More

    ತ್ಯಾಜ್ಯದಿಂದ ಆದಾಯ, ಯಶಸ್ಸಿನತ್ತ ಘನತ್ಯಾಜ್ಯ ನಿರ್ವಹಣಾ ಘಟಕ

    ಅನ್ಸಾರ್ ಇನೋಳಿ ಉಳ್ಳಾಲ

    ಸ್ವಚ್ಛ ಗ್ರಾಮ ಪರಿಕಲ್ಪನೆಯೊಂದಿಗೆ ವರ್ಷದ ಹಿಂದೆ ಬಾಳೆಪುಣಿ ಗ್ರಾಮ ಪಂಚಾಯಿತಿ ಆರಂಭಿಸಿದ್ದ ಘನತ್ಯಾಜ್ಯ ನಿರ್ವಹಣಾ ಘಟಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮೂರು ತಿಂಗಳಲ್ಲೇ ಒಣಕಸದಿಂದ ಆದಾಯ ಬಂದಿದ್ದು, ತ್ಯಾಜ್ಯ ಸಾಗಾಟಕ್ಕೂ ಹೊಸ ವಾಹನ ಬಂದಿದೆ.

    ಜನಶಿಕ್ಷಣ ಟ್ರಸ್ಟ್ ನಡೆಸಿದ ನಿರಂತರ ಸ್ವಚ್ಛತಾ ಅಭಿಯಾನ ಘಟಕ ನಿರ್ಮಾಣಕ್ಕೆ ಪ್ರೇರಣೆಯಾಯಿತು. ಕುರ್ನಾಡುವಿನಲ್ಲಿ ಆರಂಭಗೊಂಡಿದ್ದ ಜಿಲ್ಲೆಯ ಪ್ರಥಮ ಘನತ್ಯಾಜ್ಯ ಘಟಕ ನಿರ್ವಹಣೆಯಲ್ಲಿ ವೈಫಲ್ಯ ಕಂಡರೂ ಬಾಳೆಪುಣಿ ಪಂಚಾಯಿತಿ ಆವರಣದಲ್ಲೇ ಘಟಕ ನಿರ್ಮಿಸಿ ಇತರ ಪಂಚಾಯಿತಿಗಳಿಗೆ ಮಾದರಿ ಎನಿಸಿತು. ಮೊದಲು ಘಟಕಕ್ಕಾಗಿ ನಟ್ಟಿಹಿತ್ಲುವಿನಲ್ಲಿ 50 ಸೆಂಟ್ಸ್ ಜಮೀನು ಗುರುತಿಸಿದ್ದರೂ ವಿರೋಧ ಎದುರಾದ ಕಾರಣ ಘಟಕ ಮರೀಚಿಕೆ ಎಂಬ ಹಂತ ತಲುಪಿತು.

    ಸಹಕಾರಿ ಸಂಘದಡಿ ನೋಂದಣಿ: ಈ ಸಂದರ್ಭ ಜನಶಿಕ್ಷಣ ಟ್ರಸ್ಟ್, ಪಂಚಾಯಿತಿ ಪ್ರತಿನಿಧಿಗಳು, ಅಧಿಕಾರಿ ವರ್ಗ ಉಡುಪಿ ಜಿಲ್ಲೆಯ ವಂಡ್ಸೆಯಲ್ಲಿ ಮಾಹಿತಿ ಪಡೆದು ಬಾಳೆಪುಣಿಯಿಂದ ಐವರು ಮಹಿಳೆಯರನ್ನು ತರಬೇತಿ ಕಳುಹಿಸಿ ಘಟಕ ಆರಂಭಿಸಿತು. ಇದರಿಂದ ಆವರೆಗೆ ಕೇವಲ ಕಸವಾಗಿದ್ದ ವಸ್ತುಗಳು ಸಂಪನ್ಮೂಲವಾಗಿ ಪರಿವರ್ತನೆಯಾಗತೊಡಗಿವೆ. ಬಾಪು ಘನತ್ಯಾಜ್ಯ ಘಟಕ ಹೆಸರಲ್ಲಿ 10 ಪದಾಧಿಕಾರಿಗಳ ಮುತುವರ್ಜಿಯಿಂದ ನಡೆಯುತ್ತಿರುವ ಘಟಕ, ಸಹಕಾರಿ ಸಂಘದಡಿ ನೋಂದಣಿಗೊಂಡಿರುವ ಜಿಲ್ಲೆಯ ಮೊದಲ ಘಟಕವಾಗಿಯೂ ಹೆಮ್ಮೆ ಹೊಂದಿದೆ.

    ಕಳೆದ ವರ್ಷ ಜನವರಿಯಲ್ಲಿ ಘಟಕ ಆರಂಭಗೊಂಡರೂ ಎರಡು ತಿಂಗಳಲ್ಲೇ ಕರೊನಾ ಲಾಕ್‌ಡೌನ್‌ನಿಂದಾಗಿ ಬಂದ್ ಆಯಿತು. ಈ ವರ್ಷ ಮತ್ತೆ ಜನವರಿಯಲ್ಲಿ ಆರಂಭಗೊಂಡಿದ್ದು, ಒಣಕಸದಿಂದ ತಿಂಗಳಿಗೆ ಸರಾಸರಿ 10 ಸಾವಿರದಂತೆ ಮೂರು ತಿಂಗಳಲ್ಲಿ 30 ಸಾವಿರ ರೂ. ಆದಾಯ ಗಳಿಸಿದೆ. ಇದರ ಜತೆ ಪ್ರತಿ ಮನೆಯಿಂದ 50 ರೂ. ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಘಟಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

    ಬಂತು ಸ್ವಂತ ವಾಹನ: ಘಟಕ ಆರಂಭಗೊಂಡ ವರ್ಷದಲ್ಲೇ 5.35 ಲಕ್ಷ ರೂ. ಮೌಲ್ಯದ ಹೊಸ ವಾಹನವೂ ಬಂದಿದೆ. ಸರ್ಕಾರದ 4.16 ಲಕ್ಷ ರೂ. ಮತ್ತು ಉಳಿದ ಹಣ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಿಂದ ಭರಿಸಲಾಗಿದೆ. ಇಲ್ಲೀಗ 25 ಬಗೆಯ ಕಸ ವಿಂಗಡಿಸಿ ಸಂಪನ್ಮೂಲವಾಗಿ ಪರಿವರ್ತಿಸಲಾಗಿದೆ. ವಾರ್ಡ್‌ಗಳಲ್ಲಿ ಸಭೆ ನಡೆಸಿ ಜಾಗೃತಿ, ಮನೆಯಲ್ಲೇ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಬಾಟಲಿಯಲ್ಲಿ ತುಂಬಿಸಿಡುವ ಇಕೋ ಬ್ರಿಕ್ ಯೋಜನೆ, ಯಂತ್ರ ಖರೀದಿಗೂ ಪಂಚಾಯಿತಿ ಯೋಜನೆ ರೂಪಿಸಿದೆ.

    ಸ್ವಚ್ಛ ಬಾಳೆಪುಣಿ ಕನಸಿನೊಂದಿಗೆ ಬಾಪು ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಸಮಿತಿ ಗ್ರಾಮದ ಪ್ರತಿ ಮನೆ, ಅಂಗಡಿ ಕಟ್ಟಡದಿಂದ ಮೂಲದಿಂದಲೇ ತ್ಯಾಜ್ಯ ಬೇರ್ಪಡಿಸಿ ಸಂಗ್ರಹಿಸಿ ಸಂಪನ್ಮೂಲವಾಗಿಸಿ ಆದಾಯ ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಪ್ರಯತ್ನ ಅತ್ಯಂತ ಯಶಸ್ವಿಯಾಗುವ ನಿರೀಕ್ಷೆ ಇದೆ. ತ್ಯಾಜ್ಯದ ಸಮರ್ಪಕ ವಿಂಗಡಣೆ, ವಾಸನೆ ಮುಕ್ತ ಘಟಕ ನಿರ್ವಹಣೆ ನಮ್ಮ ಸಂಕಲ್ಪ.

    ಸುನೀಲ್ ಕುಮಾರ್
    ಪಿಡಿಒ, ಬಾಳೆಪುಣಿ ಗ್ರಾಪಂ

    ಗ್ರಾಮದಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನಶಿಕ್ಷಣ ಟ್ರಸ್ಟ್ ಮಾರ್ಗದರ್ಶನದಲ್ಲಿ ಗ್ರಾಮದ ಗಣ್ಯರು ಹಾಗೂ ಇತರರ ಸಹಕಾರದಲ್ಲಿ ಪಂಚಾಯಿತಿ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಕಸವನ್ನು ಸಂಪನ್ಮೂಲವಾಗಿ ಕಂಡಿದ್ದು ಇತರ ಗ್ರಾಮಗಳಿಗೂ ಮಾದರಿಯಾಗಿದೆ.

    ಇಸ್ಮಾಯಿಲ್ ಬಾಳೆಪುಣಿ
    ಸ್ವಚ್ಛತಾ ಸೇನಾನಿ

    ನಮ್ಮ ಗ್ರಾಮವನ್ನು ಸ್ವಚ್ಛವಾಗಿಡಬೇಕೆನ್ನುವ ಕನಸಿಗೆ ಗ್ರಾಮಸ್ಥರ ಸ್ಪಂದನೆ ಸಿಗುತ್ತಿದೆ. ಘಟಕ ಆರಂಭವಾದಾಗಲೇ ಕರೊನಾ ಬಂತು, ಮತ್ತೆ ಆರಂಭಿಸುವಾಗ ಪಂಚಾಯಿತಿ ಚುನಾವಣೆ ಬಂದಿದೆ. ನೂತನ ಪಂಚಾಯಿತಿ ಆಡಳಿತದಿಂದ ಹೆಚ್ಚಿನ ಸಹಕಾರ ಸಿಕ್ಕರೆ ಘಟಕವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕನಸು ಇದೆ.

    ಇಬ್ರಾಹಿಂ ತಪಸ್ಯ
    ಅಧ್ಯಕ್ಷ, ಬಾಪು ಘನತ್ಯಾಜ್ಯ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts