More

    ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಯ ಪರಿಶಿಷ್ಟರಿಗೆ ಅನ್ಯಾಯ: ಎಂ.ಎಂ.ಪರಮೇಶ್ವರ್ ಆರೋಪ

    ಮಡಿಕೇರಿ: ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಆರೋಪಿಸಿದರು.


    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಮಾಡುವುದು ಖಂಡನೀಯ. ಈ ರೀತಿ ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡುವ ಮೂಲಕ ಪರಿಶಿಷ್ಟರಿಗೆ ಸರ್ಕಾರ ವಂಚನೆ ಮಾಡುತ್ತಿದೆ. ದುರ್ಬಲ ವರ್ಗವನ್ನು ಹಸಿವಿನಲ್ಲಿಟ್ಟು ಇತರರ ಹೊಟ್ಟೆ ತುಂಬಿಸುವ ಕಾರ್ಯ ಯಾಕೆ ಮಾಡಬೇಕು. ಪರಿಶಿಷ್ಟರ ಅನುದಾನವನ್ನು ಬಳಸಿಕೊಂಡಂತೆ ಅಲ್ಪಸಂಖ್ಯಾತರ ಅನುದಾನವನ್ನು ಯಾಕೆ ಬಳಸಿಕೊಳ್ಳುತ್ತಿಲ್ಲವೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


    ಇಂದು ಪರಿಶಿಷ್ಟರ ಅಭಿವೃದ್ಧಿಗೆ ಹಣ ಇಲ್ಲದಾಗಿದೆ. ಅಧಿಕಾರಿಗಳ ಬಳಿ ವಿಚಾರಿಸಿದರೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಪರಿಶಿಷ್ಟ ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿ ವೇತನಕ್ಕೆ ಕಷ್ಟವಾಗಿದೆ. ಹಾಸ್ಟೆಲ್ ಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಟಿತವಾಗುತ್ತಿದೆ. ಪರಿಶಿಷ್ಟ ಕಾಲನಿಗಳು ಅಭಿವೃದ್ಧಿ ವಂಚಿತವಾಗುತ್ತಿವೆ. ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯ ಹಕ್ಕುಗಳು ದುರುಪಯೋಗವಾಗುತ್ತಿದೆ. ಕಾಂಗ್ರೆಸ್ ಸರಕಾರ ಒಂದು ವರ್ಗವನ್ನು ಮಾತ್ರ ಓಲೈಸಿಕೊಳ್ಳಲು ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.


    ಕೇಂದ್ರ ಸರಕಾರದ ವಿರುದ್ಧ ಚೊಂಬು ಜಾಹೀರಾತು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಕೀಳು ಮಟ್ಟದ ರಾಜಕಾರಣ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಮೊದಲು ಸಾಬೀತುಪಡಿಸಲಿ ಎಂದರು.


    ರಾಜ್ಯ ಸರ್ಕಾರ ಕೇಂದ್ರದ ಬಳಿ ಗೌರವಯುತವಾಗಿ ಬರಪರಿಹಾರ ಕೇಳಿದ್ದರೆ ಸಿಗುತ್ತಿತ್ತು. ಆದರೆ ಈಗ ಖಜಾನೆ ಖಾಲಿ ಮಾಡಿ ಭಿಕ್ಷೆ ಬೇಡುವ ಮಟ್ಟಕ್ಕೆ ಬಂದು ತಲುಪಿದ್ದು, ತಾನು ಮಾಡಿದ ತಪ್ಪಿಗೆ ಕೇಂದ್ರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ಪ್ರಧಾನಿ ನರೇಂದ್ರಮೋದಿಯವರನ್ನು ಇಡೀ ವಿಶ್ವವೇ ಅತ್ಯುತ್ತಮ ನಾಯಕ ಎಂದು ಒಪ್ಪಿಕೊಂಡಿದೆ. ಇದನ್ನು ಸಹಿಸದ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ. ಅತ್ಯಂತ ಉನ್ನತ ಹುದ್ದೆಯಲ್ಲಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ವೊಬ್ಬರು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಅವಹೇಳನ ಮಾಡಿದ್ದಾರೆ. ಇದನ್ನು ಎಸ್‌ಟಿ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಭ್ರಷ್ಟ ಕಾಂಗ್ರೆಸ್ಸಿಗರ ವಿರುದ್ಧ ಸಮರ ಸಾರಿದ ಕಾರಣಕ್ಕಾಗಿ ಮೋದಿಯವರನ್ನು ಕಾಂಗ್ರೆಸ್ ಗುರಿ ಮಾಡುತ್ತಿದೆ ಎಂದು ಟೀಕಿಸಿದರು.


    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ, ಯುವ ನಾಯಕ ಯದುವೀರ್ ಅವರು ಎಲ್ಲಾ ವರ್ಗದ ಜನರ ಸಂಕಷ್ಟವನ್ನು ಬಲ್ಲವರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟರ ಮತಗಳು ಅಧಿಕ ಸಂಖ್ಯೆಯಲ್ಲಿದ್ದು, ಯದುವೀರ್ ಅವರ ಪರ ಒಲವು ವ್ಯಕ್ತವಾಗಿದೆ. ಇವರ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಆರ್.ಪ್ರಭಾಕರ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆಗಳನ್ನು ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇಂದು ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಗಳಾಗಿದ್ದಾರೆ. ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳನ್ನು ನೀಡಿ ಸಂವಿಧಾನದ ಆಶಯಕ್ಕೆ ಪೂರಕವಾಗಿ ನಡೆದುಕೊಂಡಿರುವುದನ್ನು ಬಿಜೆಪಿ ಸಾಬೀತು ಪಡಿಸಿದೆ. ಕಾಂಗ್ರೆಸ್ಸಿಗರ ಯಾವುದೇ ಅಪಪ್ರಚಾರ ಅಥವಾ ಆಮಿಷಗಳಿಗೆ ಯಾರೂ ಬೆಲೆ ನೀಡಬಾರದು. ದೇಶದ ಸುಭದ್ರತೆಯ ದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರಮೋದಿ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು.


    ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿ.ಕೆ.ಜಯಣ್ಣ, ವಿರಾಜಪೇಟೆ ಅಧ್ಯಕ್ಷ ಪಿ.ಎ.ಮುತ್ತುರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts