More

    ಇಂದು ಭಾರತ-ಕಿವೀಸ್ ಮೊದಲ ಟಿ20, ಇನ್ನು ದ್ರಾವಿಡ್-ರೋಹಿತ್ ಅಧ್ಯಾಯ ಶುರು

    ಜೈಪುರ: ಜಾನ್ ರೈಟ್-ಸೌರವ್ ಗಂಗೂಲಿ, ಗ್ಯಾರಿ ಕರ್ಸ್ಟನ್-ಎಂಎಸ್ ಧೋನಿ, ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಅವರ ಕೋಚ್-ಕ್ಯಾಪ್ಟನ್ ಕಾಂಬಿನೇಷನ್‌ನಲ್ಲಿ ಅಪಾರ ಯಶಸ್ಸು ಕಂಡಿರುವ ಭಾರತೀಯ ಕ್ರಿಕೆಟ್ ಇದೀಗ ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಜೋಡಿಯಿಂದ ಇನ್ನಷ್ಟು ಉತ್ತುಂಗದ ಸಾಧನೆಯನ್ನು ಕಾಣುವ ನಿರೀಕ್ಷೆಯಲ್ಲಿದೆ. ಅರಬ್ ನಾಡಿನ ಟಿ20 ವಿಶ್ವಕಪ್ ಕಹಿಯನ್ನು ಮರೆತು ‘ಹೊಸ ಆರಂಭ’ವನ್ನು ಕಾಣಲು ಟೀಮ್ ಇಂಡಿಯಾ ಸಜ್ಜಾಗಿದ್ದು, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಬುಧವಾರದಿಂದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಮೊದಲ ಕಾದಾಟ ನಡೆಯಲಿದೆ. ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡಕ್ಕೆ ಇದು ಮೊದಲ ಸವಾಲಾಗಿದ್ದು, ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿಯಾಗಿ ರೋಹಿತ್ ಶರ್ಮ ಕೂಡ ಶುಭಾರಂಭ ಕಾಣುವ ಹಂಬಲದಲ್ಲಿದ್ದಾರೆ.

    ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಈ ಸರಣಿಯೊಂದಿಗೆ ಸಿದ್ಧತೆ ಆರಂಭಗೊಳ್ಳಲಿದೆ. ದ್ರಾವಿಡ್-ರೋಹಿತ್ ಕಾಂಬಿನೇಷನ್‌ನಲ್ಲಿ ಬಲಿಷ್ಠ ತಂಡವನ್ನು ರೂಪಿಸಲು ಯೋಜನೆ ಸಿದ್ಧಗೊಂಡಿದೆ. ಏಕದಿನ ಕ್ರಿಕೆಟ್ ತಂಡದ ನಾಯಕತ್ವವೂ ಶೀಘ್ರದಲ್ಲೇ ರೋಹಿತ್‌ಗೆ ಒಲಿಯುವ ಸಾಧ್ಯತೆ ಇದ್ದು, 2023ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ವರೆಗೆ ದ್ರಾವಿಡ್-ರೋಹಿತ್ ಜೋಡಿಯ ಮೋಡಿಯನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತರದಲ್ಲಿದ್ದಾರೆ. ಈಗಾಗಲೆ 19 ವಯೋಮಿತಿ, ಭಾರತ ಎ ತಂಡಗಳ ಕೋಚ್ ಮತ್ತು ಎನ್‌ಸಿಎ ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ದ್ರಾವಿಡ್, ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಇನ್ನಷ್ಟು ಮಹತ್ತರ ಪಾತ್ರ ನಿರ್ವಹಿಸಲಿದ್ದಾರೆ. ಸರಣಿಯ 2ನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ಮತ್ತು 3ನೇ ಹಾಗೂ ಅಂತಿಮ ಪಂದ್ಯ ಭಾನುವಾರ ಕೋಲ್ಕತದಲ್ಲಿ ನಡೆಯಲಿದೆ.

    ಐಪಿಎಲ್ ತಾರೆಯರಿಗೆ ಅವಕಾಶ
    ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಅವರಂಥ ಅನುಭವಿಗಳ ಗೈರಿನಲ್ಲಿ ಯುವ ಆಟಗಾರರಿಗೆ ಉತ್ತಮ ಅವಕಾಶವೂ ಲಭಿಸಲಿದೆ. ಋತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್, ಆವೇಶ್ ಖಾನ್, ವೆಂಕಟೇಶ್ ಅಯ್ಯರ್‌ರಂಥ ಐಪಿಎಲ್ ತಾರೆಯರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಛಾಪು ಮೂಡಿಸುವ ನಿರೀಕ್ಷೆ ಇದೆ. ಟಿ20 ವಿಶ್ವಕಪ್‌ಗೆ ಕಡೆಗಣಿಸಲ್ಪಟ್ಟಿದ್ದ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್, ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ವೇಗಿ ಮೊಹಮದ್ ಸಿರಾಜ್ ಮರಳಿ ಕಣಕ್ಕಿಳಿಯಲಿದ್ದು, 2022ರ ವಿಶ್ವಕಪ್ ತಂಡದ ಭಾಗವಾಗಲು ಹೋರಾಡಲಿದ್ದಾರೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವಕಪ್‌ನಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, 2022ರ ಆವೃತ್ತಿವರೆಗೆ ಚುಟುಕು ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿರಲು ಪ್ರಯತ್ನಿಸಲಿದ್ದಾರೆ. ಅಕ್ಷರ್ ಪಟೇಲ್ ಅವರು ರವೀಂದ್ರ ಜಡೇಜಾ ಸ್ಥಾನವನ್ನು ತುಂಬಲಿದ್ದಾರೆ. ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂಥ ಯುವ ಆರಂಭಿಕರು ತಂಡದಲ್ಲಿರುವ ನಡುವೆಯೂ ನಾಯಕ ರೋಹಿತ್ ಶರ್ಮ ಮತ್ತು ಉಪನಾಯಕ ಕೆಎಲ್ ರಾಹುಲ್ ಜೋಡಿಯೇ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಸೂರ್ಯಕುಮಾರ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವಂಥ ನಿರ್ವಹಣೆ ತೋರಬೇಕಾಗಿದೆ.

    ವೆಂಕಟೇಶ್ ಅಯ್ಯರ್ ಕೇಂದ್ರಬಿಂದು
    ಯುಎಇಯಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಪಾತ್ರ ನಿರ್ವಹಿಸದ ಕಾರಣ ತಂಡದ ಸಮತೋಲನ ತಪ್ಪಿ ಟಿ20 ವಿಶ್ವಕಪ್ ನಾಕೌಟ್ ಹಂತಕ್ಕೇರಲು ವಿಲವಾಗಿದ್ದ ಭಾರತವೀಗ ಹೊಸ ವೇಗದ ಬೌಲಿಂಗ್ ಆಲ್ರೌಂಡರ್ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ, ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ಪರ ಸ್ಫೋಟಕ ಆರಂಭಿಕ ಮತ್ತು ಅರೆಕಾಲಿಕ ವೇಗಿಯಾಗಿ ಮಿಂಚಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಪರೀಕ್ಷೆಗೆ ಒಳಪಡಿಸಲಿದೆ. ಆದರೆ ವೆಂಕಟೇಶ್ ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಆಡುವ ಬದಲು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅವರು ಯಶಸ್ಸು ಕಂಡರೆ ತಂಡದ ಆಲ್ರೌಂಡರ್ ಕೊರತೆಯೂ ನೀಗಲಿದೆ.

    ಕೇನ್‌ಗೆ ವಿಶ್ರಾಂತಿ, ಸೌಥಿ ನಾಯಕ
    ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಎರಡು ದಿನಗಳ ಅಂತರದಲ್ಲೇ ದುಬೈನಿಂದ 2 ಸಾವಿರ ಕಿಲೋಮೀಟರ್ ದೂರದ ಜೈಪುರದಲ್ಲಿ ಪಂದ್ಯ ಆಡಬೇಕಾದ ಸವಾಲು ಹೊಂದಿರುವ ಕಿವೀಸ್ ತಂಡ ವೇಗಿ ಟಿಮ್ ಸೌಥಿ ಹಂಗಾಮಿ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಟೆಸ್ಟ್ ಸರಣಿಯತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿರುವ ಕಾರಣ ಟೆಸ್ಟ್ ಸರಣಿ ಹೆಚ್ಚು ಮಹತ್ವದ್ದಾಗಿದ್ದು, ಭಾರತದ ನೆಲದಲ್ಲೂ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕೆ ತಕ್ಕ ಆಟವಾಡಲು ಕಿವೀಸ್ ಉತ್ಸುಕವಾಗಿದೆ. ಈಗಾಗಲೆ ಜೈಪುರದಲ್ಲಿ ತರಬೇತಿ ಆರಂಭಿಸಿರುವ ಕಿವೀಸ್ ಟೆಸ್ಟ್ ತಂಡದ ಸದಸ್ಯರ ಜತೆಗೆ ವಿಲಿಯಮ್ಸನ್ ಅಭ್ಯಾಸ ನಡೆಸಲಿದ್ದಾರೆ. ಗಾಯದಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದ ವೇಗಿ ಲಾಕಿ ರ್ಗ್ಯುಸನ್ ಟಿ20 ಸರಣಿಗೆ ಫಿಟ್ ಆಗುವ ನಿರೀಕ್ಷೆ ಇದೆ. ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಟಿ20 ಸರಣಿಯಲ್ಲಿ ಆಡಿದರೂ ಬಳಿಕ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ.

    ಮುಖಾಮುಖಿ: 17
    ಭಾರತ: 8
    ನ್ಯೂಜಿಲೆಂಡ್: 9
    ಭಾರತದಲ್ಲಿ: 5
    ಭಾರತ: 2
    ನ್ಯೂಜಿಲೆಂಡ್: 3
    ಪಂದ್ಯ ಆರಂಭ: ರಾತ್ರಿ 7.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ತಂಡಗಳು:

    ಭಾರತ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್.

    ನ್ಯೂಜಿಲೆಂಡ್: ಟಿಮ್ ಸೌಥಿ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್‌ಮನ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗುಪ್ಟಿಲ್, ಕೈಲ್ ಜೇಮಿಸನ್, ಆಡಂ ಮಿಲ್ನೆ, ಡೆರಿಲ್ ಮಿಚೆಲ್, ಜೇಮ್ಸ್ ನೀಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಇಶ್ ಸೋಧಿ.

    19: ರೋಹಿತ್ ಶರ್ಮ ಈ ಹಿಂದೆ 19 ಟಿ20 ಪಂದ್ಯಗಳಲ್ಲಿ ಹಂಗಾಮಿ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಿದ್ದು, 15 ಜಯ, 4 ಸೋಲು ಕಂಡಿದ್ದಾರೆ.

    1: ಈ ಹಿಂದೆ 1 ಟೆಸ್ಟ್ ಮತ್ತು 19 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಇದು ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.

    *ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಸಮಾನ ಆದ್ಯತೆ ನೀಡುವೆ. ಈ ನಿಟ್ಟಿನಲ್ಲಿ ಕಾರ್ಯದೊತ್ತಡ ನಿಭಾಯಿಸುವುದು ಪ್ರಮುಖವಾಗಿರಲಿದೆ. ಫುಟ್‌ಬಾಲ್‌ನಲ್ಲಿ ನೋಡಿ, ತಂಡದ ಎಲ್ಲ ಪ್ರಮುಖ ಆಟಗಾರರು ಪ್ರತಿ ಪಂದ್ಯ ಆಡುವುದಿಲ್ಲ. ಹೀಗಾಗಿ ಆವರ್ತನ ಪದ್ಧತಿ ಅಳವಡಿಸಿಕೊಳ್ಳುವೆವು. ಆದರೆ ದೊಡ್ಡ ಟೂರ್ನಿಗಳಿಗೆ ಎಲ್ಲ ಆಟಗಾರರೂ ಫಿಟ್ ಆಗಿರುವಂತೆ ನೋಡಿಕೊಳ್ಳುವೆವು.
    | ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಕೋಚ್

    ಫೈನಲ್​ಗೆ ಮುನ್ನ ಬಲ ಪಕ್ಕದಲ್ಲಿ ನಿಂತ ನಾಯಕರಿಗೆ ಒಲಿಯುತ್ತೆ ಐಸಿಸಿ ಟ್ರೋಫಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts