಗ ತಿರುಗಿಯೂ ನೋಡದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಅಂಕಿ-ಅಂಶದ ದಾಖಲೆ ನೀಡಲು ಕಳಪೆ ಮಟ್ಟದ ಪೈಪ್‌ಗಳನ್ನು ನೀಡುತ್ತಿದ್ದಾರೆ ಎಂದು ಎಡಿಎ ವಿಜಯಾಮೂರ್ತಿ ತರಾಟೆಗೆ ತೆಗೆದುಕೊಂಡರು.

    ಅಂಗವಿಕಲೆಯಾದ ನನಗೆ ಮಕ್ಕಳೂ ಇಲ್ಲ, ಪತಿಯೂ ತೀರಿಕೊಂಡಿದ್ದಾರೆ. ಹಲವು ತಿಂಗಳಿನಿಂದ ಸರ್ಕಾರದಿಂದ ಪಿಂಚಣಿ ಬಂದಿಲ್ಲ, ರೇಷನ್‌ಕಾರ್ಡ್ ಇಲ್ಲದೆ ಬೇಡಿ ತಿನ್ನುವ ಸ್ಥಿತಿ ಬಂದಿದೆ. ಡಿಸಿ ಬಂದರೆ ಅವರನ್ನು ಕೇಳಲು ಕಾಯುತ್ತಿದ್ದೇನೆ.
    | ಗಂಗಮ್ಮ, ಅಂಗವಿಕಲ ವೃದ್ಧೆ

    ಜಿಲ್ಲೆಯ ಗಡಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಸ್ಥಳೀಯ ಗ್ರಾಪಂ ಮನಸ್ಸು ಮಾಡಿಲ್ಲ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಸೊಳ್ಳೆಗಳ ಕಾಟ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
    | ರಮೇಶ್, ಗ್ರಾಮದ ಯುವಕ

    ಕಳೆದೆರಡು ದಿನಗಳಿಂದ ಗ್ರಾಮಕ್ಕೆ ಎಲ್ಲ ಅಧಿಕಾರಿಗಳು ಆಗಮಿಸಿ ಮನೆಮನೆಗೆ ಭೇಟಿ ನೀಡಲಾರಂಭಿಸಿದ್ದಾರೆ. ಚರಂಡಿ ಸ್ವಚ್ಛಗೊಳಿಸಿ, ರಸ್ತೆಗೆ ಮಣ್ಣು ಬಿದ್ದಿದೆ. ಈ ಕಾರ್ಯಕ್ರಮದ ನೆಪದಲ್ಲಿಯಾದರೂ ಊರಿಗೆ ಕೆಲವು ಕೆಲಸಗಳಾಗಲಿ.
     | ಮಂಜುನಾಥ, ಗ್ರಾಮದ ಯುವಕ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts