More

    ಮತದಾನಕ್ಕೆ ಮಹಿಳೆಯರ ನಿರಾಸಕ್ತಿ, ಜಾಗೃತಿ ಮೂಡಿಸಿದರೂ ಆಗದ ಪ್ರಯೋಜನ

    ಆರ್.ಕೃಷ್ಣ ಮೈಸೂರು

    ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕವಾಗಿದ್ದರೂ ಮತದಾನ ಮಾಡಲು ಮಾತ್ರ ನಿರಾಸಕ್ತಿ ತೋರುತ್ತಿದ್ದಾರೆ.
    ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಮತದಾರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕರಸತ್ತು ನಡೆಸಿದರೂ ನಿರೀಕ್ಷಿತ ಫಲ ನೀಡುತ್ತಿಲ್ಲ.
    2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಹಿಳೆಯರ ಮತದಾನ ಪ್ರಮಾಣ ಶೇ. 67.65 ರಷ್ಟಿತ್ತು. ಶೇ.69.66ರಷ್ಟು ನಡೆದ ಪುರುಷರ ಮತದಾನ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸ್ತ್ರೀಯರ ಮತದಾನ ಪ್ರಮಾಣ ಶೇ. 2.01ರಷ್ಟು ಕಡಿಮೆಯಾಗಿತ್ತು.
    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 28 ಕ್ಷೇತ್ರಗಳ ಪೈಕಿ ಸಾಕಷ್ಟು ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಪ್ರಾಬಲ್ಯವಿದೆ. ಆದರೆ ನಿರ್ಣಾಯಕ ಪಾತ್ರ ವಹಿಸಲಿರುವ ಸ್ತ್ರೀಶಕ್ತಿ ಮತಗಟ್ಟೆಯತ್ತ ಬಾರದೇ ಇರುವುದೇ ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿದೆ.
    ಮಹಿಳಾ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಿಶೇಷವಾಗಿ ಸಖಿ ಬೂತ್ ಸ್ಥಾಪನೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳಾ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗುತ್ತಿಲ್ಲ.
    ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಮತಗಟ್ಟೆಗೆ ಬಂದು ಮತದಾನ ಮಾಡಿದವರ ಸಂಖ್ಯೆ ಕಡಿಮೆ ಇತ್ತು. ಪುರುಷರ ಮತದಾನ ಪ್ರಮಾಣ ಶೇ. 70.39 ರಷ್ಟಿದ್ದರೆ, ಮಹಿಳೆಯರ ಮತದಾನ ಪ್ರಮಾಣ ಶೇ. 68.17ರಷ್ಟು ಆಗಿತ್ತು.
    ಮತಗಟ್ಟೆಗೆ ಬಾರದಿರಲು ಕಾರಣ:
    ಮಹಿಳೆಯರ ವಾಸ ಸ್ಥಳದಿಂದ ಮತಗಟ್ಟೆಗಳು ದೂರ ಇರುವುದು, ಮತದಾನ ಮಾಡಬೇಕೆಂಬ ಜಾಗೃತಿ ಕೊರತೆ, ಮನೆ ಸೇರಿದಂತೆ ಇನ್ನಿತರೆ ಕೆಲಸದ ಒತ್ತಡದ ಮಧ್ಯೆ ಬಿಡುವಾಗದಿರುವುದು, ರಾಜಕೀಯದ ಬಗ್ಗೆ ಇರುವ ತಾತ್ಸಾರ ಸೇರಿದಂತೆ ಇನ್ನಿತರೆ ಕಾರಣಗಳಿಂದ ದೂರ ಉಳಿಯುತ್ತಿದ್ದಾರೆ.

    ರಾಜಕೀಯ ಕ್ಷೇತ್ರ ಕೇವಲ ಪುರುಷರಿಗಷ್ಟೇ ಮೀಸಲು. ಅಲ್ಲಿ ಮಹಿಳೆಯರಿಗೆ ಆದ್ಯತೆ ಇಲ್ಲ ಎಂಬ ಮನೋಭಾವ ಮಹಿಳೆಯರನ್ನು ಮತದಾನದಿಂದ ವಿಮುಖವನ್ನಾಗಿಸಿದೆ. ಜತೆಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡದೇ ಇರುವುದು ಮಹಿಳೆಯರು ಮತಗಟ್ಟೆಯತ್ತ ಬಾರದೇ ಇರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಸೇರಿದಂತೆ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

    2019ರ ಚುನಾವಣೆಯಲ್ಲಿ ರಾಜ್ಯದ ಮತದಾರರು
    ಪುರುಷರು -2,57,98,590
    ಮಹಿಳೆಯರು -2,52,48,016
    ತೃತೀಯ ಲಿಂಗಿಗಳು- 4836
    ಒಟ್ಟು – 5,10,46,606

    ಮತಚಲಾಯಿಸಿದ ಒಟ್ಟು ಮತದಾರರು: 35,13,83,326
    ಮಹಿಳೆಯರು- 1,70,80,302
    ಪುರುಷರು-1,79,72,842

    ತೃತೀಯ ಲಿಂಗಿಗಳು-516

    2019ರಲ್ಲಿ ಮತದಾನ ಪ್ರಮಾಣ
    ಪುರುಷರು- ಶೇ.69.66

    ಮಹಿಳೆಯರು-ಶೇ.67.65

    2024ರ ಚುನಾವಣೆಯ ರಾಜ್ಯದ ಮತದಾರರು
    ಪುರುಷರು-2,69,33,750
    ಮಹಿಳೆಯರು-2,68,47,145
    ತೃತೀಯ ಲಿಂಗಿಗಳು-4920

    ಒಟ್ಟು ಮತದಾರರು- 5,37,85,815

    ರಾಜಕಾರಣದಲ್ಲಿ ಪುರುಷರ ಪ್ರಾಬಲ್ಯ ಇರುವುದರಿಂದ ಸಹಜವಾಗಿ ಮಹಿಳೆಯರು ರಾಜಕೀಯ ಹಾಗೂ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ರಾಜಕಾರಣದಲ್ಲಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಿದರೆ ಮತದಾನ ಪ್ರಮಾಣ ಹೆಚ್ಚಾಗಬಹುದು.
    ಪ್ರೊ.ಆರ್.ಇಂದಿರಾ, ಸಮಾಜಶಾಸ್ತ್ರಜ್ಞೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts