More

    ಬ್ಯಾಡಗಿ ತಾಲೂಕಿನ ನೀರಾವರಿ ಯೋಜನೆಗಳು ಅಸಮರ್ಪಕ

    ಬ್ಯಾಡಗಿ: ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ತಾಲೂಕಿನ ನೀರಾವರಿ ಯೋಜನೆಗಳು ಸಮರ್ಪಕವಾಗಿಲ್ಲ. ದಾಖಲೆಯಲ್ಲಿ ಕೆರೆಕಟ್ಟೆಗಳನ್ನು ತುಂಬಿಸಿದ್ದು, ಆದರೆ ವಾಸ್ತವಿಕವಾಗಿ ನೀರೇ ಹರಿಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ರೈತ ಮುಖಂಡರು, ನೀರಾವರಿ, ಹೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು.
    ರೈತ ಸಂಘದ ಅಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ, 369 ಕೋ.ರೂ. ವೆಚ್ಚದ ಆಣೂರು, ಬುಡಪನಹಳ್ಳಿ ಹಾಗೂ 81 ಕೋ.ರೂ.ವೆಚ್ಚದ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗಳಿಂದ ರೈತರಿಗೆ ಲಾಭವಾಗುತ್ತಿಲ್ಲ. ಆಣೂರು ಯೋಜನೆ ಡಿಪಿಆರ್ ಸಿದ್ಧಪಡಿಸುವ ವೇಳೆ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಬೇಕಿತ್ತು. ಆದರೆ, ಯೋಜನೆ ಮುಗಿದ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳಿಂದ ಈಗ ಬ್ಯಾರೇಜ್ ಕಾಮಗಾರಿ ಶುರುವಾಗಿದೆ. ಪೂರ್ಣಗೊಳಿಸಲು 2 ವರ್ಷ ಬೇಕಿದ್ದು, ಅಲ್ಲಿಯವರೆಗೆ ರೈತರ ಗತಿಯೇನು..? ಇಂತಹ ವ್ಯವಸ್ಥೆಗೆ ಹೊಣೆ ಯಾರು ? ಎಂದು ಪ್ರಶ್ನಿಸಿದರು.

    ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆ ಆರಂಭವಾಗಿ 25 ವರ್ಷ ಕಳೆದಿದೆ. 13 ಸಾವಿರ ಎಕರೆಗೆ ನೀರಾವರಿ ಕಲ್ಪಿಸುವ ಉದ್ದೇಶವಿದೆ. ಆದರೆ, ನೀರಾವರಿ ಅಧಿಕಾರಿಗಳು, ಇಂಜಿನಿಯರ್‌ಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಕೆರೆಕಟ್ಟೆ ಹಾಗೂ ಹೊಲಗಳಿಗೆ ನೀರು ಹರಿಯುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಗಂಗಣ್ಣ ಎಲಿ ಮಾತನಾಡಿ, ತಾಲೂಕು ಮಟ್ಟದಲ್ಲಿ ವಲಯ ಅರಣ್ಯಾಧಿಕಾರಿಗಳು ಇಲ್ಲವಾಗಿದೆ. ಕೃಷ್ಣಮೃಗಗಳು ಹಾಗೂ ಕಾಡುಹಂದಿಗಳ ಕಾಟದಿಂದ ಸಾಕಷ್ಟು ಹಾನಿಯಾಗಿದ್ದು, ಹೆಕ್ಟೇರ್‌ಗೆ 10 ಸಾ.ರೂ.ಪರಿಹಾರ ಕೊಡ್ತೀರಿ, ಎಕರೆಗೆ 25 ಸಾವೊರ ರೂ. ಕೊಡಬೇಕು. ರಕ್ಷಿತ ಅರಣ್ಯ ಪ್ರದೇಶದ ಸುತ್ತಲಿನ ರೈತರ ಕೃಷಿಭೂಮಿಯನ್ನು ಕಾಯಂ ಪರಿಹಾರ ಪ್ರದೇಶ ಎಂದು ಘೋಷಿಸಲು ಮನವಿ ಮಾಡಿದರು.

    ರೈತ ಕಿರಣ ಗಡಿಗೋಳ ಮಾತನಾಡಿ, ನದಿಪಕ್ಕದ ಹಾಗೂ ಬಾವಿ ನೀರು ಎತ್ತಲು ಬಳಸುವ ಸೋಲಾರ್ ಯಂತ್ರವು ಕೊಳವೆ ಬಾವಿಯ 500 ಅಡಿ ನೀರೆತ್ತುವುದಿಲ್ಲ. ಸೆ. 5 ರಿಂದ ರೈತರ ಕೊಳವೆಬಾವಿಗಳಿಗೆ ಹೊಸ ಸಂಪರ್ಕ ನೀಡುತ್ತಿಲ್ಲ. ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು. ಟಿಸಿ ಸುಟ್ಟಲ್ಲಿ ರೈತರಿಗೆ ಹಣ ಪಡೆಯುವ ಪ್ರಕ್ರಿಯೆ ನಿಲ್ಲಿಸಬೇಕೆಂದು ಒತ್ತಾಯಿಸಿದರು.

    ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜ, ಮೌನೇಶ ಕಮ್ಮಾರ, ರಾಣೆಬೆನ್ನೂರು ಸಾಮಾಜಿಕ ಅರಣ್ಯ ಇಲಾಖೆ ಎಂ.ಅಣ್ಣಪ್ಪ ಇದ್ದರು.

    ಹೂಳೆತ್ತಲು ಹಣ ಮಂಜೂರು

    ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಲ್ಲಿ 36 ಕಿಮೀ ಕಾಲುವೆಯ ಹೂಳೆತ್ತಲಾಗುತ್ತಿದೆ. ಇದಕ್ಕಾಗಿ ಹಣವೂ ಮಂಜೂರಾಗಿದ್ದು, ಮಳೆಗಾಲ ಆರಂಭವಾಗುವ ಮುನ್ನವೇ ಸ್ವಚ್ಛಗೊಳಿಸಲಾಗುವುದು ಯುಟಿಪಿ ಇಂಜಿನಿಯರ್ ರುದ್ರೇಶ ಮಾಹಿತಿ ನೀಡಿದರು. ಹಿರೇಹಳ್ಳಿ ಹಾಗೂ ವರದಾ ನದಿಯ ಬ್ಯಾತನಾಳ ಜಾಕ್‌ವೆಲ್ ಬಳಿ ಸಣ್ಣಪುಟ್ಟ ತಾಂತ್ರಿಕ ದೋಷ ಕಂಡುಬಂದಿದ್ದು, ದುರಸ್ತಿಪಡಿಸಿ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ಕಾಲುವೆಯಲ್ಲಿ ಪೈಪ್‌ಲೈನ್ ಅಳವಡಿಸುವ 110 ಕೋ.ರೂ.ವೆಚ್ಚದ ಕಾಮಗಾರಿಗೆ ಅನುದಾನ ಮಂಜೂರಾಗಬೇಕಿದೆ ಎಂದರು.

    ನೀರಾವರಿ ಇಂಜಿನಿಯರ್ ಬಸವರಾಜ ಬೆನ್ನೂರು ಮಾತನಾಡಿ, ಆಣೂರು, ಬುಡಪನಹಳ್ಳಿ ಕೆರೆಗೆ ನೀರು ಹರಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ ಇಂಗಳಗುಂದಿ ಬಳಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ನಡೆದಿದೆ. ಮಳೆ ಆರಂಭವಾಗುತ್ತಿದ್ದಂತೆ ತಾಲೂಕಿನ ಯೋಜನೆಗೆ ಒಳಪಟ್ಟ ಕೆರೆಗಳಿಗೆ ನೀರು ಹರಿಸಲು ಯತ್ನಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts