More

    14 ಬಾರಿ ಮುಖಾಮುಖಿ ಒಮ್ಮೆ ಮಾತ್ರ ಗೆಲುವು! ಸಾಂಪ್ರದಾಯಿಕ ಎದುರಾಳಿಗಳ ವಿಶ್ವಕಪ್​ ಹಾದಿ ಹೀಗಿದೆ….

    ನವದೆಹಲಿ: ವಿಶ್ವಕಪ್​ ಟೂರ್ನಿ ಆರಂಭವಾಗಿದ್ದು, ಇಡೀ ಜಗತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಉಭಯ ತಂಡಗಳು ಸಾಂಪ್ರದಾಯಿಕ ಎದುರಾಳಿಗಳು ಎಂದೇ ಗುರುತಿಸಿಕೊಂಡಿದ್ದು, ಅ. 14ರಂದು ನಡೆಯಲಿರುವ ಹೈವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಲು ಕ್ರೀಡಾಭಿಮಾನಿಗಳು ದಿನಗಣನೆ ಮಾಡುತ್ತಿದ್ದಾರೆ.

    ಅ. 14ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ ಸೋಲ್ಡೌಟ್​ ಆಗಿದೆ. ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್​ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್​ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ.

    ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಪರಸ್ಪರ ಸೆಣಸಾಡಲು ಸಜ್ಜಾಗಿರುವುದರಿಂದ, ಹಿಂದಿನ ವರ್ಷಗಳಲ್ಲಿ ಉಭಯ ತಂಡಗಳ ಆಟದ ವೈಖರಿಯ ಒಂದು ಝಲಕ್​ ಅನ್ನು ನಾವೀಗ ನೋಡೋಣ.

    1992ರ ವಿಶ್ವಕಪ್​
    1992ರಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡ ವಿಶ್ವಕಪ್​ನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ 7 ವಿಕೆಟ್ ಕಳೆದುಕೊಂಡು 216 ರನ್​ ಮಾತ್ರ ಗಳಿಸಿತು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಅಜೇಯ 54 ರನ್​ ಬಾರಿಸುವುದರೊಂದಿಗೆ ಈ ಪಂದ್ಯದಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡರು. ಸ್ಟಾರ್​ ಬೌಲರ್​ಗಳಾಗಿದ್ದ ಕಪಿಲ್​ ದೇವ್​, ಮನೋಜ್​ ಪ್ರಭಾಕರ್​ ಮತ್ತು ಕನ್ನಡಿಗ ಜಾವಗಲ್​ ಶ್ರೀನಾಥ್​ ಅವರು ತಲಾ ಎರಡೆರಡು ವಿಕೆಟ್​ ಉರುಳಿಸುವ ಮೂಲಕ 173 ರನ್​ಗೆ ಪಾಕ್​ ತಂಡವನ್ನು ಆಲೌಟ್​ ಮಾಡಿದರು.

    1996ರ ವಿಶ್ವಕಪ್​
    1996ರ ವಿಶ್ವಕಪ್​ ಅನ್ನು ಭಾರತ, ಶ್ರೀಲಂಕಾ ಮತ್ತು ಪಾಕ್​ನಲ್ಲಿ ಆಯೋಜಿಸಲಾಯಿತು. ಈ ವೇಳೆ ಬೆಂಗಳೂರಿನಲ್ಲಿ ಭಾರತ ಮತ್ತು ಪಾಕ್​ ನಡುವೆ ನಡೆದ ಪಂದ್ಯದಲ್ಲಿ ಸಿಕ್ಸರ್​ ಸಿಧು ಅಂದರೆ ನವಜೋತ್​ ಸಿಂಗ್​ ಸಿಧು ಅವರು 93 ರನ್​ ಬಾರಿಸುವ ಮೂಲಕ ಭಾರತ 287 ರನ್​ ಗಳಿಸಲು ನೆರವಾದರು. ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಕನ್ನಡಿಗರಾದ ಅನಿಲ್​ ಕುಂಬ್ಳೆ ಮತ್ತು ವೆಂಕಟೇಶ್​ ಪ್ರಸಾದ್​ ಬೌಲಿಂಗ್​ ದಾಳಿಗೆ ತತ್ತರಿಸಿದರು. ಇಬ್ಬರು ತಲಾ ಮೂರು ವಿಕೆಟ್​ ಕಬಳಿಸಿದರು ಮತ್ತು ಭಾರತ 39 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    1999ರ ವಿಶ್ವಕಪ್​
    ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರನೇ ವಿಶ್ವಕಪ್ ಪಂದ್ಯವು 1999ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಿತು. ವೆಂಕಟೇಶ್ ಪ್ರಸಾದ್ ಅವರ ಐದು ವಿಕೆಟ್ ಗಳಿಕೆಯು ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ 47 ರನ್‌ಗಳ ಜಯ ಸಾಧಿಸಲು ಸಹಾಯ ಮಾಡಿತು.

    2003ರ ವಿಶ್ವಕಪ್​
    2003 ವಿಶ್ವಕಪ್​ನಲ್ಲಿ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮತ್ತೊಮ್ಮೆ ಗಮನಾರ್ಹವಾದ ಆಟ ಪ್ರದರ್ಶನದೊಂದಿಗೆ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯವು ಸಚಿನ್ ತೆಂಡೂಲ್ಕರ್ ಮತ್ತು ಶೋಯೆಬ್ ಅಖ್ತರ್ ನಡುವಿನ ಯುದ್ಧವೆಂದೇ ಪರಿಗಣಿಸಲಾಗಿತ್ತು. ಅಂತಿಮವಾಗಿ ಸಚಿನ್ 98 ರನ್ ಗಳಿಸಿ ಭಾರತ ಆರು ವಿಕೆಟ್‌ಗಳ ಜಯ ಸಾಧಿಸಲು ನೆರವಾದರು.

    2007 ಟಿ20 ವಿಶ್ವಕಪ್​ (ಲೀಗ್​ ಪಂದ್ಯ)
    T20 ವಿಶ್ವಕಪ್‌ನ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನವು 2007 ರಲ್ಲಿ ಕಿಂಗ್ಸ್‌ಮೀಡ್‌ನ ಡರ್ಬನ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಯಿತು. ಪಾಕಿಸ್ತಾನವು ನಿಗದಿತ 20 ಓವರ್‌ಗಳಲ್ಲಿ ಭಾರತದ 141 ರನ್​ ತಲುಪಿ ಪಂದ್ಯ ಡ್ರಾ ಅಂತ್ಯಕ್ಕೆ ಬಂದಾಗ ಗೆಲುವನ್ನು ನಿರ್ಣಯಿಸಲು ಸೂಪರ್ ಓವರ್​ ಅನ್ನು ಪರಿಚಯಿಸಲಾಯಿತು. ಅಂತಿಮವಾಗಿ ಭಾರತ ತಂಡ ಸೂಪರ್ ಓವರ್‌ನಲ್ಲಿ ಮೇಲುಗೈ ಸಾಧಿಸುವ ಮೂಲಕ ವಿಜಯಶಾಲಿಯಾಯಿತು.

    2007ರ ಟಿ20 ವಿಶ್ವಕಪ್​ (ಫೈನಲ್​)
    ಸಾಂಪ್ರದಾಯಿಕ ಎದುರಾಳಿಗಳು 2007ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಮತ್ತೊಮ್ಮೆ ಮುಖಾಮುಖಿಯಾದವು. ಆದರೆ, ಪಾಕಿಸ್ತಾನ ಗ್ರೂಪ್​ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿಫಲವಾಯಿತು. ಗೌತಮ್​ ಗಂಭೀರ್​ ಅವರು ಅಮೋಘ 75 ರನ್​ಗಳ ಕಾಣಿಕೆಯೊಂದಿಗೆ ಭಾರತ ನಿಗದಿತ ಓವರ್​ಗಳಲ್ಲಿ 157 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕಿಸ್ತಾನದ ಪರ ಮಿಸ್ಬಾ ಉಲ್​ ಹಕ್​ ಕೇವಲ 38 ಎಸೆತಗಳಲ್ಲಿ 43 ರನ್​ ಬಾರಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರೂ ಕೊನೆಯ ಸ್ಮರಣೀಯ ಓವರ್​ನಲ್ಲಿ 5 ರನ್​ಗಳ ಅಂತರದಲ್ಲಿ ಟೀಮ್​ ಇಂಡಿಯಾ ಗೆಲವು ಸಾಧಿಸಿತು. ಈ ಗೆಲುವು ಭಾರತ ತಂಡಕ್ಕೆ ಟ್ರೋಫಿ ವಿಜೇತ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಅವರ ಯಶಸ್ವಿ ಜೀವನವನ್ನು ಪ್ರಾರಂಭವಾಯಿತು.

    2011ರ ವಿಶ್ವಕಪ್​
    2011ರ ವಿಶ್ವಕಪ್​ ಟೂರ್ನಿಯನ್ನು ಭಾರತವೇ ಆಯೋಜಿಸಿತು. ಮೊಹಲಿಯಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಿತು. ಇಲ್ಲೂ ವಿಜಯದ ಓಟ ಮುಂದುವರಿಸಿದ ಭಾರತ, ಪಾಕ್​ ವಿರುದ್ಧ 29 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಅಲ್ಲದೆ, ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿತು.

    2012ರ ಟಿ20 ವಿಶ್ವಕಪ್
    2012ರಲ್ಲಿ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿಗೆ ಮುಖಾಮುಖಿಯಾಗಿದ್ದವು. 128 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ವಿರಾಟ್ ಕೊಹ್ಲಿ ಅಜೇಯ 78 ರನ್ ಗಳಿಸಿ ಮಿಂಚಿದರು.​

    2014 ಟಿ20 ವಿಶ್ವಕಪ್​
    ಭಾರತವು 2014ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಸೋಲಿಸಿತು. ಒಟ್ಟು 131 ರನ್‌ಗಳನ್ನು ಬೆನ್ನಟ್ಟಿದ ಎಂಎಸ್ ಧೋನಿ ನೇತೃತ್ವದ ತಂಡವು ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟುವ ಮೂಲಕ ಗೆಲುವಿನ ಕೇಕೆ ಹಾಕಿತು.

    2015ರ ವಿಶ್ವಕಪ್​
    2015 ರ ವಿಶ್ವಕಪ್​ ಟೂರ್ನಿಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಜಂಟಿಯಾಗಿ ಆತಿಥ್ಯ ವಹಿಸಿತು. ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಯಿತು. ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಪಾಕ್​ ವಿರುದ್ಧ ಶತಕ ಸಿಡಿಸುವ ಮೂಲಕ ಭಾರತ 300 ರನ್‌ ಕಲೆ ಹಾಕಲು ನೆರವಾದರು. ಗುರಿ ಬೆನ್ನತ್ತಿದ ಪಾಕಿಸ್ತಾನ 47 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲೌಟ್​ ಆಗಿ ಭಾರತದ ಎದುರು 76 ರನ್‌ಗಳ ಅಂತರದಲ್ಲಿ ಶರಣಾಯಿತು.

    2016ರ ಟಿ20 ವಿಶ್ವಕಪ್​
    ಕೋಲ್ಕತ್ತದಲ್ಲಿ ನಿರಂತರ ಮಳೆಯಿಂದಾಗಿ ಭಾರತ-ಪಾಕಿಸ್ತಾನ ನಡುವಿನ 2016ರ ಟಿ20 ವಿಶ್ವಕಪ್ ಪಂದ್ಯದ ಮೇಲೆ ಅನಿಶ್ಚಿತತೆಯ ಕರಿನೆರಳು ಬೀರಿತ್ತು. ಮಳೆಯಿಂದಾಗಿ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ ಪ್ರತಿ ಇನಿಂಗ್ಸ್​ ಅನ್ನು 18 ಓವರ್‌ಗಳಿಗೆ ಪರಿಷ್ಕರಿಸಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 118 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ ವಿರಾಟ್ ಕೊಹ್ಲಿ ಅವರ ಅಜೇಯ 55 ರನ್‌ಗಳ ನೆರವಿನಿಂದ ಭಾರತ ಮತ್ತೊಮ್ಮೆ ಆರು ವಿಕೆಟ್‌ಗಳ ಜಯದೊಂದಿಗೆ ಮೇಲುಗೈ ಸಾಧಿಸಿತು.

    2019ರ ವಿಶ್ವಕಪ್​
    2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್​ನ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದವು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅವರ ಅದ್ಭುತ ಶತಕದ ನೆರವಿನಿಂದ 336 ರನ್‌ಗಳ ಬೃಹತ್ ಮೊತ್ತವನ್ನು ತಲುಪಿತು. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಡಕ್​ವರ್ತ್​ ಲೂಯಿಸ್​ ನಿಯಮದ ಅನ್ವಯ 40 ಓವರ್‌ಗಳಲ್ಲಿ 302 ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಫಖರ್ ಜಮಾನ್ ಪಾಕ್ ಪರ 62 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

    2021ರ ಟಿ20 ವಿಶ್ವಕಪ್​
    ಸತತ ಸೋಲಿನ ಕಹಿಯನ್ನೇ ಉಣ್ಣುತ್ತಿದ್ದ ಪಾಕಿಸ್ತಾನ 2021ರ ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಗೆಲುವಿನ ಸಿಹಿ ಅನುಭವಿಸಿತು. ದುಬೈನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕವನ್ನು ಗಳಿಸಿ, ತಂಡವು 151 ರನ್‌ಗಳ ಸವಾಲಿನ ಮೊತ್ತ ಗಳಿಸಲು ನೆರವಾದರು. ಆದಾಗ್ಯೂ, ಕೊಹ್ಲಿಯ ಬ್ಯಾಟಿಂಗ್‌ನ ಪ್ರದರ್ಶನವು ವ್ಯರ್ಥವಾಯಿತು. ಪಾಕಿಸ್ತಾನವು 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ಬಾಬರ್ ಅಜಮ್ (68) ಮತ್ತು ಮೊಹಮ್ಮದ್ ರಿಜ್ವಾನ್ (79) ರನ್​ಗಳ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ನಾಶಮಾಡುವ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ ಗೆಲುವು ಕಂಡರು.

    2022 ಟಿ20 ವಿಶ್ವಕಪ್​
    ಭಾರತ ಮತ್ತು ಪಾಕಿಸ್ತಾನ ನಡುವಿನ 2022ರ ಟಿ-20 ವಿಶ್ವಕಪ್ ಪಂದ್ಯವು ಬಹುಶಃ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಶಾನ್ ಮಸೂದ್ 52 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಪಾಕಿಸ್ತಾನದ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದರು. ಗುರಿ ಬೆನ್ನತ್ತಿದ ಭಾರತ, ವಿರಾಟ್ ಕೊಹ್ಲಿ ಅವರು ಅಜೇಯ 82 ರನ್‌ಗಳ ಅಬ್ಬರದ ಆಟದೊಂದಿಗೆ ಭಾರತಕ್ಕೆ ಅಂತಿಮ ಎಸೆತದಲ್ಲಿ ಜಯ ಲಭಿಸಿತು. ಪಂದ್ಯದ ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿದ್ದಾಗ, ಭಾರತ ನಾಲ್ಕು ವಿಕೆಟ್‌ಗಳ ರೋಚಕ ವಿಜಯವನ್ನು ಸಾಧಿಸಿತು.

    2023ರ ವಿಶ್ವಕಪ್​
    ಪ್ರಸಕ್ತ ಸಾಲಿನ ವಿಶ್ವಕಪ್​ ಅ.5ರಿಂದ ಆರಂಭವಾಗಿದೆ. ಈ ಬಾರಿ ಭಾರತ ಮತ್ತೊಮ್ಮೆ ಆತಿಥ್ಯ ವಹಿಸಿದೆ. ಭಾರತ ಮತ್ತು ಪಾಕ್​ ತಂಡ ಅ.14ರಂದು ಮತ್ತೊಮ್ಮೆ ವಿಶ್ವಕಪ್​ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್​ನಲ್ಲಿ ಭಾರತದ ವಿರುದ್ಧ ಪಾಕ್​ ಹೀನಾಯ ಸೋಲನ್ನು ಅನುಭಿಸಿತು. ಅಲ್ಲದೆ, ಭಾರತ ತಂಡದ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದು, ಈ ಬಾರಿಯು ಭಾರತಕ್ಕೆ ಗೆಲುವು ಲಭಿಸುವ ಭರವಸೆಯಿದೆ. ಅ. 14ಕ್ಕೆ ಮಧ್ಯಾಹ್ನ 2ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಜಗತ್ತು ಎದುರು ನೋಡುತ್ತಿದೆ. (ಏಜೆನ್ಸೀಸ್​)

    ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕ್​ಗೆ ಮೊದಲ ಗೆಲುವು: ಭವಿಷ್ಯ ನುಡಿದ ಮಾಜಿ​ ಕ್ರಿಕೆಟರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts