

ಕೋಟ: ವಡ್ಡರ್ಸೆ ಗ್ರಾಪಂ ಹಾಗೂ ಸಾಲಿಗ್ರಾಮ ಪಪಂ ವ್ಯಾಪ್ತಿಗೆ ಹೊಂದಿಕೊಂಡಿರುವ ಚಿತ್ರಪಾಡಿ ಮತ್ತು ಉಪ್ಲಾಡಿ ಪರಿಸರದ ಹೊಳೆಯಲ್ಲಿ ಮರಳುಗಾರಿಕೆ ನಡೆಸುವವರ ವಿರುದ್ಧ ಗ್ರಾಮಸ್ಥರ ಹೋರಾಟ ಮುಂದುವರೆದಿದ್ದು, ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯಾಡಳಿತ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.
ಕಳೆದ ಸಾಕಷ್ಟು ದಿನಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಗ್ರಾಮಸ್ಥರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಸ್ಥಳಕ್ಕೆ ಗಣಿ ಇಲಾಖೆ ಸಂಧ್ಯಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಗ್ರಾಮಸ್ಥರ ಹಾಗೂ ಸ್ಥಳೀಯಾಡಳಿತ, ಇಲಾಖಾಧಿಕಾರಿಗಳ ಮಧ್ಯ ವಾಕ್ ಸಮರ ನಡೆಯಿತು.
ಪಪಂಗೆ ಮನವಿ: ಮರಳುಗಾರಿಕೆ ನಡೆಯುವ ಸಾಲಿಗ್ರಾಮ ಪಪಂ ವ್ಯಾಪ್ತಿ ಹೊಂದಿರುವ ಚಿತ್ರಪಾಡಿ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದಂತೆ ಉಪ್ಲಾಡಿ ಗ್ರಾಮಸ್ಥರು ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್‌ಗೆ ಮನವಿ ನೀಡಿದರು. ಗ್ರಾಮಸ್ಥರ ಪರವಾಗಿ ವಿನಾಯಕ ಭಟ್, ಅಶೋಕ್ ಶೆಟ್ಟಿ, ಶಿವರಂಜನಿ, ಶಿವಾನಂದ ನಾಯರಿ, ಭೋಜ ಹೆಗ್ಡೆ, ವಸಂತ ಶೆಟ್ಟಿ, ಗೀತಾ ಆನಂದ್, ಗ್ರಾಪಂ ವಡ್ಡರ್ಸೆ ಅಧ್ಯಕ್ಷ ಲೋಕೇಶ್ ಕಾಂಚನ್, ಸದಸ್ಯರಾದ ಭಾಸ್ಕರ್ ಪೂಜಾರಿ, ಪಿಡಿಒ ಉಮೇಶ್, ಕೋಟ ಠಾಣೆ ಅಧಿಕಾರಿಗಳು ಇದ್ದರು.