More

    50 ಕೋಟಿ ಡೋಸ್ ಲಸಿಕೆ ಭಾರತದ ಸಾಧನೆ: ಜೆ.ಪಿ. ನಡ್ಡಾ ಅಂಕಣ

    50 ಕೋಟಿ ಡೋಸ್ ಲಸಿಕೆ ಭಾರತದ ಸಾಧನೆ: ಜೆ.ಪಿ. ನಡ್ಡಾ ಅಂಕಣ

    ಕರೊನಾ ಸಾಂಕ್ರಾಮಿಕತೆ ವಿರುದ್ಧದ ಸಮರದಲ್ಲಿ ಭಾರತ ಇದೇ ಆಗಸ್ಟ್ 7ರಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಕೋವಿಡ್-ತಡೆ ಲಸಿಕೆ ನೀಡಿಕೆ ಪ್ರಮಾಣ 50 ಕೋಟಿ ಡೋಸ್ ದಾಟಿದ್ದೇ ಆ ದಿನದ ಐತಿಹಾಸಿಕ ಸಾಧನೆಯಾಗಿದೆ. ಆ ಮೂಲಕ ಮಾರಕ ವೈರಸ್ ಸೋಲಿಸುವ ನಿಟ್ಟಿನಲ್ಲಿ ದೊಡ್ಡ ಮುನ್ನಡೆ ಸಾಧಿಸಿದಂತಾಗಿದೆ. ಹಲವು ಅಡೆತಡೆಗಳು ಹಾಗೂ ನಕಾರಾತ್ಮಕ ಪ್ರಚಾರದ ನಡುವೆಯೂ ಜಗತ್ತಿನ ಅತಿ ದೊಡ್ಡ ಹಾಗೂ ವೇಗದ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಭಾರತಕ್ಕೆ ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರೊನಾ ವಾರಿಯರ್​ಗಳು, ವೈದ್ಯರು, ವಿಜ್ಞಾನಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಈ ಎಲ್ಲರ ಸಮರ್ಪಣೆ, ತಾಳ್ಮೆ ಹಾಗೂ ಕೆಚ್ಚು ಈ ಸಾಧನೆಗೆ ಮೂಲ ಕಾರಣ. ಕರೊನಾ ಸಾಂಕ್ರಾಮಿಕತೆಯನ್ನು ಧೈರ್ಯದಿಂದ ಎದುರಿಸಿದ ರೀತಿಗೆ ಜಗತ್ತೇ ಬೆರಗಾಗಿದೆ. ವಿಶ್ವದ ಆರನೇ ಒಂದರಷ್ಟು ಜನರಿಗೆ ಲಸಿಕೆ ಹಾಕುವ ಸವಾಲನ್ನು ಭಾರತ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಜಗತ್ತು ಕಾತುರದಿಂದ ಎದುರು ನೋಡುತ್ತಿದೆ. ಇಡೀ ಜಗತ್ತು ಗಾಬರಿಯಿಂದ ದಿಕ್ಕು ತೋಚದೆ ತೊಳಲಾಡುತ್ತಿದ್ದಾಗ, ಮೋದಿಯವರ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ದೇಶೀಯ ಲಸಿಕೆ ಅಭಿವೃದ್ಧಿಪಡಿಸಲು ಭಾರತ ಶ್ರಮಿಸಿತು. ಕೋವಿಡ್ ಹರಡಿದ ದಾಖಲೆಯ ಒಂಬತ್ತೇ ತಿಂಗಳಲ್ಲಿ ಭಾರತ ಒಂದಲ್ಲ ಎರಡು ‘ಮೇಡ್ ಇನ್ ಇಂಡಿಯಾ’ ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಯಶಸ್ವಿ ಯಾಗಿದ್ದನ್ನು ಜಗತ್ತು ಬೆರಗುಗಣ್ಣುಗಳಿಂದ ನೋಡಿತು. ನಿಜಕ್ಕೂ ಇದೊಂದು ಅಪರೂಪದ ಸಾಧನೆಯಾಗಿದ್ದು ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳಿಗೇ ಆ ಶ್ರೇಯಸ್ಸು ಸಲ್ಲಬೇಕು.

    ಪ್ರಧಾನಿ ಅಚಲ ನಿರ್ಧಾರ: ಕೆಲವು ಪ್ರತಿಪಕ್ಷಗಳ ನಕಾರಾತ್ಮಕ ಪ್ರಚಾರ ಹಾಗೂ ಕೆಸರೆರಚಾಟದಿಂದ ಸ್ವಲ್ಪವೂ ವಿಚಲಿತರಾಗದ ಪ್ರಧಾನಿ ಮೋದಿ, 135 ಕೋಟಿ ಜನರಿಗೆ ಲಸಿಕೆ ನೀಡುವ ಯೋಜನೆಯನ್ನು ಶ್ರದ್ಧೆಯಿಂದ ರೂಪಿಸಿದರು. ಕರೊನಾ ವೈರಸ್ ವಿರುದ್ಧದ ಮಹಾ ಸಂಗ್ರಾಮದಲ್ಲಿ ಅವರು ಭಾರತವನ್ನು ಮುನ್ನಡೆಸಿದ ರೀತಿ ಅನುಕರಣೀಯವಾಗಿದೆ. 2021 ಜನವರಿ 16ರಂದು ಪ್ರಧಾನಿ ಮೋದಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅದೊಂದು ಕಠಿಣ ಆರಂಭವಾಗಿತ್ತು. ಮೊದಲ 10 ಕೋಟಿ ಡೋಸ್ ಲಸಿಕೆ ನೀಡಲು 85 ದಿನ ತಗಲಿತು. ಲಸಿಕೆ ನೀಡಿಕೆಯ ಇಡೀ ಜವಾಬ್ದಾರಿಯನ್ನು ಜೂನ್ 21ರಂದು ಕೇಂದ್ರ ಸರ್ಕಾರವೇ ವಹಿಸಿಕೊಂಡಿತು. ದೇಶದಾದ್ಯಂತ ಉಚಿತವಾಗಿ ಲಸಿಕೆ ಹಾಕುವುದಾಗಿಯೂ ಸರ್ಕಾರ ಘೋಷಿಸಿದ್ದು, ಅದು ಕೂಡ ಒಂದು ದಾಖಲೆಯೇ ಆಗಿದೆ. ಆರಂಭದಿಂದಲೂ ಪ್ರಧಾನಿ ಮೋದಿ ಲಸಿಕೆ ಅಭಿಯಾನದ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ಅದರ ಪರಿಣಾಮವಾಗಿ ಅಭಿಯಾನದಲ್ಲಿ ದೊಡ್ಡ ನೆಗೆತವಾಗಿದೆ. 40 ಕೋಟಿ ಡೋಸ್​ನಿಂದ 50 ಕೋಟಿ ಡೋಸ್ ಲಸಿಕೆ ನೀಡಲು ತಗಲಿದ್ದು ಕೇವಲ 20 ದಿನಗಳು ಎನ್ನುವುದು ಈ ಪ್ರಗತಿಗೆ ಹಿಡಿದ ಕನ್ನಡಿಯಾಗಿದೆ. 50 ಕೋಟಿ ಡೋಸ್ ಒಂದು ಮೈಲಿಗಲ್ಲಾದರೂ ಈ ವರ್ಷಾಂತ್ಯದೊಳಗೆ ಎಲ್ಲ ಅರ್ಹರಿಗೆ ಕೋವಿಡ್-ತಡೆ ಚುಚ್ಚುಮದ್ದು ಹಾಕುವ ಗುರಿಯನ್ನು ಪೂರ್ಣಗೊಳಿಸ ಬೇಕಾಗಿದೆ. ಉತ್ಪಾದನೆ ಹೆಚ್ಚಳವಾಗಿರುವುದರಿಂದ ದೇಶದಲ್ಲಿ ವರ್ಷಾಂತ್ಯಕ್ಕೆ 136 ಕೋಟಿ ಡೋಸ್ ವ್ಯಾಕ್ಸಿನ್ ಲಭ್ಯವಾಗಲಿದೆ.

    ಲಸಿಕೆ ಉತ್ಪಾದನೆ ಹೆಚ್ಚಳದ ನಿಟ್ಟಿನಲ್ಲಿ, ಲೈಸೆನ್ಸ್ ಕಡ್ಡಾಯದ ನಿಯಮವನ್ನು ಸರಳೀಕರಿಸಿದ್ದರಿಂದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಲಭ್ಯತೆ ಹೆಚ್ಚಿದೆ. ಅಷ್ಟು ಮಾತ್ರವಲ್ಲ, ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ದೇಶದಲ್ಲಿ ತಯಾರಿಸಲೂ ಅನುಮತಿ ನೀಡಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆ ಬಳಕೆಗೂ ಅನುಮತಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಕ್ಸಿನ್ ಭಾರತದ ಬತ್ತಳಿಕೆ ಸೇರಲಿವೆ.

    ಪಯಣದ ಪಕ್ಷಿನೋಟ: 2020 ಏಪ್ರಿಲ್ 14ರಂದು ಪ್ರಧಾನಿ ಮೋದಿ, ‘ಲಸಿಕೆ ಕಾರ್ಯಪಡೆ’ (ವ್ಯಾಕ್ಸಿನ್ ಟಾಸ್ಕ್ ಫೋರ್ಸ್) ರಚಿಸಿದರು. ಲಸಿಕೆ ಅಭಿವೃದ್ಧಿಯ ಹಾದಿಯಲ್ಲಿರುವ ಎಲ್ಲ ಅಡೆತಡೆಗಳನ್ನು ಅದು ಕೇವಲ 15 ದಿನಗಳಲ್ಲಿ ನಿವಾರಿಸಿತು. ಆ ಮೂಲಕ ವ್ಯಾಕ್ಸಿನ್ ತಯಾರಿಸುವ ದೇಶಗಳ ಹೊಸ ಗುಂಪಿಗೆ ಭಾರತ ಸೇರಲು ಹಾದಿ ಸುಗಮಗೊಳಿಸಿತು. ಲಸಿಕೆ ಅಭಿವೃದ್ಧಿಪಡಿಸುವ ಕೇಂದ್ರಗಳಿಗೆ ಸ್ವತಃ ಮೋದಿ ಭೇಟಿ ನೀಡಿ ವೈದ್ಯರು ಹಾಗೂ ವಿಜ್ಞಾನಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಿದರು. ಇಡೀ ಲಸಿಕೆ ಅಭಿಯಾನದ ಹಳಿ ತಪ್ಪಿಸಲು ಕೆಲವು ವಿರೋಧಪಕ್ಷಗಳು ನಡೆಸಿದ ಋಣಾತ್ಮಕ ಕೆಲಸದ ನಡುವೆಯೂ ಇದೊಂದು ಅದ್ಭುತ ಪಯಣವಾಗಿದೆ. ಕರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತವನ್ನು ಮೋದಿ ಮುನ್ನಡೆಸುತ್ತಿರುವಾಗ ಪ್ರತಿಪಕ್ಷಗಳು ಲಸಿಕೆ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದವು. ಒಂದು ಪ್ರತಿಪಕ್ಷವಂತೂ ‘ಮೇಡ್ ಇನ್ ಇಂಡಿಯಾ’ ಲಸಿಕೆಯನ್ನು ‘ಬಿಜೆಪಿ ಲಸಿಕೆ’ ಎಂದು ಮೂದಲಿಸಿತು. ಪ್ರತಿಪಕ್ಷಗಳು ಭಾರತ ಮತ್ತದರ ವಿಜ್ಞಾನಿಗಳಿಗೆ ಮಸಿ ಬಳಿಯುವ ಮಟ್ಟಕ್ಕೂ ಇಳಿದಿದ್ದವು.

    ಕಾಂಗ್ರೆಸ್ ಪಕ್ಷ ಮುಖ್ಯ ಪಿತೂರಿಗಾರನಾಗಿತ್ತು. ಅದರ ನಾಯಕರು ಹಾಗೂ ಮುಖ್ಯಮಂತ್ರಿಗಳು ಲಸಿಕೆಯ ಪರಿಣಾಮವನ್ನು ಪ್ರಶ್ನಿಸಿದರು. ಅಡ್ಡ-ಪರಿಣಾಮದ ಬಗ್ಗೆ ಅಪಪ್ರಚಾರ ನಡೆಸಿದರು. ಭಾರತದ ಪ್ರಜೆಗಳನ್ನು ‘ಪ್ರಯೋಗ ಪಶುಗಳು’ ಎಂದು ಕರೆದರು. ಲಸಿಕೆ ಅಭಿಯಾನಕ್ಕೆ ಕೆಲವು ಕಾಂಗ್ರೆಸ್ ರಾಜ್ಯಗಳು ಅಡ್ಡಿಪಡಿಸಿದ್ದರಿಂದ ಲಸಿಕೆ ನೀಡಿಕೆ ಪ್ರಕ್ರಿಯೆ ನಿಧಾನಗೊಂಡಿತು. ಲಸಿಕೆ ಕೊರತೆ ಬಗ್ಗೆಯೂ ತಪ್ಪು ಮಾಹಿತಿ ರವಾನಿಸಲು ಕಾಂಗ್ರೆಸ್ ಪ್ರಯತ್ನಿಸಿತು.

    ಕಾಂಗ್ರೆಸ್ ಆಡಳಿತದ ಕೆಲವು ರಾಜ್ಯಗಳು ಮತ್ತು ಆಮ್ ಆದ್ಮಿ ಪಕ್ಷ ಲಸಿಕೆ ಪಡೆಯುವಿಕೆ ಹಾಗೂ ವಿತರಣೆ ವಿಚಾರದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿರುವಾಗಲೇ ಪ್ರಧಾನಿಯವರು ಲಸಿಕೆಯ ಇಡೀ ಹೊಣೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅದಕ್ಕೆ ತಕ್ಕ ಉತ್ತರ ನೀಡಿದರು. ಜನರಿಗೂ ಪ್ರತಿಪಕ್ಷಗಳ ಹುನ್ನಾರ ಗೊತ್ತಾಗಿತ್ತು. ಅವರು ನೀಡಿದ ಬೆಂಬಲದ ಪರಿಣಾಮವಾಗಿ ಲಸಿಕೆ ಅಭಿಯಾನ ವೇಗ ಪಡೆದುಕೊಂಡಿದೆ.

    ಮಾರಕ ವೈರಸ್ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಸದಾ ಪ್ರಧಾನಿ ಮೋದಿಯವರಿಗೆ ದೃಢ ಬೆಂಬಲ ನೀಡಿದೆ. ಜಗತ್ತು ಇನ್ನೂ ವೈರಸ್ ವಿರುದ್ಧ ಸೆಣಸುತ್ತಿರುವಾಗ, ಬಿಜೆಪಿ ‘ರಾಷ್ಟ್ರೀಯ ಸ್ವಾಸ್ಥ್ಯ ಸ್ವಯಂಸೇವಕ ಅಭಿಯಾನ’ ಆರಂಭಿಸಿ ತರಬೇತಾದ ಆರೋಗ್ಯ ಸ್ವಯಂಸೇವಕರನ್ನು ಸಿದ್ಧಗೊಳಿಸಲು ಸಜ್ಜಾಗಿದೆ. ಇದುವರೆಗೆ 1.5 ಲಕ್ಷ ಇಂಥ ಸ್ವಯಂಸೇವಕರನ್ನು ತರಬೇತುಗೊಳಿಸಲಾಗಿದೆ. ಆರೋಗ್ಯ ಸಿಬ್ಬಂದಿಗೆ ಅವರು ನೆರವಾಗಲಿದ್ದಾರೆ. ಎಂಥದ್ದೇ ಪ್ರತಿಕೂಲ ಸನ್ನಿವೇಶದಲ್ಲೂ ನಾವು ವಿಫಲವಾಗುವುದಿಲ್ಲ ಎನ್ನುವುದನ್ನು ಭಾರತ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದೆ.

    ಹಿಂದೆ ಲಸಿಕೆಗಳು ಭಾರತಕ್ಕೆ ತಲುಪಲು ಎಷ್ಟು ವರ್ಷಗಳು ಬೇಕಾಗುತ್ತಿದ್ದವು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಕಾಂಗ್ರೆಸ್ ಆಡಳಿತದಲ್ಲಿ, ಜಪಾನ್​ನ ಎನ್​ಸಿಫಾಲಿಟಿಸ್ ಲಸಿಕೆ ಭಾರತಕ್ಕೆ ಬರಲು 83 ವರ್ಷ ತಗಲಿತ್ತು. ಎಲ್ಲಕ್ಕಿಂತ ಮಹತ್ವದ ಪೋಲಿಯೋ ಲಸಿಕೆ ಬರಲು 23 ವರ್ಷ ಬೇಕಾಯಿತು. ಟೆಟಾನಸ್ ವ್ಯಾಕ್ಸಿನ್ ಅಭಿವೃದ್ಧಿಯಾದ 54 ವರ್ಷಗಳ ನಂತರ ಭಾರತಕ್ಕೆ ಬಂದಿತ್ತು.

    ಸ್ವಾವಲಂಬನೆ: ಲಸಿಕೆ ಸರಬರಾಜಿಗಾಗಿ ಇದುವರೆಗೆ ವಿದೇಶಗಳನ್ನು ಅವಲಂಬಿಸಿದ್ದ ಒಂದು ದೇಶ, ಈಗ ಎರಡು ಜಾಗತಿಕ ಮಟ್ಟದ ಲಸಿಕೆ ರೂಪಿಸಲು ಹಾಗೂ ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನವನ್ನು ಆರಂಭಿಸಲು ಸಾಧ್ಯ ಎನ್ನುವುದನ್ನು ಸಾಬೀತು ಪಡಿಸಿದೆ. ಅನೇಕ ದೇಶಗಳಿಗೆ ಲಸಿಕೆ ಸರಬರಾಜು ಮಾಡಿ ನೆರವನ್ನೂ ನೀಡಿದೆ. ಜಗತ್ತು ಭಾರತದತ್ತ ನೋಡುವ ದೃಷ್ಟಿಯೇ ಬದಲಾಗಿದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯೇ ಸಾಂಕ್ರಾಮಿಕತೆ ಕಾಲದಲ್ಲಿ ನಮ್ಮ ದೇಶದ ಜನರ ರಕ್ಷಾಕವಚವಾಗಿ ಪರಿಣಮಿಸಿದೆ. ಅವರ ನಾಯಕತ್ವದಲ್ಲಿ ನಾವು ಬಳಲುವುದೂ ಇಲ್ಲ, ವಿರಮಿಸುವುದೂ ಇಲ್ಲ. ಅದಕ್ಕೆ ಬದಲು, ಈ ವರ್ಷಾಂತ್ಯದೊಳಗೆ ಭಾರತವನ್ನು ಶೇಕಡ ನೂರರಷ್ಟು ಲಸಿಕೆ ಪಡೆದ ದೇಶವನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ.

    (ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts