More

    ರಾಜ್ಯದಲ್ಲಿ ಕೃಷಿ ಸಾಲ ಪ್ರಮಾಣ ಹೆಚ್ಚಳ: ಸಹಕಾರಿ ಬ್ಯಾಂಕ್​ಗಳಿಗೆ ಹೆಚ್ಚಿನ ರೈತರು ಮೊರೆ

    ಬೆಂಗಳೂರು:ರಾಜ್ಯದ ಸಹಕಾರಿ ಬ್ಯಾಂಕ್​ಗಳಲ್ಲಿ ಕೃಷಿ ಸಂಬಂಧಿಸಿದ ಚಟುವಟಿಕೆಗೆ ಸಾಲ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳುತ್ತಿದೆ.

    2004-05ರಲ್ಲಿ 6,70,815 ರೈತರಿಂದ ಒಟ್ಟು 1,188 ಕೋಟಿ ರೂ.ಸಾಲ ತೆಗೆದುಕೊಂಡಿದ್ದರು. ಕಳೆದ 20 ವರ್ಷದಲ್ಲಿ ಇದರ ಸಂಖ್ಯೆ 10 ಪಟ್ಟು ಹೆಚ್ಚಾಗಿದ್ದು, 2023-24ರಲ್ಲಿ ರಾಜ್ಯಾದ್ಯಂತ 19,63,962 ರೈತರಗಳಿಂದ ಒಟ್ಟು 15,900 ಕೋಟಿ ರೂ.ಸಾಲ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್​ಗಳಗಿಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್​ ಸೇರಿ ವಿವಿಧ ಸಹಕಾರಿ ಬ್ಯಾಂಕ್​ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೀಘಾವಧಿ ಸಾಲಗಿಂತ ಮಧ್ಯಮಾವಧಿ ಕೃಷಿ ಸಾಲಕ್ಕೆ ಮೊರೆ ಹೋಗುವಂತಾಗಿದೆ.ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟರೆ ಅದರ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು, ರೈತರ ನೆರವಿಗೆ ಬರುತ್ತಿವೆ. ಅದರಂತೆ, ವರ್ಷದಿಂದ ವರ್ಷಕ್ಕೆ ಬಡ್ಡಿ ಮನ್ನಾ ಅನುದಾನವೂ ಹೆಚ್ಚಳವಾಗುತ್ತಿದೆ. 2004-05ರಲ್ಲಿ 45 ಕೋಟಿ ರೂ.ಬಡ್ಡಿ ಮನ್ನಾ ಅನುದಾನವನ್ನು ಅಂದಿನ ಸರ್ಕಾರ, ಸಹಕಾರಿ ಬ್ಯಾಂಕ್​ಗಳಿಗೆ ಬಿಡುಗಡೆ ಮಾಡಿತ್ತು. 2023-24ರಲ್ಲಿ 989 ಕೋಟಿ ರೂ.ಬಡ್ಡಿ ಮನ್ನಾ ಮೊತ್ತವನ್ನು ಸರ್ಕಾರ ಪಾವತಿಸಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್​ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆದರೆ, ಕೆಲವರು ಕೆನರಾ ಬ್ಯಾಂಕ್​ ಸೇರಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕೃಷಿ ಸಾಲ ಪಡೆಯುತ್ತಿದ್ದಾರೆ. ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿಯ ಕೃಷಿ ಸಾಲದ ಮಿತಿ ಹೆಚ್ಚಿಸಿರುವುದು, ಸಾಲ ಕಟ್ಟರೆ ಬಡ್ಡಿ ಮನ್ನಾ ಮಾಡುವುದು ಸೇರಿ ಇತರೆ ಅನುಕೂಲಕರ ನಿಯಮಗಳಿಂದ ಸಾಕಷ್ಟು ರೈತರು, ಸಹಕಾರಿ ಬ್ಯಾಂಕ್​ಗಳಲ್ಲಿ ಬೆಳೆ ಸಾಲಕ್ಕೆ ಅರ್ಜಿ ಹಾಕುತ್ತಿದ್ದಾರೆ. ಕೃಷಿ ಸಂಬಂಧಿತ ಸಾಲ ಕಂತುಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರದ ಹೊರಡಿಸಿರುವ ಆದೇಶದಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಸಾವಿರಾರು ರೈತರು ಸಾಲದ ಕಂತು ಪಾವತಿಸಿ ಸುಸ್ತಿ ಸಾಲದಿಂದ ಹೊರಬಂದಿದ್ದಾರೆ.

    ಕಿರುತೆರೆ ನಟಿ ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ ನಲ್ಲಿ ಇಂಥದ್ದೆಲ್ಲಾ ಎದುರಿಸಬೇಕಾಯಿತು ಈ ಚೆಲುವೆ!

    ರಾಷ್ಟ್ರೀಕೃತ ಸಾಲದ ಬಡ್ಡಿಯೂ ಮನ್ನಾ ಆಗಲಿ:
    ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲದ ಕಂತು ಕಟ್ಟರೆ ಬಡ್ಡಿ ಮನ್ನಾ ಮಾಡುವಂತೆ ರಾಜ್ಯಾದ್ಯಂತ ಹಲವು ರೈತರುಗಳಿಂದ ಕೂಗು ಎಬ್ಬಿದೆ. ಸಾವಿರಾರು ರೈತರು ಹತ್ತಾರು ವರ್ಷಗಳಿಂದ ಪಡೆದಿರುವ ಸಾಲ ಕಟ್ಟಲಾಗದೆ ಸಮುದ್ರದಲ್ಲಿ ದಡದಲ್ಲಿ ಬಿದ್ದಿರುವ ಮೀನುನಂತೆ ಒದ್ದಾಡುವಂತಾಗಿದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಸಾಲದ ಮೇಲಿನ ಬಡ್ಡಿ ಏರುಗತಿಯಲ್ಲಿ ಸಾಗಿ ಇನ್ನಷ್ಟು ಚಿಂತಿಸುವಂತಾಗಿದೆ. ಏಳೆಂಟು ವರ್ಷಗಳಿಂದ ಬಾಕಿ ಉಳಿದಿರುವ 50 ಸಾವಿರ ರೂ.ಸಾಲದ ಮೇಲಿನ ಬಡ್ಡಿ ಏರಿಕೆಗೊಂಡು 2 ಲಕ್ಷ ರೂ.ಗೆ ತಲುಪಿದೆ. ಅದೇರೀತಿ, 2 ಲಕ್ಷ ರೂ.ಸಾಲವು ಬಡ್ಡಿ ಸೇರಿ 4 ಲಕ್ಷ ರೂ.ಗೆ ಏರಿದರೆ, 4 ಲಕ್ಷ ರೂ.ಸಾಲವು ಬಡ್ಡಿ ಸೇರಿ 6 ಲಕ್ಷ ರೂ.ಗೆ ಹೆಚ್ಚಳವಾಗಿದೆ. ಪ್ರತಿ ವರ್ಷವೂ ಸ್ವಲ್ಪವನ್ನಾದರೂ ಸಾಲ ತೀರಿಸಲು ರೈತರು ಸಾಕಷ್ಟು ಪ್ರಯತ್ನಪಟ್ಟರೂ ಮಳೆ ಕೊರತೆ, ಬೆಳೆ ಹಾನಿ,ಸೂಕ್ತ ಬೆಲೆ ಸಿಗದೆ ಸೇರಿ ಒಂದಿಲ್ಲೊಂದು ಸಮಸ್ಯೆಯಿಂದ ಸಾಧ್ಯವಾಗದಂತಾಗಿದೆ.

    ರೈತರ ಆತ್ಮಹತ್ಯೆ ಸಂಖ್ಯೆಯೂ ಹೆಚ್ಚಳ:
    ಮಳೆ ಕೊರತೆಯಿಂದ ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲಾಗಿಸಿದೆ. ಹೀಗಿದ್ದರೂ ಕೆಲ ರಾಷ್ಟ್ರೀಕೃತ ಬ್ಯಾಂಕ್​ಗಳು ಸಾಲ ಮರುಪಾವತಿಸುವಂತೆ ರೈತರಿಗೆ ಆಗಾಗ್ಗೆ ನೋಟಿಸ್​ ನೀಡಿ ಕಿರುಕುಳ ನೀಡುತ್ತಿವೆ. ಕೆಲ ರೈತರು ಸಾಲ ಕಟ್ಟಲಾಗದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. 2022ರ ಏ.1ರಿಂದ 2023ರ ಮಾ.31ರವರೆಗೆ ರಾಜ್ಯಾದ್ಯಂತ ಒಟ್ಟು 968 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, 2023ರ ಏ.1ರಿಂದ 2023ರ ಸೆ.9ರವರೆಗೆ ಒಟ್ಟು 251 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಹಾವೇರಿಯಲ್ಲಿ 38, ಚಿಕ್ಕಮಗಳೂರು 15, ಬೆಳಗಾವಿ 29, ವಿಜಯಪುರ 12, ಯಾದಗಿರಿ 19, ಬೀದರ್​ 7, ಕಲಬುರಗಿ 11 ಮತ್ತು ಗದಗದಲ್ಲಿ 4 ಕೇಸ್​ಗಳು ವರದಿಯಾಗಿವೆ. ಹೀಗಾಗಿ, ಸಹಕಾರ ಬ್ಯಾಂಕ್​ಗಳ ಮಾದರಿಯಂತೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಪಡೆದಿರುವ ವಿವಿಧ ರೀತಿಯ ಕೃಷಿ ಸಾಲ ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದರೆ ಲಾಂತರ ರೈತರಿಗೆ ಅನುಕೂಲವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts