ಸಾಗರ: ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದೆ. ತಾಲೂಕಿನ ಗಡಿ ಭಾಗವಾದ ಸಿದ್ದಾಪುರದಲ್ಲೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೋಮವಾರ ಹೊಸನಗರ ತಾಲೂಕಿನ ಮಾರುತಿಪುರ, ಸಂಪೇಕಟ್ಟೆ ಭಾಗ ಸೇರಿದಂತೆ 8 ಪ್ರಕರಣಗಳು ದಾಖಲಾಗಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಸೋಮವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಎಫ್‌ಡಿ ಕುರಿತಂತೆ ಕ್ಷೇತ್ರದ ಜನರು ಆತಂಕಪಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸಾಗರ, ಹೊಸನಗರ ಎರಡೂ ತಾಲೂಕುಗಳಲ್ಲಿ ಈ ಸಂಬಂಧ ಪ್ರತ್ಯೇಕ ಸಭೆಗಳನ್ನು ನಡೆಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ವಾತಾವರಣ ಇರುವುದರಿಂದ ಪ್ರಕರಣಗಳು ಹೆಚ್ಚಾಗುವ ಲಕ್ಷಣ ಗೋಚರಿಸುತ್ತಿವೆ. ಆದಕಾರಣ ಅನಗತ್ಯವಾಗಿ ಗ್ರಾಮೀಣ ಭಾಗದ ಜನರು ಕಾಡಿಗೆ ತೆರಳಬಾರದು. ಕಾಡಿಗೆ ಹೋಗುವಾಗ ಡಿಎಂಪಿ ಆಯಿಲ್ ಅನ್ನು ಹಚ್ಚಿಕೊಂಡು ಹೋಗತಕ್ಕದ್ದು. ಪ್ರವಾಸಿಗರಿಗೂ ಇದನ್ನು ಮನವರಿಕೆ ಮಾಡಿಕೊಡಲು ಅರಣ್ಯ ಇಲಾಖೆಯಿಂದ ನಾಮಫಲಕ ಹಾಕಲು ಸೂಚಿಸಿದ್ದೇನೆ ಎಂದರು.
ಕೂಡಲೇ ಜಿಲ್ಲಾಡಳಿತದೊಂದಿಗೆ ಮಾತನಾಡಿ ಜಿಲ್ಲೆಯ ಕೊಡಚಾದ್ರಿ ಮತ್ತು ಇತರ ಚಾರಣ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ಹೇರಲಾಗುವುದು. ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ದಿನಕ್ಕೆ 100ರಿಂದ 150 ರಕ್ತದ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಸಾಗರ ಆಸ್ಪತ್ರೆಗೆ ಸಿದ್ದಾಪುರ ಒಳಗೊಂಡಂತೆ ಇತರ ಕಡೆಗಳಿಂದ ಕೆಎಫ್‌ಡಿ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಈ ರೋಗಿಗಳಿಗೆ ಪ್ರತ್ಯೇಕವಾದ ವ್ಯವಸ್ಥಿತ ಕೊಠಡಿ ಮತ್ತು ಶಶ್ರೂಷೆಗೆ ಎಲ್ಲ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಅಪಘಾತದಿಂದ ಸಮಸ್ಯೆಗೆ ಒಳಗಾಗಿರುವ ರೋಗಿಗಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ವೈಯಕ್ತಿಕವಾಗಿಯೂ ಆರ್ಥಿಕ ಸಹಕಾರ ಮಾಡಿದರು. ಸಾಗರ ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪರಪ್ಪ, ಅಶೋಕ್ ಬೇಳೂರು, ಗಣಪತಿ ಮಂಡಗಳಲೆ, ಜಯರಾಮ್ ಇತರರಿದ್ದರು.
ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿ
ಸರ್ಕಾರ ಸಾಗರದ ಎರಡೂ ಸರ್ಕಾರಿ ಆಸ್ಪತ್ರೆಗಳಿಗೆ ಒಂದೂವರೆ ಕೋಟಿ ರೂ. ಅನುದಾನ ನೀಡಿದೆ. ಸಾಗರದಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ನಿಲ್ಲಿಸಲಾಗಿದೆ. ಇದನ್ನು ತಕ್ಷಣ ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡುತ್ತೇನೆ. ಎಲ್ಲ ಕಡೆಗಳಲ್ಲಿಯೂ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದಾದರೂ ಕೆಎಫ್‌ಡಿ ಪ್ರಕರಣಗಳನ್ನು ಮಣಿಪಾಲಿಗೆ ದಾಖಲಿಸಿದರೆ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.