More

    ಗ್ರಾಪಂ ಸದಸ್ಯರ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ

    ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ತಾಲೂಕು ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

    ಇದೇ ವೇಳೆ ಪ್ರತಿಭಟನಾಕಾರರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ ಮಾತನಾಡಿ, ತಾಲೂಕು ಪಂಚಾಯಿತಿ ಇಒ ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಜಿಲ್ಲಾ ಪಂಚಾಯಿತಿ ಸಿಇಒ ಅವರ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

    ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾತ್ಮಕ ಸಮಸ್ಯೆಗಳು ಇತ್ಯರ್ಥವಾಗಿಲ್ಲ. ಈ ಸಂಬಂಧ ತಾಲೂಕು ಪಂಚಾಯಿತಿ ಮುಂದೆ ಮೂರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಾಪಂ ಇಒ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೇರಳ ಮಾದರಿಯಂತೆ ಗ್ರಾಪಂ ಅಧ್ಯಕ್ಷರಿಗೆ 15,000 ರೂ., ಉಪಾಧ್ಯಕ್ಷರಿಗೆ 13,000 ರೂ., ಸದಸ್ಯರಿಗೆ 10,000 ರೂ. ಗೌರವ ಧನ ನೀಡಬೇಕು. ಜತೆಗೆ ಉಚಿತ ಬಸ್‌ಪಾಸ್, ಆರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.

    ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿನ ಲೋಪ ತನಿಖೆಯಾಗಬೇಕು. ಗ್ರಾಪಂಗಳಿಗೆ ಹಸ್ತಾಂತರಿಸುವ ಮುನ್ನ ಕಾಮಗಾರಿ ಗುಣಮಟ್ಟ ಮತ್ತು ನೈಜವಾಗಿ ಮುಕ್ತಾಯಗೊಂಡಿರುವ ಬಗ್ಗೆ ತಾಂತ್ರಿಕ ವರದಿ ಮತ್ತು ಕಾಮಗಾರಿ ತೃಪ್ತಿಕರ ಎಂಬ ದೃಢೀಕರಣ ನೀಡಬೇಕು ಎಂದು ಒತ್ತಾಯಿಸಿದರು.
    ಮದ್ದೂರು ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರಾಮಕೃಷ್ಣ ಅವರು ಸರ್ಕಾರದ ಆದೇಶದಂತೆ ಅಮಾನತ್ತಿನಲ್ಲಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

    ಮದ್ದೂರು ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ, ಪ್ರಧಾನ ಕಾರ್ಯದರ್ಶಿ ಎಂ.ಇ.ಕೃಷ್ಣ, ತಾಲೂಕು ಗೌರವಾಧ್ಯಕ್ಷ ಎಸ್.ದಯಾನಂದ, ಉಪಾಧ್ಯಕ್ಷರಾದ ಡಿ.ನಳಿನಿ, ಸಿ.ಶಿವಲಿಂಗಯ್ಯ, ಬ್ಯಾಡರಹಳ್ಳಿ ರಾಮಕೃಷ್ಣ, ಎಂ.ಮಹೇಶ್, ಎಸ್.ಬಿ.ತಮ್ಮೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ ಎನ್.ಗೌಡ, ಎ.ಜಗದೀಶ್, ಮಾದೇಶ್, ಎಂ.ಚಂದ್ರಶೇಖರ, ಶ್ವೇತಾ, ಖಜಾಂಚಿ ಎಚ್.ಕೆ.ನಂದೀಶ್‌ಗೌಡ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಬಿ.ಮಂಜುನಾಥ, ನಿರ್ದೇಶಕರಾದ ಎಚ್.ಎಲ್.ದಯಾನಂದ, ಮಹಾಲಕ್ಷ್ಮೀ, ಎಚ್.ಗೋವರ್ಧನ, ಎಸ್.ಕೃಷ್ಣ, ಕೃಷ್ಣ, ಕೆ.ಆರ್.ವೆಂಕಟೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts