More

    ಭಾರತದ ಭವಿಷ್ಯ ಯುವ ಜನರ ಏಳಿಗೆಯಲ್ಲಡಗಿದೆ – ಕನ್ನೂರಿನ ಕೃಷ್ಣ ಸಂಪಗಾಂವಕರ ಹೇಳಿಕೆ

    ವಿಜಯಪುರ: ಜನ್ಮದಿಂದ ಎಲ್ಲರೂ ಶೂದ್ರರು, ಬುದ್ದಿ- ಸಂಸ್ಕಾರದಿಂದ ಎಲ್ಲರೂ ದ್ವಿಜರಾಗುತ್ತಾರೆ. ಅಂಥ ಬುದ್ದಿ -ಸಂಸ್ಕಾರ ಕೊಡುವ ಕೆಲಸ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದ ಎಜುಕೇಶನ್ ಎಕ್ಸಪೋ ಮಾಡುತ್ತಿದೆ ಎಂದು ಕನ್ನೂರಿನ ಶಾಂತಿಕುಠೀರದ ಆಧ್ಯಾತ್ಮಿಕ ಚಿಂತಕ ಕೃಷ್ಣ ಸಂಪಗಾಂವಕರ ಮಾರ್ಮಿಕವಾಗಿ ನುಡಿದರು.

    ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಕನ್ನಡದ ನಂ.1 ದಿನಪತ್ರಿಕೆ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಎಜುಕೇಶನ್ ಎಕ್ಸಪೋ-2024 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಭಾರತದ ಭವಿಷ್ಯ ಯುವಜನತೆಯ ಏಳಿಗೆಯಲ್ಲಿದೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ ಎಂಬುದಕ್ಕೆ ಸ್ವಾಮಿ ವಿವೇಕಾನಂದರು, ವಿನ್ ಸ್ಟನ್ ಚರ್ಚಿಲ್, ವಿಜ್ಞಾನಿ ಯು.ಆರ್. ರಾವ್ ಸಾಕ್ಷಿ ಎಂದು ಅವರ ಸಾಧನೆಗಳ ಸಮೇತ ವಿವರಿಸಿದರು.

    ವಿನ್ಸಟನ್ ಚರ್ಚಿಲ್ ಅವರು ಒಂದು ಶಾಲೆಗೆ ಅತಿಥಿಯಾಗಿ ಹೋಗಿದ್ದರು. ಪ್ರಧಾನಿಯಾಗಿದ್ದ ಚರ್ಚಿಲ್ ಏನು ಮಾತನಾಡಲಿದ್ದಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾಗ ಚರ್ಚಿಲ್ ಹೇಳಿದ್ದು ನೆವರ್…ನೆವರ್…ನೆವರ್ ಎಂಬ ಮೂರೇ ಮೂರು ಪದ. ಅಂದರೆ ಎಂದಿಗೂ ಪ್ರಯತ್ನ ಬಿಟ್ಟುಕೊಡಬೇಡಿ ಎಂಬುದೇ ಅವರ ಮಾತಿನ ಮರ್ಮವಾಗಿತ್ತು ಎಂದರು.

    ನಡಿಯಲಿಕ್ಕೆ ಬಾರದ, ಕೈ- ಕಾಲು ಸಣ್ಣ ಹೊಟ್ಟೆ ಡುಮ್ಮ ಇದ್ದ ಫುಟ್ ಬಾಲ್ ಆಟಗಾರ ಒಜೆ ಸೆಮ್ ಸಂಗ್ ರ ಜೀವನ ಸಂದೇಶ ಹಾಗೂ ಸಾಧನೆ ಕುರಿತು ವಿವರಿಸಿದ ಕೃಷ್ಣ ಸಂಪಗಾಂವಕರ ಅವರು, ಸಾಧನೆಗೆ ದೇಹ ಅಡ್ಡಿಯಲ್ಲ, ಮನಸ್ಸು, ಛಲ ಮತ್ತು ಬುದ್ದಿಯಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ
    ಫುಟ್ ಬಾಲ್ ಆಟಗಾರ ಒಜೆ ಸೆಮ್ ಸಂಗ್ ಸಾಕ್ಷಿ ಎಂದರು.

    ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನಕ್ಕೆ ಹೋದಾಗ ಸರಿಯಾದ ಬಟ್ಟೆ ಇಲ್ಲ, ಹಸಿವೆಯಾಗಿದೆ, ಭಿಕ್ಷೆ ಕೇಳಿದರೂ ಯಾರೂ ಕೊಡುತ್ತಿಲ್ಲ ಆಗ ರೈಲ್ವೆ ಸ್ಟೇಶನ್ ನಲ್ಲಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿದರು. ತನ್ನ ಗಂಡನ ಬಟ್ಟೆ ನೀಡಿದರು‌. ಆ ಬಟ್ಟೆ ಧರಿಸಿದ ವಿವೇಕಾನಂದರನ್ನು ನೋಡಿ ಈ ಬಟ್ಟೆಯಿಂದಾಗಿ‌ ನೀವೊಬ್ಬ ಜೆಂಟಲ್ ಮೆನ್ ಥರ ಕಾಣುತ್ತಿದ್ದೀರಿ ಎಂದಾಗ ಸ್ವಾಮೀಜಿ ಅವರು ಬಟ್ಟೆಯಿಂದ ಜೆಂಟಲ್ ಮೆನ್ ಆಗಲ್ಲ….ವ್ಯಕ್ತಿ ಹಾಗೂ ವ್ಯಕ್ತಿತ್ವದಿಂದ ಜೆಂಟಲ್ ಮನ್ ಆಗಬೇಕೆಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ಕೃಷ್ಣ ಸಂಪಗಾಂವಕರ ಮನಮುಟ್ಟುವ ಹಾಗೆ ವಿವರಿಸಿದರು.

    ಸ್ವಸ್ತಿಕ ಪದ್ಮ ಸಣ್ಣ ಹಳ್ಳಿಯಿಂದ ಬಂದ ಸಾಧಕ. ಅವನ ಹೆಸರು ಸಣ್ಣ ಗ್ರಹಕ್ಕೂ ಇರಿಸಿದ್ದಾರೆ. ಆತ ತ್ಯಾಜ್ಯದ ಬಗ್ಗೆ ಸಾಕಷ್ಟು ಚಿಂತಿತನಾಗಿ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಬಗ್ಗೆ, ಮರುಬಳಕೆ ಮಾಡುವ ಬಗ್ಗೆ ಪ್ರಯತ್ನಶೀಲನಾದ. ಮನೆಯಲ್ಲಿ ಏನೇನೋ ಪ್ರಯೋಗ ಮಾಡಲು ಮುಂದಾದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಆಗ ಕಾಯ್ದ ದ್ರವದ ಮೇಲೆ ಉಸುಕು ಹಾಕಿ ಆರಿಸಲು ಯತ್ನಿಸಿದ. ಬಳಿಕ ನೋಡಲಾಗಿ ಅದೊಂದು ಗಟ್ಟಿ ವಸ್ತುವಾಗಿತ್ತು. ಅದನ್ನು ಒಡೆಯಲು ನೋಡಿದ ಒಡೆಯಲಿಲ್ಲ. ಕೊನೆಗೆ ಅದನ್ನೊಂದು ಇಟ್ಟಂಗಿ ಮಾಡಿ ಬಳಕೆಗೆ ಯೋಗ್ಯವಾಗಿಸಿದ. ಇಂಥದ್ದೇ ಅನೇಕ ಪ್ರಯೋಗ ಮಾಡಿದ ಈತ ಕೊನೆಗೆ ವಿಶ್ವ ಮಟ್ಟದ ಶ್ರೇಷ್ಠ ವಿಜ್ಞಾನಿಯಾದ‌. ಅಂಥ ವಿಜ್ಞಾನಿ ನಾವಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

    ಇಸ್ರೋ ಅಧ್ಯಕ್ಷ ಯು.ಆರ್. ರಾವ ಅವರಿಗೆ ಒಬ್ಬ ಶೆಣೈ ಮಾಸ್ತರಿದ್ದರು. ಅವರು ಅಸ್ಟ್ರಾಲಜಿ ಬಗ್ಗೆ ಹೇಳುತ್ತಿದ್ದರು. ಆ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡ ಪರಿಣಾಮವೇ ವಿಜ್ಞಾನಿಯಾಗಲು ಸಹಾಯವಾಯಿತು ಎನ್ನುತ್ತಿದ್ದರು. ಹಾಗೆಯೇ ಶಿಕ್ಷಣ ಮೇಳ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.

    ಭಾರತದ ಭವಿಷ್ಯ ಯುವ ಜನರ ಏಳಿಗೆಯಲ್ಲಡಗಿದೆ - ಕನ್ನೂರಿನ ಕೃಷ್ಣ ಸಂಪಗಾಂವಕರ ಹೇಳಿಕೆ

    ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ ಮಾತನಾಡಿ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾನ್ವಿತರು. ಆದರೆ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಿಂದುಳಿಯುತ್ತಿದ್ದಾರೆ. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳುತ್ತಿರುವ ಎಜುಕೇಶನ್ ಎಕ್ಸಪೋ ಸಫಲವಾಗಿದೆ ಎಂದರು.

    ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಈ ಭಾಗದಲ್ಲಿ ಎಕ್ಸಲೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜು ಆರಂಭವಾದ ಎರಡನೇ ವರ್ಷದಲ್ಲಿ ಯೇ ರಾಜ್ಯಕ್ಕೆ ರ್ಯಾಂಕ್ ಕೊಟ್ಟ ಸಂಸ್ಥೆ ಎಕ್ಸಲೆಂಟ್. ಸೈನಿಕ ಶಾಲೆ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಬರುವ ದಿನಗಳಲ್ಲಿ ಇನ್ನಷ್ಟು ಯಶಸ್ವಿಗಾಗಿ ಮುಂದುವರಿಯಲಿದೆ ಎಂದರು.

    ಅಗಸ್ತ್ಯ ಫೌಂಡೇಶನ್ ಮುಖ್ಯಸ್ಥೆ ಗೀತಾ ಪಾಟೀಲ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ವಿಜ್ಞಾನದ ಅರಿವು ಹೊಂದಬೇಕು. ವಿಜ್ಞಾನದರಿವು ಎಲ್ಲ ಮಕ್ಕಳಲ್ಲೂ ಇರುತ್ತದೆ. ಅದನ್ನು ಗುರುತಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಯೋಚಿಸಿ ಪ್ರಯತ್ನ ಶೀಲರಾಗಬೇಕು. ಅಂದಾಗ ಪ್ರತಿಯೊಬ್ಬ ಮಗು ವಿಜ್ಞಾನಿ ಎನ್ನಿಸಿಕೊಳ್ಳಲು ಸಾಧ್ಯ ಎಂದರು.

    ರಾಜಕೀಯ ಧುರೀಣೆ ಕಾಂತಾ ನಾಯಕ ಮಾತನಾಡಿ, ಪರೀಕ್ಷೆ ಗಾಗಿ ಓದದೇ ಜ್ಞಾನಕ್ಕಾಗಿ ಓದಬೇಕು. ಜನ್ಮದಿಂದಲೇ‌ ಎಲ್ಲರೂ ಶ್ರೆಷ್ಠರು. ಸಂಸ್ಕಾರ, ಜ್ಞಾನ ಬೆಳೆಸಿಕೊಂಡಾಗ ಶ್ರೇಷ್ಠರೆನ್ನಿಸಿಕೊಳ್ಳಲು ಸಾಧ್ಯ. ಆ ಶ್ರೇಷ್ಠತೆ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಪ್ರಯತ್ನಶೀಲರಾಗಬೇಕೆಂದು ಸಾಧಕರ ಜೀವನ ಸಂದೇಶ ಹಾಗೂ ಪ್ರೇರಣಾದಾಯಕ ಕಥೆಗಳ ಮೂಲಕ ವಿವರಿಸಿದರು.

    ವಿಜಯವಾಣಿ ಸ್ಥಾನಿಕ ಸಂಪಾದಕರಾದ ಕೆ‌.ಎನ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಣ ಮೇಳದ ರೂಪುರೇಷೆ ಕುರಿತು ವಿವರಿಸಿದರು. ಇಸ್ರೋ ವಿಜ್ಞಾನಿ ವಿಲಾಸ ರಾಠೋಡ, ಶಿವಾನಂದ ಕೆಲೂರ ಮತ್ತಿತರರಿದ್ದರು.

    ಹಿಂದುಸ್ಥಾನಿ ಗಾಯಕಿ ಭಾರತಿ ಕುಂದಣಗಾರ ಹಾಗೂ ರಮೇಶ ರತ್ನಾಕರ ತಂಡದಿಂದ ಪ್ರಾರ್ಥನೆ ನೆರವೇರಿತು. ಶಿಕ್ಷಕರಾದ ಸುರೇಶ ಜತ್ತಿ ಹಾಗೂ ಸಂತೋಷಕುಮಾರ ನಿಗಡಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts