More

    ಬೌದ್ಧಿಕ ದಿವಾಳಿಯತ್ತ ಸಾಗಿದ ಕಾಂಗ್ರೆಸ್ ; ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಟೀಕೆ

    ರಾಯಚೂರು: ಪ್ರಧಾನಿ ನರೇಂದ್ರ ಮೋದಿಗೆ ವಿರೋಧ ಮಾಡುತ್ತಾ, ದೇಶ ವಿರೋಧಿಸುವಂತಹ ಬೌದ್ಧಿಕ ದಿವಾಳಿಯತ್ತ ಕಾಂಗ್ರೆಸ್ ಸಾಗುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಗೆ ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಕಿಡಿಕಾರಿದರು.

    ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಗಾಂಧೀಜಿ ಪುತ್ಥಳಿ ಬಳಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ತಾವು ಮುಂದೆ ಅಧಿಕಾರಕ್ಕೆ ಬಂದಲ್ಲಿ ಜಮ್ಮುಕಾಶ್ಮೀರಕ್ಕೆ 370 ವಾಪಸ್ ಜಾರಿ, ಸಿಎಎ ರದ್ದು ಮಾಡುವ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.

    ಕಾಂಗ್ರೆಸ್ ಈ ಹಿಂದೆ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ನೀಡುವುದಾಗಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎನ್‌ಪಿಆರ್ ಜಾರಿಗೆ ತರಲು ಮುಂದಾಗಿತ್ತು. ಆದರೆ, ಅದನ್ನು ಬಿಜೆಪಿ ಸರ್ಕಾರ ಮಾಡಲು ಮುಂದಾದಾಗ ಕಾಂಗ್ರೆಸ್ ವಿರೋಧಿಸುತ್ತಿದೆ.

    ಏಕಾಂಗಿಯಾಗಿರುವ ಪಾಕಿಸ್ತಾನ ಭೀಕ್ಷಾ ಪಾತ್ರೆ ಹಿಡಿದುಕೊಂಡು ಓಡಾಡುತ್ತಿದ್ದು, ಕಾಂಗ್ರೆಸ್ ಅವರ ಪರ ಮಾತನಾಡುತ್ತಿದೆ. ಅಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದುಗಳು ಹಾಗೂ ಇತರರಿಗೆ ಪೌರತ್ವ ನೀಡುವ ನಿಟ್ಟಿನಲ್ಲಿ ಸಿಎಎ ಜಾರಿಗೊಳಿಸಲಾಗಿದೆ ಎಂದರು.

    ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕಳೆದ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ವಿಸ್ತರಣೆಗೆ ಮತ ಚಲಾಯಿಸಲು ಸಂಸತ್ತಿಗೆ ಆಗಮಿಸದೆ ಕಾಂಗ್ರೆಸ್‌ನ ಸೋನಿಯಾ, ರಾಹುಲ್ ಗಾಂಧಿ ಹಿಂದುಳಿದವರ ಬಗ್ಗೆ ತಮಗೆ ಎಷ್ಟು ಮಮಕಾರವಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿದರು. ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಶಾಸಕರಾದ ಗಂಗಾಧರ ನಾಯಕ, ಮಾನಪ್ಪ ವಜ್ಜಲ್, ಬಸವನಗೌಡ ಬ್ಯಾಗವಾಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts