More

    ಮೆಕ್ಕೆಜೋಳ, ಹತ್ತಿಗೆ ಕೀಟ ಬಾಧೆ

    ಬ್ಯಾಡಗಿ: ತಾಲೂಕಿನಾದ್ಯಂತ ಜುಲೈನಲ್ಲಿ ಮಳೆ ತೀವ್ರಗೊಂಡ ಪರಿಣಾಮ ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿಹುಳುವಿನ ಬಾಧೆ ಕಾಣಿಸಿಕೊಂಡಿದೆ. ಬೆಳೆ ರಕ್ಷಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.

    ತಾಲೂಕಿನ ಒಟ್ಟು 32 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಅಂದಾಜು 22 ಸಾವಿರ ಹೆಕ್ಟೇರ್​ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಜೂನ್, ಜುಲೈನಲ್ಲಿ ಸುರಿದ ಮಳೆಯಿಂದ ತಾಲೂಕಿನ ಮಲೆನಾಡು ಪ್ರದೇಶದಲ್ಲಿ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಹೀಗಾಗಿ, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಅಲ್ಲಲ್ಲಿ ಲದ್ದಿಹುಳುವಿನ ಬಾಧೆ ಕಂಡುಬಂದಿದೆ. ಮೆಕ್ಕೆಜೋಳ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆಯಿದೆ. ತಡವಾಗಿ ಬಿತ್ತಿದ ಬೆಳೆಯಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ.

    ತಾಲೂಕಿನ ಕಾಗಿನೆಲೆ ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲದ್ದಿಹುಳುವಿನ ಬಾಧೆ ಕಂಡುಬಂದಿದೆ. 16 ಲೀಟರ್ ನೀರಿಗೆ 10 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ ಔಷಧ ಬೆರೆಸಿ ಸಿಂಪಡಿಸಬೇಕು. ಇದರಿಂದ ಒಂದೆರಡು ದಿನಗಳಲ್ಲಿ ಹುಳುಗಳು ನಾಶವಾಗಲಿವೆ. ಅಲ್ಲದೆ, ಪೋಷಕಾಂಶಗಳ ಕೊರತೆಯಿಂದ ಗಿಡಗಳ ಎಲೆಗಳ ಮೇಲೆ ಹಳದಿ ಮಿಶ್ರಿತ ಗೆರೆಗಳು ಕಂಡುಬಂದಿದ್ದು, ಲಘು ಪೋಷಕ ದ್ರಾವಣ ಬಳಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ಹತ್ತಿಗೆ ಕಾಂಡಕೊರಕ ಬಾಧೆ: ಕುಮ್ಮೂರು, ಮಾಸಣಗಿ, ಮೋಟೆಬೆನ್ನೂರು, ಬೆಳಕೇರಿ, ಬನ್ನಿಹಟ್ಟಿ, ಶಿಡೇನೂರು, ಮುತ್ತೂರು ಗ್ರಾಮಗಳಲ್ಲಿ ಹತ್ತಿ ಬೆಳೆ ತಿಂಗಳು ದಾಟಿದ್ದು, ಕಾಂಡಕೊರಕ ದುಂಬಿಯ ಬಾಧೆ ಕಂಡುಬಂದಿದೆ. ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್​ಗೆ 30 ಕಿಲೋ ಕಾಬೋಪ್ಯುರಾನ್ ಪುಡಿ ನೆಲಕ್ಕೆ ಸೇರಿಸಿದಲ್ಲಿ ಹುಳುಗಳನ್ನು ಸಾಯಿಸಬಹುದು. ಕಾಂಡಕೊರಕ ಹುಳು ನಿಯಂತ್ರಿಸಲು 16 ಲೀಟರ್ ನೀರಿಗೆ 20 ಎಂಎಲ್ ಫ್ರೊಪೆನೋಫಾಸ್ ಔಷಧ ಬೆರೆಸಿ ಸಿಂಪಡಿಸಬೇಕು. ಅಲ್ಲದೆ, ಬೆಳೆಗಳ ಕುಡಿ ಕತ್ತರಿಸುವ ಹಾಗೂ ಕಾಂಡ ತಿನ್ನಲು ಯತ್ನಿಸುವ ದುಂಬಿಗಳ ನಿಯಂತ್ರಣಕ್ಕೆ ಎಕರೆಗೆ 3ರಂತೆ ಮೋಹಕ ಬಲೆಗಳನ್ನು ಹೊಲಗಳ ಬದುವು ಹಾಗೂ ಮಧ್ಯಬಾಗದಲ್ಲಿ ಅಳವಡಿಸಬೇಕು.

    ರೈತರಿಗೆ ಕ್ರಿಮಿನಾಶಕ, ಇತರ ಔಷಧ ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗುತ್ತಿದೆ. ದಾಖಲೆ ಸಲ್ಲಿಸಿ ಪಡೆಯಲು ಅವಕಾಶವಿದೆ. ಈಗ ವಿವಿಧ ಬೆಳೆಗಳಲ್ಲಿ ರೋಗದ ಬಾಧೆ ಕಂಡುಬಂದಿದ್ದು, ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಗ್ರಾಮ ಸಹಾಯಕರು, ಇಲ್ಲವೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಸಲಹೆ- ಸೂಚನೆ ಪಡೆಯಬೇಕು.

    | ಬಸವರಾಜ ಮರಗಣ್ಣನವರ, ಕೃಷಿ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts