More

    ಗ್ರಾಪಂನಲ್ಲೇ ಸೋಲಾರ್ ಘಟಕ

    ಬೆಳಗಾವಿ: ಹಳ್ಳಿಗಳ ಸಮಗ್ರ ಅಭಿವೃದ್ಧಿಗಾಗಿ ಗ್ರಾಪಂಗಳಿಗೆ ಸರ್ಕಾರ ನೀಡಿರುವ ಗಾಂಧಿ ಗ್ರಾಮ ಪುರಸ್ಕಾರ ಅನುದಾನವನ್ನೇ ಗ್ರಾಪಂ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರಶಕ್ತಿ ಘಟಕ ಅಳವಡಿಕೆಗೆ ಬಳಸಲು ಬೆಳಗಾವಿ ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ.

    ಗ್ರಾಪಂಗಳಲ್ಲಿನ ವೆಚ್ಚ ನಿಯಂತ್ರಿಸಲು, ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ಆದಾಯ ವೃದ್ಧಿಗಾಗಿ ಬೆಳಗಾವಿ ಜಿಲ್ಲೆಯ 10 ಗ್ರಾಪಂಗಳಿಗೆ ಸೌರಶಕ್ತಿ ಘಟಕ ಅಳವಡಿಸಲು ಜಿಪಂ ಮುಂದಾಗಿದೆ. ಅದರಲ್ಲಿ 6 ಗ್ರಾಪಂಗಳು ಈಗಾಗಲೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ತಲಾ 5 ಲಕ್ಷ ರೂ. ಅನುದಾನವಿದೆ. ಇನ್ನುಳಿದ 4 ಗ್ರಾಪಂಗಳಿಗೆ 14ನೇ ಹಣಕಾಸು, ಗ್ರಾಪಂನ ಒಟ್ಟು ಆದಾಯದಲ್ಲಿನ ಶೇ.50 ಅನುದಾನ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ತಿಂಗಳಿಗೆ 12 ಲಕ್ಷ ರೂ. ವಿದ್ಯುತ್ ಬಿಲ್: ಬೆಳಗಾವಿ ಜಿಲ್ಲೆಯಲ್ಲಿ 506 ಗ್ರಾಪಂಗಳಿದ್ದು, ಪ್ರತಿ ತಿಂಗಳು 10 ರಿಂದ 12 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುತ್ತಿವೆ. ಅಲ್ಲದೆ ಬಲ್ಬ್, ಕೇಬಲ್ ಇನ್ನಿತರ ಅಳವಡಿಕೆಗಾಗಿ ಮತ್ತೆ ಲಕ್ಷಾಂತರ ರೂ. ಖರ್ಚು ಮಾಡುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಪ್ರತಿ ಗ್ರಾಪಂ ಕಟ್ಟಡದ ಮೇಲೆ 4 ರಿಂದ 5 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಫಲಕ ಅಳವಡಿಸಿ, ದೈನಂದಿನ ವಿದ್ಯುತ್ ಉತ್ಪಾದಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ಇದರಿಂದ ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಶೇ. 65 ರಿಂದ 70ರಷ್ಟು ಉಳಿತಾಯವಾಗುವ ನಿರೀಕ್ಷೆ ಇದೆ. ಅಲ್ಲದೆ, ಕನಿಷ್ಠ 10 ವರ್ಷದವರೆಗೆ ವಿದ್ಯುತ್ ಸ್ವಾವಲಂಬನೆ ಸಾಧಿಸಬಹುದು ಎಂಬ ಲೆಕ್ಕಾಚಾರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳದ್ದಾಗಿದೆ.

    ಗಾಂಧಿ ಪುರಸ್ಕಾರದಿಂದ ಬಂದ ಅನುದಾನವನ್ನು ಗ್ರಾಮದಲ್ಲಿ ಇನ್ನಿತರ ಕೆಲಸಕ್ಕೆ ಬಳಸಲಾಗುತ್ತಿತ್ತು. ಬಂದ 5 ಲಕ್ಷ ರೂ. ಅನುದಾನದಲ್ಲಿ ಶಾಶ್ವತ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ ಸೌರಶಕ್ತಿ ಘಟಕ ಸ್ಥಾಪನೆಗೆ ಯೋಜನೆ ಹಮ್ಮಿಕೊಂಡಿದ್ದೇವೆ. ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ 30 ಕೆ.ವಿ. ಸಾಮರ್ಥ್ಯದ ಸೌರಶಕ್ತಿ ಘಟಕ ಅಳವಡಿಸಿದ್ದೇವೆ. ಇದರಿಂದ ಮಾಸಿಕ ವಿದ್ಯುತ್ ಬಿಲ್‌ನಲ್ಲಿ 35 ಸಾವಿರ ರೂ. ಉಳಿತಾಯ ಆಗುತ್ತಿದೆ. ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೂ ಇದು ಸಹಾಯಕವಾಗಲಿದೆ.
    | ಎಸ್.ಬಿ. ಮುಳ್ಳಳ್ಳಿ. ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ), ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts