More

    ಎನ್‌ಡಿಎ ಗೆದ್ದರೆ ಮಾತ್ರ ನೀರಾವರಿ ಸಮಸ್ಯೆಗೆ ಪರಿಹಾರ

    ಕೋಲಾರ:ಸ್ವಂತ ಪಕ್ಷದ ಬಲದ ಮೇಲೆ ದೇಶವನ್ನು ಅಳುವ ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ. ಇಂಡಿಯಾ ಕೂಟದಲ್ಲಿ 28 ರಾಜಕೀಯ ಪಕ್ಷಗಳು ಇವೆ. ಆದರೆ ಸಮರ್ಥ ನಾಯಕರಿಲ್ಲ. ಎನ್‌ಡಿಎಗೆ ಬಹುಮತ ನೀಡಿದರೆ ಮಾತ್ರ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದರು.

    ಮಾಲೂರು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕೋಲಾರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಿಸಿಕೊಳುವುದೇ ರಾಜ್ಯದಲ್ಲಿನ ಶಾಶ್ವತ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಎಂದರು.
    ಮೋದಿ ಮುಂದಾಲೋಚನೆಯುಳ್ಳ ನಾಯಕ
    ಇಂಡಿಯಾ ಒಕ್ಕೂಟದಲ್ಲಿ ಇದುವರೆಗೂ ನಾಯಕನನ್ನು ಗುರುತಿಸಿಲ್ಲ. ಈ ಬಗ್ಗೆ ಮಾಧ್ಯಮಗಳು ಕಾಂಗ್ರೆಸ್ ಅವರನ್ನು ಕೇಳಿದಾಗ ಉತ್ತರ ಸಿಕ್ಕಿಲ್ಲ ಎಂದ ಅವರು, ದೇಶದ ಅಭಿವೃದ್ಧಿ ವಿಚಾರದಲ್ಲಿ ಮೋದಿ ಅವರಿಗೆ ಇರುವ ಜ್ಞಾನ, ಮುಂದಾಲೋಚನೆ ಬೇರೆ ಯಾರಿಗೂ ಇಲ್ಲ, ಕಾಂಗ್ರೆಸ್‌ನಲ್ಲಿ ಹಲವು ಬಣಗಳಿವೆ. ರಾಹುಲ್ ಗಾಂಧಿ ಓವರ್ ಸ್ಪೀಡ್ ಹೋಗುತ್ತಿದ್ದಾರೆ, ಇದೇನೂ ಕೆಲಸಕ್ಕೆ ಬರುವುದಿಲ್ಲ ಎಂದು ದೇವೇಗೌಡ ಟೀಕಿಸಿದರು.
    ಭಾರತದ ಪಕ್ಕದ ಚೀನ, ಅಪಘಾನಿಸ್ತಾನ, ಪಾಕಿಸ್ತಾನ ಹೇಗೆ ನಡೆದುಕೊಂಡಿವೆ ಎಂಬುದು ಗೊತ್ತಿದೆ. ಆದರೆ ಇಂಡಿ ಕೂಟದ ನಾಯಕರು ಧ್ವನಿ ಎತ್ತಲಿಲ್ಲ. ಸಮಸ್ಯೆಯನ್ನು ಚಾಕಚಕ್ಯತೆಯಿಂದ ನಿರ್ವಹಿಸಿ ತೊಂದರೆಯನ್ನು ತಪ್ಪಿಸಿದ್ದು ಮೋದಿ ಮಾತ್ರ ಎಂದರು.

    ಅಭೂತಪೂರ್ವ ಬೆಂಬಲ:
    ಈ ವಯಸ್ಸಿನಲ್ಲಿ ಚುನಾವಣೆಯಲ್ಲಿ ನಾನು ಒಡಾಡುವ ಅವಶ್ಯಕತೆಯೇನಿತ್ತು? ಮೈತ್ರಿಯಿಂದ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಂಡಿದ್ದಾರೆ. 28 ಕ್ಷೇತ್ರಗಳ ಪೈಕಿ ಕೋಲಾರ, ಮಂಡ್ಯ, ಹಾಸನ ಜೆಡಿಎಸ್ ಅಭ್ಯರ್ಥಿಗಳು, ಉಳಿದ ೨೫ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮೈಸೂರು, ತುಮಕೂರು, ಚಿಕ್ಕಮಗಳೂರು ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿದ್ದೇನೆ. ಹೋದ ಕಡೆಯಲ್ಲಿ ಎನ್‌ಡಿಎಗೆ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ ಎಂದು ಎಚ್‌ಡಿಡಿ ಹೇಳಿದರು.

    400 ಸ್ಥಾನದ ಗುರಿ:
    ನರೇಂದ್ರ ಮೋದಿ ಅವರನ್ನು ಬಿಟ್ಟು ದೇಶವನ್ನು ಅಳುವ ಶಕ್ತಿ ಬೇರೆ ಯಾರಿಗೆ ಇದೆ ಹೇಳಿ. ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲುವ ಗುರಿಯಿದೆ. ರಾಜ್ಯದಿಂದ 28 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಗುರಿ ಸಾಧನೆ ಮಾಡಲಾಗುವುದು. ಮೈತ್ರಿಗೆ ಬಹುಮತ ನೀಡಿದರೆ ಮಾತ್ರ ಮೋದಿ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ದೇವೇಗೌಡ ತಿಳಿಸಿದರು.

    • ಮೈತ್ರಿಯಿಂದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ
      ಮಾಜಿ ಸಿಎಂ, ಸಂಸದ ಸದಾನಂದ ಗೌಡ ಮಾತನಾಡಿ, ದೇಶಕ್ಕಾಗಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಬೇಕು ಎಂದು ಸಲಹೆ ನೀಡಿದರು.
      ಮೋದಿ ಅವರು ಪ್ರಧಾನಮಂತ್ರಿಯಾಗಿ ಸಾಮಾನ್ಯ ವ್ಯಕ್ತಿಗಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತರ ಹಿತಾಸಕ್ತಿಗಾಗಿ ಎಚ್.ಡಿ.ದೇವೇಗೌಡರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಂಪತ್ತನ್ನು ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ಮುಂದಿಟ್ಟುಕೊAಡು ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದ್ದಾರೆ. ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸಬೇಕು ಎಂದರು. ಪಕ್ಷಗಳಲ್ಲಿ ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು.
    • ಶುದ್ಧೀಕರಿಸಬೇಕು
      ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ಜಿಲ್ಲೆಗೆ ಬಂದು ಹೋಗಿರುವುದಕ್ಕೆ ಗಂಜಲ ಹಾಕಿ ಶುದ್ಧ ಮಾಡಬೇಕು. ಅವರಿಗೆ ಯಾವ ಕೈಯಲ್ಲಿ ಉದ್ಘಾಟನೆ ಮಾಡಬೇಕು ಎಂಬುದು ಅರಿವಿಲ್ಲ ಎಂದರು.
      ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ ಬರುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ಭವಿಷ್ಯ ನುಡಿದಿದ್ದಾರೆ, ಹೀಗಾಗಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.
    • ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ:
      ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೋಲಾರ ಕ್ಷೇತ್ರದಿಂದ ಬೋವಿ ಸಮುದಾಯದ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಲಾಗಿದೆ. ಎನ್‌ಡಿಎ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲಿಸಿಕೊಳ್ಳಬೇಕು ಎಂದರು.
    • ಸಿದ್ದರಾಮಯ್ಯ-ಕೆಎಚ್‌ಎಂ ಸಂಬಂಧ ಅಪವಿತ್ರ:
      ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿ ಅಪವಿತ್ರ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಆದರೆ ಕೆ.ಎಚ್.ಮುನಿಯಪ್ಪ ಮತ್ತು ಸಿದ್ದರಾಮಯ್ಯ ನಡುವೆ ಇರುವುದೇ ಅಪವಿತ್ರ ಸಂಬಂಧ. ನಮ್ಮನ್ನು ಟೀಕೆ ಮಾಡುತ್ತೀರಾ, ಕಾಂಗ್ರೆಸ್‌ನವರಿಗೆ ಚುನಾವಣೆಗಳು ಬಂದಾಗ ಮಾತ್ರ ಮುಸ್ಲಿಂ, ದಲಿತರು ಜ್ಞಾಪಕ ಬರುತ್ತಾರೆ. ಈಗಾಲಾದರು ಎಚ್ಚೆತ್ತುಕೊಂಡು ಬದಲಾವಣೆ ಬಯಸಿ ಬೆಂಬಲ ನೀಡಬೇಕು ಎಂದರು.

    ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಇಂಚರ ಗೋವಿಂದರಾಜು, ಮಾಜಿ ಶಾಸಕರಾದ ಕೆ.ಎಸ್.ಮಂಜುನಾಥ್‌ಗೌಡ, ವೈ.ಸಂಪAಗಿ, ಮಾಜಿ ಎಂಎಲ್ಸಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಲೋಕಸಭಾ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ಮುಖಂಡರಾದ ರಾಮೇಗೌಡ, ರಾಮು, ಕೋಳಗಂಜನಹಳ್ಳಿ ಗೋಪಾಲಕೃಷ್ಣ, ಟಿ.ಬಿ.ಕೃಷ್ಣಪ್ಪ, ಬಿ.ಕೆ.ನಾರಾಯಣಸ್ವಾಮಿ, ರಾಮಸ್ವಾಮಿ, ಅದಿಕಾರಟ್ಟಿ ಬಾಬು, ಎಂ.ಎಲ್.ಆರ್.ರಾಮೂರ್ತಿ, ಎಂ.ವಿ.ವೇಮನ, ಬಲ್ಲಹಳ್ಳಿ ನಾರಾಯಣಸ್ವಾಮಿ ಇದ್ದರು.

    ಬಾಕ್ಸ್
    ಕೃಷ್ಣಾ, ಮೇಕೆದಾಟು ನೀರು ತಂದೇ ತರುವೆ:
    ತಮಿಳುನಾಡು ಸಿಎಂ ಸ್ಟಾಲಿನ್ ಪ್ರಣಾಳಿಕೆಯಲ್ಲಿ ಕನ್ನಡಿಗರಿಗೆ ಕಾವೇರಿ ನೀರು ಕೊಡುವುದಿಲ್ಲ, ಮೇಕೆದಾಟು ಬಿಡಲ್ಲ ಎಂದು ಘೋಷಿಸಿಕೊಂಡಿದ್ದಾರೆ. ನಾವು 28 ಸ್ಥಾನಗಳನ್ನು ಗೆದ್ದು ನಮ್ಮ ನಿಲುವು ಮಂಡಿಸಿ ಕೃಷ್ಣ ಮತ್ತು ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ನೀರು ತಂದೆ ತರುತ್ತೇನೆ. ನಾನು ಇನ್ನು ಎರಡು ವರ್ಷ ರಾಜ್ಯಸಭಾ ಸದಸ್ಯನಾಗಿ ಅಧಿಕಾರದಲ್ಲಿ ಇರುತ್ತೇನೆ. ನಾವು ಕನ್ನಡಿಗರು, ನಮ್ಮ ಶಕ್ತಿಯನ್ನು ಚುನಾವಣೆಯಲ್ಲಿ ತೋರಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts