More

    ಕರಾವಳಿಗೆ ಬಾರದು ಮಿಡತೆ ದಂಡು

    ಉಡುಪಿ: ಕರೊನಾ ಬಳಿಕ ಉತ್ತರ ಭಾರತ ರಾಜ್ಯಗಳಲ್ಲಿ ಮಿಡತೆ ಹಾವಳಿ ಕಂಡುಬಂದಿದ್ದು, ರಾಜ್ಯದಲ್ಲೂ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಆದರೆ ಕರಾವಳಿಗೆ ಈ ಮಿಡತೆಗಳಿಂದ ಯಾವುದೇ ಆತಂಕ ಇಲ್ಲ, ಕರಾವಳಿ ಜಿಲ್ಲೆಗಳ ಕಡೆಗೆ ಈ ಮಿಡತೆ ದಂಡು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಕೇಂದ್ರದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ದೊಡ್ಡ ಪ್ರಮಾಣದಲ್ಲಿರುವ ಮಿಡತೆ ದಂಡು ಮಹಾರಾಷ್ಟ್ರ ದಾಟಿ ಬರುವ ಸಾಧ್ಯತೆ ಕಡಿಮೆ. ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಹಡುಕಿಕೊಂಡು ಬರುತ್ತಿವೆ. ಈಗಾಗಲೇ ಅವುಗಳಿಗೆ ಬೇಕಾದಷ್ಟು ಆಹಾರ ಇರುವ ಪ್ರದೇಶಗಳು ಸಿಕ್ಕಿದ್ದರಿಂದ ಇನ್ನು ವಲಸೆ ಪ್ರಮಾಣ ಕಡಿಮೆ ಆಗಬಹುದು. ಕರ್ನಾಟಕಕ್ಕೆ ಬಂದರೂ ಸೀಮಿತ ಸಂಖ್ಯೆಯಲ್ಲಿ ಬರಬಹುದು. ಮಲೆನಾಡು, ಕರಾವಳಿ ಭಾಗದ ಕೃಷಿಕರು ಆತಂಕಪಡುವ ಅಗತ್ಯ ಇಲ್ಲ ಎನ್ನುತ್ತಾರೆ ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ಎಸ್.ಯು ಪಾಟೀಲ್.
    ಜೀವಿತಾವಧಿ ಎರಡು ತಿಂಗಳು: ಈ ಮಿಡತೆಗಳು ಮರಳು ಮಿಶ್ರಿತ ಭೂಮಿಯಲ್ಲಿ ಮಾತ್ರ ಬದುಕುಳಿಯುತ್ತವೆ. ಕರ್ನಾಟಕದ ಬೀದರ್ ಮೊದಲಾದ ಭಾಗದಲ್ಲಿ ಕಪ್ಪು ಮಣ್ಣು ಪ್ರದೇಶ. ಒಂದುವೇಳೆ ಈ ಮಿಡತೆ ದಂಡು ರಾಜ್ಯಕ್ಕೆ ಪ್ರವೇಶಿಸಿದರೂ ಇಲ್ಲಿ ಮೊಟ್ಟೆ ಇಡಲು ಅನುಕೂಲ ವಾತಾವರಣ ಇಲ್ಲ. ಮೊಟ್ಟೆ, ಮರಿಗಳು ಸಾವನ್ನಪ್ಪುತ್ತವೆ, ಪ್ರೌಢಾವಸ್ಥೆಯಲ್ಲಿರುವ ಮಿಡತೆಗಳು ಮಾತ್ರ ಬದುಕುಳಿಯಬಹುದು. ಮಿಡತೆ (ಲೊಕ್ಟಸ್)ಜೀವಿತಾವಧಿ 2 ತಿಂಗಳು ಎನ್ನುತ್ತಾರೆ ಕೀಟ ತಜ್ಞರು.

    ಕರಾವಳಿಯಲ್ಲೂ ಇದ್ದವು ಕಣೆ ಮಿಡತೆಗಳು!: ಈ ಹಿಂದೆ ಕರಾವಳಿಯಲ್ಲಿಯೂ ಕಣೆ ಮಿಡತೆಗಳಿದ್ದವು. ಇವು ಭತ್ತ ಬೆಳೆಗಾರರ ಪಾಲಿಗೆ ತೀವ್ರ ತಲೆನೋವಾಗಿದ್ದವು. ಕಣೆ ಮಿಡತೆ ಸಂಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿದೆ. ಎಂಒ4, ಪಂಚಮುಖಿ ಭತ್ತದಂತ ಕೀಟ ನಿರೋಧಕ ತಳಿ ಅಭಿವೃದ್ಧಿಪಡಿಸಿದ ಬಳಿಕ ಕಣೆ ಕೀಟ ಕಾಣೆಯಾಗುತ್ತಿದೆ. ಈ ಹಿಂದಿನಂತೆ ಅವುಗಳ ಸಂತಾನೋತ್ಪತ್ತಿ ದೊಡ್ಡಮಟ್ಟದಲ್ಲಿ ಇಲ್ಲ ಎನ್ನುತ್ತಾರೆ ತಜ್ಞರು.
    ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಈ ರೀತಿಯ ಮಿಡತೆಗಳು ಇರುತ್ತವೆ. ನಮ್ಮಲ್ಲಿಯೂ ನಾಲ್ಕೈದು ಬಗೆಯ ಮಿಡತೆಗಳು ಇವೆ, ರೈತರೇ ಅದನ್ನು ನಿಯಂತ್ರಿಸುತ್ತಾರೆ. ನೈಸರ್ಗಿಕ ಶತ್ರುವಿನ ದಾಳಿಯಿಂದಾಗಿ ಇವುಗಳು ಆಗಾಧ ಪ್ರಮಾಣದಲ್ಲಿ ರೂಪುಗೊಳ್ಳುವುದಿಲ್ಲ. ಇಲ್ಲಿನ ತಾಪಮಾನ, ಪೂರಕ ವಾತಾವರಣ ಇಲ್ಲದಿರುವುದು, ಪರಭಕ್ಷಕ ಜೀವಿಗಳಿಂದಾಗಿ ಇವುಗಳ ವಂಶವೃದ್ಧಿಗೆ ಹೊಡೆತ ಬೀಳುತ್ತದೆ. ಮೊಟ್ಟೆಗಳು ನಾಶವಾಗುತ್ತವೆ, ಹೆಚ್ಚಿನ ಮರಿಗಳು ಅನಾರೋಗ್ಯಕ್ಕೀಡಾಗಿ ಸಾಯುತ್ತವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

    ನೂಜಿಬಾಳ್ತಿಲ ತೋಟದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು:
     ಕಡಬ: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಏರ ಎಂಬಲ್ಲಿ ಕೃಷಿಕರೋರ್ವರ ಜಾಗದಲ್ಲಿ ಅಪರೂಪದ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತ ಮಿಡತೆಯ ಗುಂಪೊಂದು ಶುಕ್ರವಾರ ಸಾಯಂಕಾಲ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
    ಕೊಣಾಜೆ ಕಾಡಂಚಿನ ಪ್ರದೇಶದ ಏರ ಪ್ರದೇಶದ ರೈತ ವಿಶ್ವನಾಥ್ ಎಂಬುವರ ತೋಟದ ಜಾಗದ ಮರವೊಂದರಲ್ಲಿ ಶುಕ್ರವಾರ ಸಾಯಂಕಾಲ ಈ ಮಿಡತೆಯ ಹಿಂಡು ಕಾಣಿಸಿಕೊಂಡಿದೆ. ಈ ಮಿಡತೆಗಳು ರಾತ್ರಿವರೆಗೂ ಕಾಣಿಸಿಕೊಂಡಿದ್ದವು. ಶನಿವಾರ ಬೆಳಗ್ಗೆ ಇದೇ ಮರದಲ್ಲಿ ಹಕ್ಕಿಗಳು ಹಾರಾಡುತ್ತಿದ್ದವು. ಆದರೆ ಮಿಡತೆಗಳು ಕಾಣಿಸಿಕೊಂಡಿಲ್ಲ.
    ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದ ಬೀದರ್ ಜಿಲ್ಲೆ ಮೊದಲಾದೆಡೆ ಕಾಣಿಸಿಕೊಂಡ ಮಿಡತೆಯ ಗಾತ್ರವನ್ನು ಹೋಲುತ್ತಿದ್ದು, ಇದರಿಂದಾಗಿ ಈ ಭಾಗಕ್ಕೂ ಅಪರೂಪದ ಹಸಿರು ಮಿಡತೆ ವಕ್ಕರಿಸಿದೆ ಎನ್ನುವ ಆತಂಕ ಈ ಭಾಗದ ರೈತರಲ್ಲಿ ಮನೆಮಾಡಿದೆ.

    ಇತ್ತೀಚೆಗೆ ದೇಶದ ಹೊರ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಮಿಡೆತಗಳ ಬಗ್ಗೆ ಮಾಧ್ಯಮದ ಮೂಲಕ ತಿಳಿದು ಆತಂಕವಾಗಿದೆ. ಇಂತಹುದೆ ಗಾತ್ರದ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತ ಮಿಡತೆಗಳ ಗುಂಪು ನಮ್ಮ ಜಾಗದ ಮರವೊಂದರಲ್ಲಿ ಇರುವುದು ಶುಕ್ರವಾರ ಸಾಯಂಕಾಲ ಗಮನಕ್ಕ ಬಂದಿದೆ. ಶನಿವಾರ ಬೆಳಗ್ಗೆ ಈ ಮರದ ಸುತ್ತ ಸ್ಥಳೀಯವಾಗಿ ಕಾಣಿಸುವ ವಿವಿಧ ಜಾತಿಯ ಹಕ್ಕಿಗಳು ಹಾರಾಡುತ್ತಿದ್ದವು, ಮಿಡತೆಗಳು ಇರಲಿಲ್ಲ. ಹಕ್ಕಿಗಳು ತಿಂದಿರುವ ಸಂಶಯವಿದೆ. ಮತ್ತೆ ಮಿಡತೆಗಳು ಬರಬಹುದು ಎಂಬ ಆತಂಕವಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
    ವಿಶ್ವನಾಥ ಏರ, ರೈತ

    ಮಿಡತೆ ಹಾವಳಿ ಬಗ್ಗೆ ಕರಾವಳಿಯಲ್ಲಿ ಆತಂಕಪಡುವ ಅಗತ್ಯವಿಲ್ಲ, ಲೊಕಸ್ಟ್ ಮಿಡತೆಗಳ ದಂಡು ಇಲ್ಲಿಗೆ ಧಾವಿಸಿಬರುವ ಸಾಧ್ಯತೆ ತೀರಾ ಕಡಿಮೆ. ಅವುಗಳಿಗೆ ಇಲ್ಲಿ ಬದುಕುಳಿಯುವ, ಸಂತಾನೋತ್ಪತ್ತಿ ಬೆಳೆಸುವ ಪೂರಕ ವಾತಾವರಣ ಇಲ್ಲ.
    ಡಾ.ಎಸ್.ಯು.ಪಾಟೀಲ್ ಸಹ ಸಂಶೋಧನಾ ನಿರ್ದೇಶಕ ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts